ವಾರ್ನಿಂಗ್‌ಗೆಲ್ಲ ನಾನು ಹೆದರುವವನಲ್ಲ, ನೋಟಿಸ್ ಕೊಡಲಿ ಬಿಡಿ

KN Rajanna- CONG
Published on

ಬೆಂಗಳೂರು: ಕಾಂಗ್ರೆಸ್‌ನಲ್ಲಿ ಸಿಎಂ ಬದಲಾವಣೆ ಹಾಗೂ ಹೆಚ್ಚುವರಿ ಡಿಸಿಎಂ ವಿಚಾರದಲ್ಲಿ ಟೀಕೆ-ಟಿಪ್ಪಣಿ ತಾರಕಕ್ಕೇರಿದೆ.

ಈ ವಿಚಾರದ ಬಗ್ಗೆ ಮಾತನಾಡುವವರಿಗೆ ನೋಟಿಸ್ ಕೊಡುವುದಾಗಿ ಡಿಸಿಎಂ ಡಿ.ಕೆ.ಶಿವಕುಮಾರ್ ಎಚ್ಚರಿಸಿದರೆ ಸಹಕಾರ ಸಚಿವ ಕೆ.ಎನ್.ರಾಜಣ್ಣ ಡೋಂಟ್ ಕೇರ್ ಎಂದಿದ್ದಾರೆ.

ಬಾಯಿಗೆ ಬೀಗ ಹಾಕಿಕೊಳ್ಳಬೇಕು ಎಂದರೆ ನಾನು ಹೆದರುತ್ತೇನಾ? ವಾರ್ನಿಂಗ್‌ಗೆಲ್ಲ ನಾನು ಹೆದರುವವನಲ್ಲ. ಡಿಕೆಶಿ ನೋಟಿಸ್ ಕೊಡಲಿ ಬಿಡಿ, ಕೊಟ್ಟ ಮೇಲೆ ನಾನು ಮಾತನಾಡುತ್ತೇನೆ ಎಂದು ತಿರುಗೇಟು ನೀಡಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾರ್ವಜನಿಕವಾಗಿ ವಿವಾದ ಆಗಬಾರದು ಎಂದು ಅವರು ಹೇಳಿರಬಹುದು. ಅದಕ್ಕೆ ನಾನು ಒಪ್ಪುತ್ತೇನೆ. ಬೇರೆಯವರು ಒಪ್ಪಬಹುದು. ಎಲ್ಲರೂ ಸುಮ್ಮನಿದ್ದರೆ ನಾನೂ ಸುಮ್ಮನಿರುತ್ತೇನೆ. ನಾವು ಡಿಸಿಎಂ ಬಗ್ಗೆ ಹೇಳಿದರೆ ಏನು ತಪ್ಪಾಗುತ್ತದೆ? ನಾವು ಕೇಳಬಾರದೆ? ನಾವು ಕೇಳಿದ್ದೇ ತಪ್ಪಾಗುತ್ತದೆಯೇ? ಕೇಳಿದ್ದೇ ತಪ್ಪು ಎಂದರೆ ಯಾವುದೇ ಕ್ರಮ ತೆಗೆದುಕೊಂಡರೂ ಎದುರಿಸಲು ನಾನು ತಯಾರಿದ್ದೇನೆ ಎಂದು ಡಿ.ಕೆ.ಶಿವಕುಮಾರ್‌ಗೆ ಸವಾಲು ಹಾಕಿದರು.

ಅಧಿಕಾರಕ್ಕೆ ನಾನು ಅಂಟಿಕೊಂಡಿಲ್ಲ

ಡಿಕೆಶಿ ವಾರ್ನಿಂಗ್‌ಗೆ ನಾನು ಕೇಳ್ತೀನಾ? ನಾನು ನಾನೇ, ರಾಜಣ್ಣ ರಾಜಣ್ಣನೇ. ಅಧಿಕಾರಕ್ಕೆ ನಾನು ಅಂಟಿಕೊಳ್ಳುವುದಿಲ್ಲ. ಬಾಯಿಗೆ ಬೀಗ ಹಾಕಿಕೊಳ್ಳಬೇಕು ಎಂದು ಡಿಕೆಶಿ ಹೇಳಿದ್ರೆ ಎಲ್ಲರೂ ಬಾಯಿಗೆ ಬೀಗ ಹಾಕಿಕೊಳ್ಳಬೇಕು. ಅವರು ಹೇಳುವವರನ್ನು ಹೇಳುವುದಕ್ಕೆ ಬಿಟ್ಟು ಬರೀ ನಮಗೆ ಹೇಳಿದರೆ ನಾನು ಕೇಳುವವನಲ್ಲ ಎಂದು ಟಾಂಗ್ ಕೊಟ್ಟರು.

ಸ್ವಾಮೀಜಿ ಹೇಳಿದ ಹಾಗೆ ಸಿಎಂ ಮಾಡಲಾಗುತ್ತಾ?

ಸಿಎಂ ಸಿದ್ದರಾಮಯ್ಯ ಅವರು ರಾಜೀನಾಮೆ ಕೊಟ್ಟು ಡಿ.ಕೆ.ಶಿವಕುಮಾರ್ ಅವರನ್ನು ಸಿಎಂ ಮಾಡಿ ಎಂದು ಒಬ್ಬರು ಅಭಿಪ್ರಾಯಪಟ್ಟರೆ, ಅದನ್ನ ಕೇಳಿಕೊಂಡು ನಾವು ಸುಮ್ಮನೆ ಇರಲು ಆಗುತ್ತದೆಯೆ? ಸಿದ್ದರಾಮಯ್ಯರನ್ನು ಅವರು ಸಿಎಂ ಮಾಡಿದ್ರಾ? ಸಿದ್ದರಾಮಯ್ಯ ಅವರನ್ನು ಸಿಎಂ ಮಾಡಿರೋದು ಕಾಂಗ್ರೆಸ್ ಶಾಸಕರ ಅಭಿಪ್ರಾಯ ಪಡೆದು ಹೈಕಮಾಂಡ್ ಮಾಡಿದೆ. ಹಾಗೆ ಸಿಎಂ ಮಾಡೋದಾದ್ರೆ ಶಾಮನೂರು ಶಿವಶಂಕರಪ್ಪ ಅವರನ್ನೂ ಸಿಎಂ ಮಾಡಿ ಎಂದು ಸ್ವಾಮೀಜಿಗಳು ಹೇಳುತ್ತಾರೆ. ನಮ್ಮ ಸಮುದಾಯದ ಸ್ವಾಮೀಜಿಗಳು ಸತೀಶ್ ಜಾರಕಿಹೊಳಿ ಸಿಎಂ ಮಾಡಿ ಅಂತ ಹೇಳುತ್ತಾರೆ. ಸ್ವಾಮೀಜಿಗಳು ಹೇಳಿದ ಹಾಗೇ ಸಿಎಂಗಳನ್ನು ಮಾಡೋಕೆ ಆಗುತ್ತಾ? ಸ್ವಾಮೀಜಿ ಹೇಳಿರೋ ಹೇಳಿಕೆ ಹಿಂದುಳಿದ ವರ್ಗಗಳಿಗೆ ಮಾಡಿದ ಅವಮಾನ. ಪ್ರಜಾಪ್ರಭುತ್ವಕ್ಕೆ ಮಾಡಿರೋ ಅಪಮಾನ ಎಂದು ಚಂದ್ರಶೇಖರನಾಥ ಸ್ವಾಮೀಜಿ ವಿರುದ್ಧವೂ ವಾಗ್ದಾಳಿ ನಡೆಸಿದರು.

ಬಡವರ ಪರ ಸಿದ್ದರಾಮಯ್ಯ ಕೆಲಸ

ನಾನು ಹಗರಣ ಮಾಡಿದ್ದರೆ ತನಿಖೆ ಮಾಡಲಿ. ಬಡವರ ಪರ ಸಿದ್ದರಾಮಯ್ಯ ಕೆಲಸ ಮಾಡುತ್ತಿದ್ದಾರೆ. ಅದಕ್ಕೆ ಅವರ ಜತೆ ನಾವಿದ್ದೇವೆ ಎಂದರು.

ಎಂಪಿ ಆಗಿ ಡಿ.ಕೆ.ಸುರೇಶ್ ಒಳ್ಳೆಯ ಕೆಲಸ ಮಾಡಿದ್ದಾರೆ. ಇವರೆಲ್ಲ ಸ್ವಾಮೀಜಿಗಳು ಒಂದಾಗಿ ಅವರನ್ನು ಸೋಲಿಸಿದರು ಎಂದು ಸಚಿವ ರಾಜಣ್ಣ ಆರೋಪ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net