

ಶಿವಮೊಗ್ಗ: ನಿರ್ಮಲ ತುಂಗಭದ್ರಾ ಅಭಿಯಾನಕ್ಕೆ ಭಾರತೀಯ ವೈದ್ಯಕೀಯ ಸಂಘ(ಐಎಂಎ) ಶಿವಮೊಗ್ಗ ಶಾಖೆಯಿಂದ ಪೂರ್ಣ ಸಹಕಾರ ನೀಡಲಾಗುವುದು ಎಂದು ಐಎಂಎ ಜಿಲ್ಲಾಧ್ಯಕ್ಷ ಡಾ. ಎಸ್.ಶ್ರೀಧರ್ ಹೇಳಿದರು.
ಶುದ್ಧ ನೀರು ಮನುಷ್ಯನಿಗೆ ಅತಿಮುಖ್ಯ. ಒಳಚರಂಡಿ ನೀರು ನದಿ ಸೇರುವುದರಿಂದ ಕುಡಿಯುವ ನೀರು ಕಲುಷಿತಗೊಳ್ಳುತ್ತಿದೆ. ಅದರ ಸೇವನೆಯಿಂದ ಅತಿಸಾರ, ಕರುಳುಬೇನೆ, ಕಾಮಾಲೆ, ವಿಷಮ ಶೀತಜ್ವರ ಮೊದಲಾದ ಸೋಂಕುಗಳು ಜನರನ್ನು ಬಾಧಿಸುತ್ತವೆ. ಪ್ಲಾಸ್ಟಿಕ್ ತ್ಯಾಜಗಳು ನದಿ ಸೇರುತ್ತಿವೆ. ಅದರಿಂದ ಬಿಡುಗಡೆಗೊಳ್ಳುವ ಮೈಕ್ರೋ ಪ್ಲಾಸ್ಟಿಕ್ ಅಂಶವು ಕ್ಯಾನ್ಸರ್ ಒಳಗೊಂಡಂತೆ ನಾನಾ ಆರೋಗ್ಯ ಸಮಸ್ಯೆಗಳನ್ನು ತಂದಿಡುತ್ತದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಆತಂಕ ವ್ಯಕ್ತಪಡಿಸಿದರು.
ರಾಸಾಯನಿಕಗಳ ದೀರ್ಘಕಾಲಿಕ ಸೇವನೆ, ನರ ಮತ್ತು ಮಿದುಳಿನ ಸಮಸ್ಯೆಗಳಾದ ಮರೆವಿನ ಕಾಯಿಲೆಗಳಿಗೆ ಕಾರಣವಾಗಬಹುದು. ಇವೆಲ್ಲವನ್ನೂ ನಾವು ಅಭಿಯಾನದ ವೇಳೆ ಸಾರ್ವಜನಿಕರಿಗೆ ಅರಿವು ಮೂಡಿಸುತ್ತೇವೆ. 400 ಕಿ.ಮೀ. ಪಾದಯಾತ್ರೆಯ ಉದ್ದಕ್ಕೂ ಸ್ಥಳೀಯ ಐಎಂಎ ಸದಸ್ಯರು ಪಾಲ್ಗೊಂಡು ವೈದ್ಯಕೀಯ ಅರಿವು ಮೂಡಿಸುವರು ಎಂದರು. ಪ್ರಮುಖರಾದ ಡಾ. ವಿನಯಾ ಶ್ರೀನಿವಾಸ್, ಡಾ. ರಾಜಾರಾಮ್, ಡಾ. ಎಲ್.ಕೆ.ಶ್ರೀಪತಿ ಸುದ್ದಿಗೋಷ್ಠಿಯಲ್ಲಿದ್ದರು.