

ಶಿವಮೊಗ್ಗ: ತಾಲೂಕಿನ ಹಾಡೋನಹಳ್ಳಿ ವ್ಯಾಪ್ತಿಯ ಹೊಳೆ ಮಡಿಕೆ ಚೀಲೂರು ಗ್ರಾಮದಲ್ಲಿ ದಾಕ್ಷಾಯಣಮ್ಮ ಎಂಬುವವರ ಸ್ವಾಧೀನಾನುಭವದಲ್ಲಿರುವ ನಿವೇಶನದಲ್ಲಿ ಪಂಚಾಯಿತಿ ಅಧಿಕಾರಿಗಳು ದಬ್ಬಾಳಿಕೆಯಿಂದ ಕಟ್ಟಡ ನಿರ್ಮಿಸಲು ಹೊರಟಿದ್ದಾರೆ ಎಂದು ಗ್ರಾಮದ ಹನುಮಂತಪ್ಪ ಮಂಗೋಟೆ ಆರೋಪಿಸಿದ್ದಾರೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಮದ ನಿವೇಶನ ಸಂಖ್ಯೆ 42ರಲ್ಲಿ 37*45 ವಿಸ್ತೀರ್ಣದ ನಿವೇಶನಕ್ಕೆ ದಾಕ್ಷಾಯಣಮ್ಮ ಅವರ ಹೆಸರಲ್ಲಿ ಇ-ಸ್ವತ್ತು ಇದೆ. 2017ಕ್ಕಿಂತ ಹಿಂದೆಯೇ ದಾಕ್ಷಾಯಣಮ್ಮನ ಪತಿ ಎಚ್.ಮಲ್ಲೇಶಪ್ಪ ಹೆಸರಲ್ಲಿ ಈ ನಿವೇಶನವಿತ್ತು. ಅವರ ಮರಣದ ನಂತರ ದಾಕ್ಷಾಯಣಮ್ಮ ಹೆಸರಿಗೆ ಖಾತೆ ಬದಲಾವಣೆಯಾಗಿದೆ ಎಂದರು.
ಇವರ ಸ್ವತ್ತಿನ ಮೇಲೆ 2013ರಿಂದ 2016ರ ಅವಧಿಯಲ್ಲಿ ಪಂಚಾಯಿತಿ ಖಾತೆ ದಾಖಲು ಪುಸ್ತಕದಲ್ಲಿ ಖಾತೆ ನಂ.105, 25*40 ವಿಸ್ತೀರ್ಣ ಎಂದು ಬೇರೆಯವರ ಹೆಸರು ದಾಖಲು ಮಾಡಲಾಗಿದೆ. ಈಗ ಆ ಜಾಗದಲ್ಲಿ ಅತಿಕ್ರಮ ಪ್ರವೇಶ ಮಾಡಿ, ದೌರ್ಜನ್ಯ, ದಬ್ಬಾಳಿಕೆ ನಡೆಸಿ ಕಟ್ಟಡ ನಿರ್ಮಾಣ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಈ ಬಗ್ಗೆ ಪೊಲೀಸ್ ಇಲಾಖೆ, ಜಿಪಂ ಸಿಇಒ, ತಾಪಂ ಇಒ, ಗ್ರಾಪಂ ಪಿಡಿಒ ಅವರಿಗೆ ಲಿಖಿತವಾಗಿ ದೂರು ನೀಡಿದ್ದರೂ ಪ್ರಯೋಜನವಾಗಿಲ್ಲ. ಅಕ್ರಮ ಕಟ್ಟಡ ನಿರ್ಮಾಣ ಕಾಮಗಾರಿಯನ್ನು ಸಂಬಂಧಿಸಿದ ಅಧಿಕಾರಿಗಳು ತಕ್ಷಣ ನಿಲ್ಲಿಸಬೇಕು. ದಾಕ್ಷಾಯಣಮ್ಮ ಕುಟುಂಬಕ್ಕೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ದಾಕ್ಷಾಯಣಮ್ಮ, ಪ್ರಮುಖರಾದ ಬಸವರಾಜ್, ಚನ್ನೇಶಪ್ಪ ಇದ್ದರು.