

ಭದ್ರಾವತಿ: ಗೋಮಾಳದ ಜಾಗದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅನುದಾನ ಬಳಸಿಕೊಂಡು ಕೆಲ ಖಾಸಗಿ ವ್ಯಕ್ತಿಗಳು ಟ್ರಸ್ಟ್ ಅಡಿಯಲ್ಲಿ ಸಮುದಾಯ ಭವನ ನಿರ್ಮಿಸಿದ್ದಾರೆ. ಇದನ್ನು ವಿರೋಧಿಸಿ ಸ್ಥಳೀಯ ಫಿಲ್ಟರ್‌ಶೆಡ್ ನಿವಾಸಿಗಳು ಕಳೆದ ಒಂದು ವರ್ಷದಿಂದ ಪ್ರತಿಭಟನೆ ನಡೆಸುತ್ತಿದ್ದರೂ ಸಂಬಂಧಿಸಿದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡದೆ ಪ್ರತಿಭಟನಾಕಾರರ ಹೋರಾಟ ಹತ್ತಿಕ್ಕುವ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಸಾಮಾಜಿಕ ಹೋರಾಟಗಾರ ಶಶಿಕುಮಾರ್ ಗೌಡ ದೂರಿದರು.
ಸರ್ಕಾರದ ನಿವೇಶನದಲ್ಲಿ ಸರ್ಕಾರದ ಅನುದಾನ ಬಳಕೆ ಮಾಡಿಕೊಂಡು ಸಾರ್ವಜನಿಕರ ಅನುಕೂಲಕ್ಕಾಗಿ ಸಮಿತಿ ಹೆಸರಿನಲ್ಲಿ ಸಮುದಾಯ ಭವನ ನಿರ್ಮಿಸಬೇಕು. ಆದರೆ ಜನ್ನಾಪುರದ ಸ್ಥಳೀಯರಲ್ಲದ ಕೆಲ ಪ್ರಭಾವಿಗಳು ಖಾಸಗಿಯಾಗಿ ಟ್ರಸ್ಟ್ ರಚನೆ ಮಾಡಿಕೊಳ್ಳುವ ಮೂಲಕ ಅಂತರಘಟ್ಟಮ್ಮ ಸಮುದಾಯ ಭವನ ನಿರ್ಮಿಸಿದ್ದಾರೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ಪ್ರಭಾವಿ ವ್ಯಕ್ತಿಗಳು 2023ರಲ್ಲಿ ಟ್ರಸ್ಟ್ ನೋಂದಣಿ ಮಾಡಿಕೊಂಡು, 2024ರಲ್ಲಿ ಅಂತರಘಟ್ಟಮ್ಮ ದೇವಸ್ಥಾನದ ಹೆಸರಿನಲ್ಲಿ ಖಾತೆ ಮಾಡಿಸಿಕೊಂಡಿದ್ದಾರೆ. ಆದರೆ 2019ರಲ್ಲಿಯೇ ಶಾಸಕರು ಹಾಗೂ ಸಂಸದರ ನಿಧಿಯಿಂದ ಹಣ ಪಡೆದು ಕಟ್ಟಡ ನಿರ್ಮಿಸಿದ್ದಾರೆ. ಟ್ರಸ್ಟ್ ನೋಂದಣಿ ಹಾಗೂ ನಗರಸಭೆಯಿಂದ ಖಾತೆಯೇ ಆಗದ ಜಾಗಕ್ಕೆ ಅನುದಾನ ಹೇಗೆ ತಂದರು ಎಂಬುದಕ್ಕೆ ಸೂಕ್ತ ಉತ್ತರವನ್ನು ಅಧಿಕಾರಿಗಳಾಗಲಿ, ಟ್ರಸ್ಟಿನವರಾಗಲಿ ನೀಡುತ್ತಿಲ್ಲ. ಸಂಬಂಧಿಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ ಎಂದು ಫಿಲ್ಟರ್ ಶೆಡ್ ನಾಗರಿಕರ ಹಿತರಕ್ಷಣಾ ವೇದಿಕೆಯಿಂದ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗುತ್ತಿಲ್ಲ ಎಂದರು.
ಸಮುದಾಯ ಭವನವನ್ನು ತಾಲೂಕು ಆಡಳಿತ ವಶಕ್ಕೆ ಪಡೆಯಬೇಕು. ಸ್ಥಳೀಯರಿಗೆ ಶುಭ ಸಮಾರಂಭಗಳನ್ನು ಮಾಡಲು ರಿಯಾಯಿತಿ ದರದಲ್ಲಿ ಅವಕಾಶ ಮಾಡಿಕೊಡಬೇಕು. ಅಕ್ರಮವಾಗಿ ಭವನ ನಿರ್ಮಿಸಿದವರ ವಿರುದ್ಧ ಹಾಗೂ ಇದರಲ್ಲಿ ಶಾಮೀಲಾದ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ಕನಕ ಮಂಟಪ ಮೈದಾನದಲ್ಲಿ ಜ.26ರಂದು ಶಾಸಕ ಬಿ.ಕೆ.ಸಂಗಮೇಶ್ವರ್‌ಗೆ ಫಿಲ್ಟರ್ ಶೆಡ್ ನಾಗರಿಕರ ಹಿತರಕ್ಷಣಾ ವೇದಿಕೆಯಿಂದ ಮನವಿ ಸಲ್ಲಿಸಲಾಗುವುದು ಎಂದು ಹೇಳಿದರು.
ನಗರಸಭೆ ಸದಸ್ಯೆ ಸವಿತಾ ಉಮೇಶ್, ಬಿ.ಸಿ.ಉಮೇಶ್, ದಿವ್ಯಶ್ರೀ, ಮಹಾದೇವಿ, ಜಯಲಕ್ಷ್ಮೀ, ಜಯಂತಿ, ಪಾರ್ವತಿಬಾಯಿ ಇತರರಿದ್ದರು.