

ಬೆಂಗಳೂರು: ಬರ ಮತ್ತು ಸಾಲಬಾಧೆಯಿಂದ ಉತ್ತರ ಕರ್ನಾಟಕದ ರೈತರು ಕಂಗೆಟ್ಟಿದ್ದಾರೆ. ಇದೀಗ ತಮ್ಮ ಜೀವ ಉಳಿಸಿಕೊಳ್ಳಲು ಈಗ ಊರು ಬಿಡುವುದೊಂದೇ ದಾರಿ ಎಂಬ ಶೋಚನೀಯ ಪರಿಸ್ಥಿತಿ ಕಾಂಗ್ರೆಸ್ ಸರ್ಕಾರ ತಂದಿಟ್ಟಿದೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ವಾಗ್ದಾಳಿ ಮಾಡಿದ್ದಾರೆ.
ಸದಾ ಬಣ ರಾಜಕೀಯದಲ್ಲಿ ನಿರತವಾಗಿರುವ ಕಾಂಗ್ರೆಸ್ ಮಂತ್ರಿಗಳು ಹಾಗೂ ಶಾಸಕರು, ಎಷ್ಟು ಜನ ಡಿಸಿಎಂಗಳಿರಬೇಕು ಎಂದು ಲೆಕ್ಕಾಚಾರ ಹಾಕುವ ಬದಲು ಬರದಿಂದ ಸಂಕಷ್ಟಕ್ಕೊಳಗಾಗಿರುವ ರೈತರಿಗೆ ಏನು ಮಾಡಬೇಕು ಎಂದು ಯೋಚಿಸಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ ಎಂದಿದ್ದಾರೆ.
ಪಂಚ ರಾಜ್ಯಗಳ ಚುನಾವಣೆಗೆ ಕಲೆಕ್ಷನ್ ಮಾಡುವಲ್ಲಿರುವ ಆಸಕ್ತಿಯಲ್ಲಿ, ತೆಲಂಗಾಣ ಚುನಾವಣೆಗೆ ಪ್ರಚಾರ ಮಾಡುವಲ್ಲಿರುವ ಉತ್ಸಾಹದಲ್ಲಿ ಕೊಂಚವಾದರೂ ರಾಜ್ಯದ ರೈತರ ಬಗ್ಗೆ ಇದ್ದಿದ್ದರೆ, ಕೃಷಿ ಕಾರ್ಮಿಕರು ಇಂದು ಮನೆ ಮಠ ಬಿಟ್ಟು ಗುಳೆ ಹೋಗುವ ಪರಿಸ್ಥಿತಿ ಬರುತ್ತಿರಲಿಲ್ಲವೆಂದು ಆರ್.ಅಶೋಕ್ ಸಾಮಾಜಿಕ ಜಾಲತಾಣದಲ್ಲಿ ಸರಣಿ ಸಂದೇಶ ಹಂಚಿಕೊಂಡಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರೇ, ನಿಮ್ಮಲ್ಲಿ ನಿಜಕ್ಕೂ ಮಾನವೀಯತೆ ಇದ್ದರೆ, ರಾಜ್ಯದ ಕೃಷಿ ಕಾರ್ಮಿಕರು, ದಲಿತರು, ಪರಿಶಿಷ್ಟ ಪಂಗಡದವರು, ಹಿಂದುಳಿದವರ ಮೇಲೆ ಕಾಳಜಿ ಇದ್ದರೆ ಮೊದಲು ರಾಜ್ಯದ ಜನತೆ ಗುಳೆ ಹೋಗುವುದನ್ನು ತಪ್ಪಿಸಿ ಎಂದು ಸವಾಲೆಸೆದಿದ್ದಾರೆ.
ಎಲ್ಲದಕ್ಕೂ ಕೇಂದ್ರದತ್ತ ಬೊಟ್ಟು ಮಾಡಿ ತೋರಿಸುವುದೇ ನಿಮ್ಮ ಸಾಧನೆಯಾಗಿಬಿಟ್ಟಿದೆ. ರೈತರ ನೆರವಿಗೆ ಬರಲು ನಿಮ್ಮ ಕೈಲಾಗದಿದ್ದರೆ ರಾಜೀನಾಮೆ ಕೊಟ್ಟು ಮನೆಗೆ ಹೋಗಿ ಎಂದು ಆರ್.ಅಶೋಕ್ ಆಗ್ರಹಿಸಿದ್ದಾರೆ.