

BJP MLA-Worker Clash: ಪಶ್ಚಿಮ ಬಂಗಾಳದ ಪುರಾಲಿಯ ಪಟ್ಟಣದಲ್ಲಿ ಅಕ್ರಮ ಮರಳು ಗಣಿಗಾರಿಕೆ ಸಂಬಂಧ ಸ್ಥಳೀಯ ಬಿಜೆಪಿ ಶಾಸಕ ಮತ್ತು ಕಾರ್ಯಕರ್ತರ ನಡುವೆ ಪೊಲೀಸ್ ಠಾಣೆಯಲ್ಲೇ ತೀವ್ರ ಹೊಡೆದಾಟ ನಡೆದಿದ್ದು, ಪ್ರಕರಣ ಸಂಬಂಧ 19 ಮಂದಿಯನ್ನು ಬಂಧಿಸಲಾಗಿದೆ ಎಂದು ಶುಕ್ರವಾರ(ಅ. 10) ವರದಿಯಾಗಿದೆ.
ಬುಧವಾರ ತಡರಾತ್ರಿ ಪುರುಲಿಯಾ ಪಟ್ಟಣದಲ್ಲಿ ಬಿಜೆಪಿ ಕಾರ್ಯಕರ್ತ ಸೂರಜ್ ಶರ್ಮಾ ಅವರು ಅಕ್ರಮವಾಗಿ ಗಣಿಗಾರಿಕೆ ಮಾಡಿದ ಮರಳನ್ನು ಸಾಗಿಸುತ್ತಿದ್ದ ಎರಡು ಓವರ್ಲೋಡ್ ಟ್ರ್ಯಾಕ್ಟರ್ಗಳನ್ನು ತಡೆದು ಪ್ರತಿಭಟನೆ ನಡೆಸಿದ್ದರು ಎನ್ನಲಾಗಿದೆ. ಪೊಲೀಸ್ ಮತ್ತು ರಾಜಕೀಯ ರಕ್ಷಣೆಯಲ್ಲಿ ಅಕ್ರಮ ಮರಳು ವ್ಯಾಪಾರ ವ್ಯಾಪಕವಾಗಿ ನಡೆಯುತ್ತಿದೆ ಎಂದು ಆರೋಪಿಸಿ ಪ್ರತಿಭಟಿಸಿದ್ದರು ಎಂದು ವರದಿಗಳು ಉಲ್ಲೇಖಿಸಿವೆ.
ಆದರೆ ಈ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಸೂರಜ್ ಶರ್ಮಾ ಮತ್ತು ಪುರುಲಿಯಾ ಬಿಜೆಪಿ ಶಾಸಕ ಸುದೀಪ್ ಮುಖರ್ಜಿ ನಡುವೆ ತೀವ್ರ ವಾಗ್ವಾದ ನಡೆದು ಘರ್ಷಣೆ ನಡೆದಿದೆ ಎನ್ನಲಾಗಿದೆ. ಪರಸ್ಪರ ದೈಹಿಕವಾಗಿ ಮಾರಾಮಾರಿ ನಡೆದಿದ್ದು ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಘರ್ಷಣೆಯ ನಂತರ, ಪೊಲೀಸರು ಆ ಪ್ರದೇಶದಲ್ಲಿ ಅಕ್ರಮ ಮರಳು ಗಣಿಗಾರಿಕೆಯ ವಿರುದ್ಧ ತೀವ್ರ ಕಾರ್ಯಾಚರಣೆ ನಡೆಸಿ 19 ಮಂದಿಯನ್ನು ಬಂಧಿಸಿದ್ದು, ಎಲ್ಲರನ್ನು ಶುಕ್ರವಾರ ಪುರುಲಿಯಾ ಜಿಲ್ಲಾ ನ್ಯಾಯಾಲಯದ ಮುಂದೆ ಹಾಜರುಪಡಿಸಿ ವಶಕ್ಕೆ ಪಡೆದಿದ್ದಾರೆ.
ಇನ್ನೂ ಬಿಜೆಪಿ ಶಾಸಕ ಮತ್ತು ಕಾರ್ಯಕರ್ತರ ನಡುವಿನ ಹೊಡೆದಾಟ ಘಟನೆಯು ಪುರುಲಿಯಾದಲ್ಲಿನ ಬಿಜೆಪಿಯ ಸ್ಥಳೀಯ ಘಟಕದೊಳಗಿನ ಆಂತರಿಕ ಬಿರುಕುಗಳನ್ನು ಬಹಿರಂಗಪಡಿಸಿದೆ. (ಏಜೆನ್ಸೀಸ್)