

ಚಿಕ್ಕೋಡಿ: ' ನಾವು ಎಂಟು ದಿನಗಳಿಂದ ಇಲ್ಲಿ ಸಿಲುಕಿದ್ದೀವಿ..ತಿನ್ನೋಕೆ ಅನ್ನವಿಲ್ಲ, ಕುಡಿಯೋಕೆ ನೀರಿಲ್ಲ..ಎಲ್ಲಿಗೆ ಹೋಗಿ ಸಾಯಬೇಕು..' ' ದಯವಿಟ್ಟು ಸಹಾಯ ಮಾಡಿ, ನಮ್ಮನ್ನ ಕಳಿಸಿಕೊಡಿ, ನನಗೆ ನನ್ನ ಹೆಂಡ್ತಿ ಮಕ್ಕಳನ್ನು ನೋಡಬೇಕು..ಕರ್ನಾಟಕಕ್ಕೆ ಹೋಗೋಕೆ ಬಿಡಿ...'
ಇವೆಲ್ಲ ಮಹಾರಾಷ್ಟ್ರದಿಂದ ಬಂದು ನಿಪ್ಪಾಣಿಯ ಕುಗನೊಳ್ಳಿ ಚೆಕ್ ಪೋಸ್ಟ್ ಬಳಿ ಸಿಲುಕಿರುವವರ ಹಾಸನ ಮೂಲದ ವಲಸೆ ಕಾರ್ಮಿಕರ ಸಂಕಟದ ಮಾತುಗಳು...
ಮಹಾರಾಷ್ಟ್ರದಿಂದ ಪಾಸ್ ಪಡೆದು ಬಂದಿದ್ದರೂ, ಕರ್ನಾಟಕದ ಒಳಗೆ ಪ್ರವೇಶಿಸಲು ಸಾಧ್ಯವಾಗುತ್ತಿಲ್ಲ. ಹಾಸನ ಡಿಸಿ ಒಪ್ಪಿಗೆ ಕೊಡುತ್ತಿಲ್ಲ ಎಂಬುದು ಈ ವಲಸೆ ಕಾರ್ಮಿಕರ ಆರೋಪ. ವಾಪಸ್ ಮಹಾರಾಷ್ಟ್ರಕ್ಕೆ ಹೋಗೋಣವೆಂದರೆ ಅಲ್ಲಿ ಮನೆಯಿಲ್ಲ. ಕರ್ನಾಟಕದ ಒಳಗೆ ಬಿಡುತ್ತಿಲ್ಲ. ಎಲ್ಲಿಗೆ ಹೋಗಿ ಸಾಯಬೇಕು ಎಂದು ಪ್ರಶ್ನಿಸುತ್ತಿದ್ದಾರೆ.
ಬಾರ್ಡರ್ಗೆ ಬಂದರೆ ಪೊಲೀಸರು, ನಿಮ್ಮನ್ನು ಒಳಗೆ ಕಳಿಸೋಲ್ಲ ಎನ್ನುತ್ತಾರೆ. ಕರ್ನಾಟಕ್ಕೆ ಬಿಡೋದಿಲ್ಲ ಎನ್ನೋಕೆ ನಾವೇನೂ ಕಳ್ಳತನ ಮಾಡಿಲ್ಲ, ಅಪರಾಧ ಮಾಡಿಲ್ಲ. ಈಗಿಲ್ಲ 30 ಜನ ಇದ್ದೇವೆ. ಕಾಲಿಲ್ಲದವರು ಇದ್ದಾರೆ. ಹಾರ್ಟ್ ಪೇಷೆಂಟ್ ಇದ್ದಾರೆ. ಬಿಪಿ ಶುಗರ್ ಇರೋರೂ ಇದಾರೆ. ಇಷ್ಟು ದಿನ ಕೂಲಿ ಮಾಡಿ ದುಡಿದ ಹಣದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಈಗ ಹಣವಿಲ್ಲ. ಸಣ್ಣ ಮಕ್ಕಳಿದ್ದಾರೆ. ತಿನ್ನೋಕೆ ಅನ್ನ, ಕುಡಿಯೋಕೆ ನೀರೂ ಇಲ್ಲ. ಹೀಗಾದರೆ ಬದುಕೋದು ಹೇಗೆ ಎಂದು ಅಲವತ್ತುಕೊಂಡಿದ್ದಾರೆ.
ನಾವೇನೂ ನಿಯಮ ಮೀರಿ ಕರೆಸಿಕೊಳ್ಳಿ ಎನ್ನುತ್ತಿಲ್ಲ. ಇದುವರೆಗೂ ಉಳಿದವರನ್ನು ಹೇಗೆ ಕರೆಸಿಕೊಂಡಿದ್ದಾರೋ ಹಾಗೇ ನಮ್ಮನ್ನೂ ಕರೆಸಿಕೊಳ್ಳಲಿ. ಕ್ವಾರಂಟೈನ್ ವ್ಯವಸ್ಥೆ ಮಾಡಲಿ. ತಪಾಸಣೆಯನ್ನೂ ಮಾಡಲಿ. ಆದರೆ ದಯವಿಟ್ಟು ನಮ್ಮೂರಿಗೆ ಹೋಗಲು ಬಿಡಲಿ ಎಂದು ಬೇಡಿಕೊಂಡಿದ್ದಾರೆ.
ಇದನ್ನೂ ಓದಿ: ‘ಶೂನ್ಯದಿಂದ 4.5ಲಕ್ಷದವರೆಗೆ…’ -ಇದು ಭಾರತದ ಇಚ್ಛಾಶಕ್ತಿ
ಯಾರನ್ನು ಕೇಳಿದರೂ ನಿಮ್ಮನ್ನು ನಾಳೆ ಕರೆಸಿಕೊಳ್ಳುತ್ತೇವೆ. ಡಿಸಿ ಸಹಿ ಮಾಡುತ್ತಿಲ್ಲ ಎನ್ನುತ್ತಿದ್ದಾರೆ. ಇನ್ಯಾವಾಗ ಕರೆಸಿಕೊಳ್ಳುತ್ತೀರಿ? ನಾವು ಸತ್ತಮೇಲಾ? ನಾವೇನು ತಪ್ಪು ಮಾಡಿದ್ದೇವೆಂದು ಹೀಗೆ ಮಾಡುತ್ತಿದ್ದೀರಿ ಎಂದು ಹತಾಶೆಯಿಂದ ಪ್ರಶ್ನೆ ಮಾಡಿದ್ದಾರೆ.
ಹಾಸನದ ಈ ಕೂಲಿ ಕಾರ್ಮಿಕರು ಮಹಾರಾಷ್ಟ್ರದಲ್ಲಿ ಕೆಲಸ ಮಾಡಿಕೊಂಡಿದ್ದರು. ಈಗ ಸತತವಾಗಿ ಲಾಕ್ಡೌನ್ ಮುಂದುವರಿಯುತ್ತಿರುವ ಕಾರಣ ಕೆಲಸ ವಿಲ್ಲದೆ, ವಾಪಸ್ ಕರ್ನಾಟಕಕ್ಕೆ ಬಂದಿದ್ದಾರೆ. (ದಿಗ್ವಿಜಯ ನ್ಯೂಸ್)