ವಿಷಯದ ಪರಿಣಾಮ

Shrirama
Published on

ಮನುಷ್ಯನೊಬ್ಬ ವಿಷ ಕುಡಿದರೆ ಅದು ಕುಡಿದವನೊಬ್ಬನನ್ನೇ ಕೊಲ್ಲುತ್ತದೆ. ಆದರೆ ವಿಷಯವು ಗುರು-ಶಿಷ್ಯ, ಪತಿ ಪತ್ನಿ, ತಂದೆ-ಮಗ, ತಾಯಿಮಕ್ಕಳ ಬಾಂಧವ್ಯವನ್ನೇ ಕೊಲ್ಲುತ್ತದೆ, ಉದಾ : ರಾಮಾಯಣ ದಲ್ಲಿ ಬರುವ ಮಂಥರೆ, ಮಹಾಭಾರತದಲ್ಲಿ ಬರುವ ಶಕುನಿ, ಕಲ್ಯಾಣರಾಜ್ಯ ದಲ್ಲಿ ಬರುವ ಕೊಂಡಿಮಂಚಣ್ಣ, ರಾಣಿಕಿತ್ತೂರ ಚೆನ್ನಮ್ಮನ ಸಂಸ್ಥಾನದ ಸಿರಿಯನ್ನು ಹಾಳು ಮಾಡಿದ ಮಲ್ಲಪ್ಪಶೆಟ್ಟಿ, ಗುರುಸಿದ್ಧಯ್ಯ ಇತ್ಯಾದಿ. ಶ್ರೀರಾಮನ ಪಟ್ಟಾಭಿಷೇಕ ಮುಹೂರ್ತ ಸಿದ್ಧಗೊಂಡಿದೆ. ಅಯೋಧ್ಯೆ ಪುರಜನರು ಸಂಗೀತ ಸಾಹಿತ್ಯ ಸಂಭ್ರಮದಿಂದ ಉತ್ಸಾಹಗೊಂಡು ಕಾರ್ಯನಿರತರಾಗಿದ್ದಾರೆ. ಅಂಥ ಪ್ರಸಂಗದಲ್ಲಿ ಅರಮನೆಯ ದಾಸಿ ಯಾದ ಮಂಥರೆ, ಕೈಕೇಯಿ ಮನಸ್ಸನ್ನು ಒಡೆದುಬಿಟ್ಟಳು. ಕಠೋರ ನಿರ್ಧಾರವುಳ್ಳ ಕೈಕೇಯಿ ರಾಮನ ಪಟ್ಟಾಭಿಷೇಕದ ತಯಾರಿಯು ದಶರಥರಾಜನ ಕಣ್ಣೀರುಗಳಿಂದ ತೊಯ್ಯುವಂತೆ ಮಾಡಿದಳು. ಸಿಟ್ಟಿನ ಸ್ವಭಾವದ ಕೈಕೇಯಿಯು ಪತಿಯು ಕೊಟ್ಟ ಎರಡು ವರಗಳನ್ನು ಹೊರಗೆಡವಿದಳು. ಅವೆರಡರಲ್ಲಿ ಒಂದು ವರ, ರಾಮನು ಹದಿನಾಲ್ಕು ವರ್ಷ ವನವಾಸಕ್ಕೆ ಹೋಗಬೇಕು. ಎರಡನೆಯದು ಭರತನಿಗೆ ಪಟ್ಟಾಭಿಷೇಕವಾಗಬೇಕು.

ಯಕಃಶ್ಚಿತ್ತ ಒಬ್ಬ ಮಂಥರೆಯ ವಿಷಯ, ರಾಜ್ಯ-ರಾಜನ ಸಂಬಂಧವನ್ನು, ತಂದೆ ಮಕ್ಕಳ ಸಂಬಂಧವನ್ನು , ರಾಜ-ಪ್ರಜೆಗಳ ಸಂಬಂಧವನ್ನು, ಪತಿ-ಪತ್ನಿಯರ ಸಂಬಂಧವನ್ನು ಕಡಿದು ಚೆಲ್ಲಿತು. ಭರತನು ತಾಯಿಯಾದ ಕೈಕೇಯಿಯ ವಿಷಯಕ್ಕೆ ಕಿವಿಗೊಡಲಿಲ್ಲ. ರಾಜ್ಯಲಕ್ಷ್ಮಿಯನ್ನೂ ಸೇರಲಿಲ್ಲ. ಅಯೋಧ್ಯೆ ಪಟ್ಟಣಕ್ಕೆ ಬರದೇ ನಂದಿಗ್ರಾಮದಲ್ಲಿಯೇ ಉಳಿದುಕೊಂಡನು. ಅರ್ಥವಿಷ್ಟೇ, ಒಬ್ಬ ಮಂಥರೆಯ ಕಣೋಪದೇಶ ಏನೇನು ಮಾಡಿತು? ಕಿವಿಯಲ್ಲಿ ಸೇರಿದ ವಿಷ (ವಿಷಯ)ವು ಕೈಕೇಯಿಂದಾಗಿ ಇಡೀ ರಾಜ್ಯವೇ ಅಲ್ಲೋಲ ಕಲ್ಲೋಲವಾಯ್ತು. ಇಂದು ಓಣಿಗೊಬ್ಬ, ಮನೆಗೊಬ್ಬ ಮಂಥರೆಯರು ತುಂಬಿಕೊಂಡಿದ್ದಾರೆ. ಮನೆ, ಮಠ, ಸಮಾಜ ದೇಶವನ್ನೇ ಹಾಳು ಮಾಡುವವರಿದ್ದಾರೆ. ಹಾಗೇ ಶಕುನಿಗಳಿಗೂ ಕೊರತೆಯಿಲ್ಲ. ಕೊಂಡಿ ಮಂಚಣ್ಣ ನಂತಹವರೂ ಕಡಿಮೆಯೇನಿಲ್ಲ! ಬಸವಣ್ಣನಂತಹ ಮಹಾತ್ಮನನ್ನು ಗಡಿಪಾರು ಮಾಡಿಸಿದರು. ಕಲ್ಯಾಣ ರಾಜ್ಯವೇ ಛಿದ್ರ ವಿಚ್ಛಿದ್ರವಾಯ್ತು. ಸುಳ್ಳನ್ನು ಸತ್ಯ ಮಾಡುವುದಕ್ಕೆ ನಾನಾ ವೇಷ ಭಾಷೆ, ಕೃತ್ರಿಮತೆಯ ನಾಟಕವಾಡಿ ಸಂಬಂಧಗಳನ್ನೇ ಕೊಚ್ಚಿ ಹಾಕುತ್ತಾರೆ. ಇದು ವಿಷಯದ ಪರಿಣಾಮ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net