ಹಿಮಾಚಲದಲ್ಲಿ ಇಂದು ಕೂಡ ಭಾರಿ ಮಳೆ ಸಾಧ್ಯತೆ; ಎಂಟು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಜಾರಿ

rain
Published on

ಶಿಮ್ಲಾ: ಹಿಮಾಚಲ ಪ್ರದೇಶದಲ್ಲಿ ಪ್ರಕೃತಿ ವಿಕೋಪ ಮುಂದುವರಿದಿದೆ. ವಿವಿಧ ಜಿಲ್ಲೆಗಳಲ್ಲಿ ಭೂಕುಸಿತ ಹಾಗೂ ಮೇಘಸ್ಫೋಟದ ಘಟನೆಗಳು ವರದಿಯಾಗುತ್ತಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಜನರಿಗೆ ಪರಿಹಾರ ಸಿಗುವ ಅವಕಾಶವೇ ಕಾಣುತ್ತಿಲ್ಲ. ಇದೇ ವೇಳೆ ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ರಾಜ್ಯದ ಹಲವೆಡೆ ಭಾರಿ ಮಳೆಯಾಗುವ ಸಾಧ್ಯತೆಯಿದೆ.

ಇಂದು ಭಾರಿ ಮಳೆ ಸಾಧ್ಯತೆ

ಹವಾಮಾನ ಇಲಾಖೆ ರಾಜ್ಯದಲ್ಲಿ ಹಳದಿ ಅಲರ್ಟ್ ಘೋಷಿಸಿದೆ. ಕೆಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಸೋಲನ್, ಶಿಮ್ಲಾ, ಸಿರ್ಮೌರ್, ಮಂಡಿ, ಕುಲು, ಉನಾ, ಬಿಲಾಸ್‌ಪುರ್ ಮತ್ತು ಕಾಂಗ್ರಾ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ನಿರೀಕ್ಷೆಯಿದೆ. ಆಗಸ್ಟ್ 24 ಮತ್ತು 25 ರಂದು ಹಳದಿ ಅಲರ್ಟ್ ಘೋಷಿಸಲಾಗಿದೆ.

ಎಲ್ಲೆಲ್ಲೆ ಮಳೆಯಾಗಿದೆ?

ಕಳೆದ 24 ಗಂಟೆಗಳಲ್ಲಿ ರಾಜ್ಯದ ಬಹುತೇಕ ಪ್ರದೇಶಗಳಲ್ಲಿ ಹಗುರದಿಂದ ಸಾಧಾರಣ ಮಳೆ ದಾಖಲಾಗಿದೆ. ಜೋಗಿಂದರ್ ನಗರದಲ್ಲಿ 154 ಮಿಮೀ, ಪಾಲಂಪುರದಲ್ಲಿ 136 ಮಿಮೀ, ಸಿರ್ಮೌರ್‌ನಲ್ಲಿ 70 ಮಿಮೀ ಮಳೆ ದಾಖಲಾಗಿದೆ. ಶಿಮ್ಲಾ ನಗರದಲ್ಲಿ ಕಳೆದ 24 ಗಂಟೆಗಳಲ್ಲಿ 80 ಮಿಮೀ ಮಳೆ ದಾಖಲಾಗಿದೆ.

ಆಗಸ್ಟ್ 26ರ ನಂತರ ಪರಿಹಾರ ದೊರೆಯಲಿದೆ

ಆಗಸ್ಟ್ 26ರ ನಂತರ ರಾಜ್ಯಕ್ಕೆ ಕೊಂಚ ನೆಮ್ಮದಿ ಸಿಗಲಿದೆ ಎಂದು ಹವಾಮಾನ ಇಲಾಖೆ ಅಧಿಕಾರಿ ಸಂದೀಪ್ ಕುಮಾರ್ ಶರ್ಮಾ ತಿಳಿಸಿದ್ದಾರೆ. ಆಗಸ್ಟ್ 26 ರಿಂದ ಹವಾಮಾನ ಬದಲಾಗಲಿದೆ ಎಂದು ಹೇಳಿದರು. ಬಯಲು ಸೀಮೆಯ ಜಿಲ್ಲೆಗಳು ಮತ್ತು ಮಧ್ಯ ಪ್ರದೇಶಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗಲಿದೆ. ಆಗಸ್ಟ್ 26 ರಿಂದ 30 ರವರೆಗೆ ಅತ್ಯಂತ ಕಡಿಮೆ ಮಳೆಯ ಮುನ್ಸೂಚನೆಯಿದೆ. ಹಿಮಾಚಲ ಪ್ರದೇಶದಲ್ಲಿ ಜೂನ್‌ನಿಂದ ಆಗಸ್ಟ್‌ವರೆಗೆ ವಾಡಿಕೆಗಿಂತ ಶೇ.41ರಷ್ಟು ಹೆಚ್ಚು ಮಳೆಯಾಗಿದೆ ಎಂದು ಅವರು ಹೇಳಿದರು. ಲಾಹೌಲ್ ಸ್ಪಿಟಿಯಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. ಮತ್ತೊಂದೆಡೆ, ಶಿಮ್ಲಾದಲ್ಲಿ ಗರಿಷ್ಠ 103% ಮಳೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net