

ನವದೆಹಲಿ: ದೇಶದ ರಾಜಧಾನಿ ದೆಹಲಿಯಲ್ಲಿ ಭಾರೀ ಮಳೆಯಾಗಲಿದ್ದು, ಭಾರತೀಯ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಿಸುವ ಮುಖೇನ ಎಚ್ಚರಿಕೆಯನ್ನು ನೀಡಿದೆ.
ದೆಹಲಿಗೆ ಯೆಲ್ಲೋ ಅಲರ್ಟ್ ನೀಡಲಾಗಿದ್ದು, ನೋಯ್ಡಾ, ಗುರುಗ್ರಾಮ್, ಲಕ್ನೋ ಮತ್ತು ಇತರ ನಗರಗಳಲ್ಲಿ ಅಧಿಕ ಮಳೆಯಾಗುವ ಸಾಧ್ಯತೆ ಹೆಚ್ಚಿದೆ ಎಂದು ಐಎಂಡಿ (Indian Metrological Department) ಇಂದಿನ ವರದಿಯಲ್ಲಿ ಉಲ್ಲೇಖಿಸಿದೆ. ಮುಂದಿನ 5-6 ದಿನಗಳಲ್ಲಿ ಮಧ್ಯಂತರ ತುಂತುರು ಮಳೆಯಾಗುವ ಮುನ್ಸೂಚನೆಯಿದ್ದರೂ, ತೀವ್ರತೆಯು ಕ್ರಮೇಣ ಕಡಿಮೆಯಾಗುವ ನಿರೀಕ್ಷೆಯಿದೆ ಎಂದು ತಿಳಿಸಿದೆ.
ಉತ್ತರಪ್ರದೇಶದ ನೋಯ್ಡಾ ಮತ್ತು ಗಾಜಿಯಾಬಾದ್‌ನಲ್ಲಿ 4 ದಿನಗಳ ಕಾಲ ಭಾರೀ ಮಳೆಯಾಗುವ ಮುನ್ಸೂಚನೆ ಇದೆ. ಲಕ್ನೋದಲ್ಲಿಯೂ ಕೂಡ ಅಧಿಕ ಮಳೆಯನ್ನು ನಿರೀಕ್ಷಿಸಲಾಗಿದೆ. ಈ ಹಿಂದೆ ಮುಂಬೈ ಮಹಾನಗರಕ್ಕೆ ಹವಾಮಾನ ಇಲಾಖೆ 'ರೆಡ್' ಅಲರ್ಟ್ ಘೋಷಣೆ ಮಾಡಿತ್ತು. ನಿರಂತರ ಮಳೆಯ ಹಿನ್ನಲೆ ಬೃಹತ್ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (BMC) ಇದೀಗ ಗುರುವಾರ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಶಾಲೆಗಳು ಮತ್ತು ಕಾಲೇಜುಗಳಿಗೆ ರಜೆ ನೀಡಿದೆ.
ಮಧ್ಯ ಮಹಾರಾಷ್ಟ್ರ ಸೇರಿದಂತೆ ಹಿಮಾಚಲ ಪ್ರದೇಶ, ಪೂರ್ವ ಮಧ್ಯಪ್ರದೇಶ, ವಿದರ್ಭ, ಛತ್ತೀಸ್‌ಗಢ, ಅರುಣಾಚಲ ಪ್ರದೇಶ, ಅಸ್ಸಾಂ, ಮೇಘಾಲಯ, ಕೊಂಕಣ-ಗೋವಾ, ದಕ್ಷಿಣ ಕರ್ನಾಟಕದ ಪ್ರತ್ಯೇಕ ಸ್ಥಳಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ,(ಏಜೆನ್ಸೀಸ್).