5 ವರ್ಷದಲ್ಲಿ ತುಮಕೂರಿನ ಚಿತ್ರಣ ಬದಲು: ಅಭಿವೃದ್ಧಿ ಕಾರ್ಯಗಳ ಉದ್ಘಾಟನೆಗೆ ಸಿದ್ಧತೆ 

Published on

ತುಮಕೂರು:  ನಗರದಲ್ಲಿ ಸ್ಮಾರ್ಟ್‌ಸಿಟಿ ಹಾಗೂ ರಾಜ್ಯ ಸರ್ಕಾರದ ವಿವಿಧ ಅನುದಾನದಲ್ಲಿ ನಿರ್ಮಾಣವಾಗಿರುವ ಅಭಿವೃದ್ಧಿ ಕಾರ್ಯಗಳನ್ನು ಮಾ.5ರಂದು ಸಿಎಂ ಬಸವರಾಜ ಬೊಮ್ಮಾಯಿ ಉದ್ಘಾಟಿಸಲಿದ್ದಾರೆ ಎಂದು ಶಾಸಕ ಜಿ.ಬಿ.ಜ್ಯೋತಿಗಣೇಶ್ ತಿಳಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಮಹಾತ್ಮಗಾಂಧಿ ಸ್ಟೇಡಿಯಂ, ಕೇಂದ್ರ ಲೈಬ್ರರಿ ಸೇರಿ ವಿವಿಧ ಯೋಜನೆಗಳನ್ನು ಸಿಎಂ ಉದ್ಘಾಟಿಸಲಿದ್ದಾರೆ ಎಂದರು.

ಸಿಎಂ ಬಸವರಾಜ ಬೊಮ್ಮಾಯಿ

ಕಳೆದ ಐದು ವರ್ಷದಲ್ಲಿ ತುಮಕೂರಿನ ಚಿತ್ರಣವೇ ಬದಲಾಗಿದೆ. ಬಿ.ಎಸ್.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ ಕೊಡುಗೆಯಿಂದ ನಗರವಾಸಿಗಳಿಗೆ ಮೂಲಸೌಕರ್ಯ ಒದಗಿಸಲಾಗಿದೆ ಎಂದರು.

ನಗರದಲ್ಲಿರುವ ಏಳು ಪ್ರಾಥಮಿಕ ಆರೋಗ್ಯ ಕೇಂದ್ರದ ಜತೆಗೆ ಏಳು ನಮ್ಮ ಕ್ಲಿನಿಕ್ ನೀಡಲಾಗಿದ್ದು, ಜನರಿಗೆ ಸುಲಭವಾಗಿ ಆರೋಗ್ಯ ಸೇವೆ ಲಭ್ಯವಾಗುತ್ತಿದೆ, ಶಿಕ್ಷಣಕ್ಕೂ ಹೆಚ್ಚು ಅನುದಾನ ಹರಿದುಬಂದಿದೆ ಎಂದರು.

ಸ್ಮಾರ್ಟ್‌ಸಿಟಿ ಯೋಜನೆಯಲ್ಲಿ 50 ಕೋಟಿ ರೂ. ವ್ಯಯಿಸಿ ಅಮಾನಿಕೆರೆ, ಮರಳೂರು ಕೆರೆ ತುಂಬಿಸಿಕೊಂಡಿದ್ದೇವೆ, ಕ್ರೀಡೆಗೂ ಹೆಚ್ಚು ಅನುದಾನ ನೀಡಿದ್ದೇವೆ, ಸ್ಟೇಡಿಯಂ, ಹೈಸ್ಕೂಲ್ ಮೈದಾನ ಉನ್ನತೀಕರಣ ಮಾಡಲಾಗಿದೆ ಎಂದರು.

ಮಹಾತ್ಮಗಾಂಧಿ ಕ್ರೀಡಾಂಗಣವನ್ನು ಖಾಸಗೀಕರಣ ಮಾಡಲಾಗುತ್ತಿದೆ ಎಂದು ರಾಜಕೀಯ ಕಾರಣಕ್ಕೆ ಅಪಪ್ರಚಾರ ಮಾಡಲಾಯಿತು. ಸರ್ಕಾರದ ಮಟ್ಟದಲ್ಲಿ ತೆಗೆದುಕೊಳ್ಳುವ ನಿರ್ಧಾರಕ್ಕೆ ಸ್ಥಳೀಯ ಶಾಸಕ ಹೇಗೆ ಹೊಣೆಯಾಗುತ್ತಾರೆ ಎಂದು ಹರಿಹಾಯ್ದರು.

ರಾಜಕೀಯ ವೈರಿಗಳಿಗೆ ಬಹಿರಂಗ ಸವಾಲು ಹಾಕುತ್ತೇನೆ, ನನಗೆ ಟಿಕೆಟ್ ಸಿಗಲಿ, ಸಿಗದಿರಲಿ ನನ್ನ ಬದ್ಧತೆ ಬಿಜೆಪಿಗೆ. ಬಿಜೆಪಿ, ಮೋದಿ ಅವರ ಪರವಾಗಿ ಯಾವಾಗಲೂ ಇರುತ್ತೇನೆ. ನಾನು ಗೆಲ್ಲುತ್ತೇನೆ ಎಂದರೆ ವರಿಷ್ಠರು ಟಿಕೆಟ್ ಕೊಡುತ್ತಾರೆ, ಎಲ್ಲರನ್ನೂ ಗೌರವಿಸುತ್ತೇನೆ, ಯಾರ ವಿರುದ್ಧವೂ ದೂರು ನೀಡಿಲ್ಲ. ಜಿ.ಬಿ.ಜ್ಯೋತಿಗಣೇಶ್ ಶಾಸಕ ಟಿಕೆಟ್ ಕೊಟ್ಟರೂ ಸರಿ, ಬಿಟ್ಟರೂ ಸರಿ ನಾನು ಬಿಜೆಪಿ! ಬಿಜೆಪಿಯಲ್ಲಿ ಗೆಲ್ಲುವ ಅಭ್ಯರ್ಥಿಗೆ ಟಿಕೆಟ್ ಸಿಗಲಿದೆ, ತುಮಕೂರು ನಗರದಲ್ಲಿಯೂ ನನಗೆ ಗೆಲ್ಲುವ ಸಾಮರ್ಥ್ಯವಿದ್ದರಷ್ಟೇ ಟಿಕೆಟ್ ನೀಡುತ್ತಾರೆ. ಬಿಜೆಪಿ ಟಿಕೆಟ್ ಕೊಟ್ಟರಷ್ಟೇ ನನ್ನ ಸ್ಪರ್ಧೆ, ಯಾವುದೇ ಸನ್ನಿವೇಶದಲ್ಲಿಯೂ ನನ್ನ ಬದ್ಧತೆೆ ಬಿಜೆಪಿಗೆ ಮಾತ್ರ ಎಂದು ಜಿ.ಬಿ.ಜ್ಯೋತಿಗಣೇಶ್ ಸ್ಪಷ್ಟಪಡಿಸಿದರು. ನಾನು ಕಾಂಗ್ರೆಸ್ ಸೇರುತ್ತೇನೆ ಎಂದು ಅಪಪ್ರಚಾರ ಮಾಡಿದರು. ಈಗ ಲೋಕಸಭೆಗೆ ಎಂದು ಹೇಳುತ್ತಾರೆ, ಈ ಬಗ್ಗೆ ಎಲ್ಲಿಯೂ ಚರ್ಚೆಯೇ ನಡೆದಿಲ್ಲ, ನಾನು ಬಿಜೆಪಿ ಬಿಟ್ಟು ಹೋಗುವ ಪ್ರಶ್ನೆಯೇ ಇಲ್ಲ ಎಂದರು. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಮತ್ತೊಮ್ಮೆ ಅಧಿಕಾರಕ್ಕೆ ಬರಬೇಕು, ದೇಶಕ್ಕಾಗಿ ದುಡಿಯುತ್ತಿರುವ ನರೇಂದ್ರಮೋದಿ ಅವರ ಪರವಾಗಿ ನಾವಿರಬೇಕು, ರಾಜಕೀಯ ವೈರಿಗಳು ಹಬ್ಬಿಸುವ ವದಂತಿಗಳಿಗೆ ಕಿವಿಕೊಡಬಾರದು ಎಂದರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಗರ ಕ್ಷೇತ್ರದಿಂದಲೂ ಸಾಕಷ್ಟು ಜನರು ಟಿಕೆಟ್ ಬಯಸಿರಬಹುದು, ಯಾರಿಗೆ ಗೆಲ್ಲುವ ಸಾಮರ್ಥ್ಯವಿದೆಯೋ ಅವರಿಗೆ ಟಿಕೆಟ್ ಸಿಗಲಿದೆ. 2018ರಲ್ಲಿ ಇದಕ್ಕಿಂತಲೂ ಹೆಚ್ಚು ವಿರೋಧದ ನಡುವೆಯೂ ಚುನಾವಣೆಯಲ್ಲಿ ಗೆದ್ದು ಅಭ್ಯಾಸವಿದೆ ಎಂದು ಬಹಿರಂಗ ಸವಾಲೆಸೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net