

ಶಿವಮೊಗ್ಗ: ಚಿತ್ರದುರ್ಗದ ಭೋವಿ ಗುರುಪೀಠದಲ್ಲಿ ಜು.20ರಂದು ಸಮಾಜದ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಅವರ ದೀಕ್ಷಾ ರಜತ ಮಹೋತ್ಸವವನ್ನು ಆಯೋಜಿಸಲಾಗಿದೆ.
ಗುರುದೀಕ್ಷೆ ತೊಟ್ಟು 25 ವಸಂತ ಪೂರೈಸಿದ್ದು, ಗುರುಪೀಠದ ಧಾರ್ಮಿಕ ವ್ಯವಸ್ಥೆಗೆ ನನ್ನನ್ನು ನಿಯೋಜನೆ ಮಾಡಿದ ಬಳಿಕ ಪ್ರಾಣಿ ಬಲಿ ತಡೆ, ಮದ್ಯಮುಕ್ತ ಗ್ರಾಮ, ಶೈಕ್ಷಣಿಕ ಜಾಗೃತಿ ಮತ್ತು ಪ್ರೋತ್ಸಾಹ ನೀಡುತ್ತ ಶ್ರೀಮಠ ಸಾಗಿದೆ. ಇದೀಗ ಮಠದ ಭಕ್ತರು ರಜತ ಮಹೋತ್ಸವಕ್ಕೆ ತಯಾರಿ ನಡೆಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಸೇರಿ ಹಲವು ಸಚಿವರು ಭಾಗವಹಿಸುವರು ಎಂದು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಮಾರಂಭದಲ್ಲಿ ಯುಪಿಎಸ್‌ಸಿ, ಕೆಎಎಸ್ ಉತ್ತೀರ್ಣರಾದವರಿಗೆ ಸನ್ಮಾನ ಸೇರಿ ವಿವಿಧ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಸಚಿವ ಶಿವರಾಜ್ ತಂಗಡಗಿ ಅಧ್ಯಕ್ಷತೆ ವಹಿಸುವರು. ಮಾಜಿ ಸಚಿವ ಅರವಿಂದ ಲಿಂಬಾವಳಿ ನೇತೃತ್ವ ವಹಿಸುವರು. ಶಿವಮೊಗ್ಗ ಜಿಲ್ಲೆಯಿಂದ 25 ಸಾವಿರ ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದರು.
ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ರವಿಕುಮಾರ್ ಮಾತನಾಡಿ, ಮಂತ್ರಾಲಯದ ಶ್ರೀ ಸುಬುಧೇಂದ್ರ ತೀರ್ಥರು, ಕನಕ ಗುರುಪೀಠದ ಜಗದ್ಗುರು ಸೇರಿ ರಾಜ್ಯದ ವಿವಿಧ ಮಠಾಧೀಶರ ಸಾನ್ನಿಧ್ಯದಲ್ಲಿ ಅದೇ ದಿನ ಬೆಳಗ್ಗೆ ಧರ್ಮ ಸಂಸತ್ ಕಾರ್ಯಕ್ರಮ ಜರುಗುವುದು. ನಂತರ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಆಯೋಜಿಸಲಾಗಿದೆ. ಇದೊಂದು ಭೋವಿ ಜನೋತ್ಸವ ಕಾರ್ಯಕ್ರಮವಾಗಲಿದ್ದು 4 ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸುವರು ಎಂದು ಹೇಳಿದರು.
ಮುಖಂಡರಾದ ವೀರಭದ್ರಪ್ಪ ಪೂಜಾರಿ, ಕೆ.ಹರ್ಷ ಭೋವಿ, ತಿಮ್ಮರಾಜು, ಕೃಷ್ಣಪ್ಪ, ಮಾರಪ್ಪ, ಜಗದೀಶ್, ಸಂತೋಷ್, ಕೌಶಿಕ್, ವೀರೇಶ್ ಸುದ್ದಿಗೋಷ್ಠಿಯಲ್ಲಿದ್ದರು.