ಹಿಮಾಚಲದಲ್ಲಿ ಪ್ರವಾಹ, ಭೂಕುಸಿತ! 250ಕ್ಕೂ ಹೆಚ್ಚು ಮಂದಿ ರಕ್ಷಣೆ; ಈ ರಾಜ್ಯಗಳಲ್ಲಿ ಜು.04 ರವರೆಗೆ ವರುಣಾರ್ಭಟ | IMD

ವಿಜಯವಾಣಿ - 2025-06-29T135021.381
Published on

IMD Alert: ಕಳೆದ ವಾರದಲ್ಲಿ ಭಾರೀ ಹಾಗೂ ನಿರಂತರ ಮಳೆಗೆ ಹಿಮಾಚಲ ಪ್ರದೇಶದಲ್ಲಿ ಉಂಟಾದ ಮೇಘಸ್ಫೋಟಕ್ಕೆ ಜನರ ಜೀವ ಮತ್ತು ಜೀವನ ಸಂಪೂರ್ಣವಾಗಿ ತತ್ತರಿಸಿ ಹೋಗಿದೆ. ಪ್ರವಾಹ ಮತ್ತು ಭೂಕುಸಿತದಿಂದ ಜನರು ಹೈರಾಣಾಗಿದ್ದಾರೆ. ಭಾರೀ ಪ್ರವಾಹಕ್ಕೆ ಸಿಲುಕಿ ಐದಕ್ಕೂ ಹೆಚ್ಚು ಮಂದಿ ಮೃತಪಟ್ಟರೆ, ಹಲವರು ಕಾಣೆಯಾಗಿದ್ದಾರೆ. ಇಲ್ಲಿಯವರೆಗೆ 250ಕ್ಕೂ ಅಧಿಕ ಜನರನ್ನು ರಕ್ಷಣೆ ಮಾಡಿರುವ ರಕ್ಷಣಾ ಪಡೆಗಳು, ಕಾರ್ಯಾಚರಣೆಯನ್ನು ಮುಂದುವರೆಸಿದೆ. ಇದರ ಮಧ್ಯೆ ನಿಲ್ಲದ ವರುಣಾರ್ಭಟ ಜನರನ್ನು ಇನ್ನಷ್ಟು ಸಂಕಷ್ಟಕ್ಕೆ ದೂಡಿದೆ.

ದೇಶಾದ್ಯಂತ ಹಲವಾರು ರಾಜ್ಯಗಳಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ನೀಡಿರುವ ಭಾರತೀಯ ಹವಾಮಾನ ಇಲಾಖೆ, ಜೂನ್ 29ರಂದು ಹಿಮಾಚಲ ಪ್ರದೇಶದಲ್ಲಿ ಬಿರುಸಿನ ಮಳೆಯಾಗಲಿದೆ ಎಂದು ತಿಳಿಸಿದೆ. ಈ ಹಿನ್ನಲೆ ಹಲವಾರು ಜಿಲ್ಲೆಗಳಿಗೆ ಈಗಾಗಲೇ ಆರೆಂಜ್ ಅಲರ್ಟ್​ ಘೋಷಿಸಿದೆ. ಹಿಮಾಚಲದ ಕೆಲವು ಭಾಗಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಹಠಾತ್ ಪ್ರವಾಹ, ನದಿ ಮಟ್ಟ ಮೀರಿ ನೀರು ಹರಿಯುವಿಕೆ ಮತ್ತು ಭೂಕುಸಿತದ ಸಾಧ್ಯತೆಗಳು ಹೆಚ್ಚಿವೆ ಎಂದು ಎಚ್ಚರಿಸಿದೆ.

ಇನ್ನು ಜೂನ್ 30ರಂದು ಉತ್ತರಾಖಂಡ ಮತ್ತು ಉತ್ತರ ಪ್ರದೇಶದ ಪ್ರತ್ಯೇಕ ಸ್ಥಳಗಳಲ್ಲಿ ಅತಿ ಹೆಚ್ಚು ಮಳೆಯಾಗುವ ಮುನ್ಸೂಚನೆ ಸಿಕ್ಕಿದೆ. ಹೆಚ್ಚುವರಿಯಾಗಿ, ಜೂನ್ 28ರಿಂದ ಜುಲೈ 4ರವರೆಗೆ ಹಿಮಾಚಲ ಪ್ರದೇಶ, ಉತ್ತರಾಖಂಡ ಮತ್ತು ಉತ್ತರ ಪ್ರದೇಶದ ಹಲವೆಡೆ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ವರದಿ ಹೇಳಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net