

ಬೆಂಗಳೂರು: ನಿಯಮಬದ್ಧವಾಗಿ ಬಡ್ತಿ ಕೊಟ್ಟು ಕಾಯಂ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ (ಆರ್ಟಿಒ) ನೇಮಕಾತಿ ನಡೆಸಬೇಕಾದ ಸಾರಿಗೆ ಇಲಾಖೆಯಲ್ಲೀಗ ಹೆಚ್ಚುವರಿ ‘ಪ್ರಭಾರ’ ನಿಯೋಜನೆ ಹೆಸರಲ್ಲಿ ಲಂಚಾವತಾರ ನಡೆಯುತ್ತಿದೆ. 3 ಅಥವಾ 6 ತಿಂಗಳ ಅವಧಿಗೆ ಇಂತಿಷ್ಟು ಹಣವೆಂದು ನಿಗದಿಪಡಿಸಿ ಅಡ್ಡದಾರಿಯಲ್ಲಿ ಹಿರಿಯ ಇನ್ಸ್ಪೆಕ್ಟರ್ಗಳಿಗೆ ಹೆಚ್ಚುವರಿ ಜವಾಬ್ದಾರಿ ವಹಿಸುತ್ತಿರುವ ಆರೋಪ ಕೇಳಿಬಂದಿದೆ.
ನಿವೃತ್ತಿಯಿಂದ ತೆರವಾಗಿರುವ ಎಆರ್ಟಿಒ/ಆರ್ಟಿಒ ಹುದ್ದೆಗಳಿಗೆ ಬೇರೆ ಬೇರೆ ಆರ್ಟಿಒಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 7 ಹಿರಿಯ ಇನ್ಸ್ಪೆಕ್ಟರ್ಗಳು ಹಾಗೂ ಓರ್ವ ಇನ್ಸ್ಪೆಕ್ಟರ್ ಅನ್ನು (ಮೋಟಾರು ವಾಹನ) ಹೆಚ್ಚುವರಿ ಪ್ರಭಾರಿಗಳಾಗಿ ನಿಯೋಜಿಸಿ ಸೋಮವಾರದಿಂದ (ಜೂ.1) ಜಾರಿಗೆ ಬರುವಂತೆ ಸಾರಿಗೆ ಇಲಾಖೆ ಆದೇಶ ಹೊರಡಿಸಿರುವುದು ಭ್ರಷ್ಟಾಚಾರದ ಅನುಮಾನಕ್ಕೆ ಕಾರಣವಾಗಿದೆ.
ನಿಯಮದ ಪ್ರಕಾರ ಖಾಲಿ ಉಳಿದಿರುವ ಆರ್ಟಿಒ ಹುದ್ದೆಗೆ ಕಚೇರಿಯಲ್ಲಿ ಹಾಲಿ ಸೇವೆ ಸಲ್ಲಿಸುತ್ತಿರುವ ಎಆರ್ಟಿಒಗಳಿಗೆ ಇನ್ಚಾರ್ಜ್ ಕೊಡಬೇಕು.
ಒಂದು ವೇಳೆ ಎಆರ್ಟಿಒ ಲಭ್ಯವಿಲ್ಲದಿದ್ದಲ್ಲಿ ಬಡ್ತಿ ಸಿಗುವವರೆಗೆ ಬೇರೆ ವಿಭಾಗದ ಆರ್ಟಿಒಗೆ ಹೆಚ್ಚುವರಿ ಜವಾಬ್ದಾರಿ ವಹಿಸಬೇಕು. ಆದರೆ, ಇನ್ಸ್ಪೆಕ್ಟರ್ ಆಗಿರುವವರಿಗೆ ನೇರವಾಗಿ ಆರ್ಟಿಒ ಕಾರ್ಯನಿರ್ವಹಣಾ ಜವಾಬ್ದಾರಿ ನೀಡಲಾಗುತ್ತಿದೆ.
ಮಡಿಕೇರಿಗೆ ಎತ್ತಂಗಡಿ
ಸಾರಿಗೆ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ಪ್ರಥಮ ದರ್ಜೆ ಹಾಗೂ ದ್ವಿತೀಯ ದರ್ಜೆ ನೌಕರರ ಪರಿಸ್ಥಿತಿಯೂ ಇದೇ ಆಗಿದೆ. ಹಣ ಕೊಟ್ಟರೆ ಕೇಳಿದ ಜಾಗಕ್ಕೆ ವರ್ಗಾವಣೆ ಭಾಗ್ಯ ಸಿಗುತ್ತದೆ. ಇಲ್ಲವಾದರೆ ಉದ್ದೇಶಪೂರ್ವಕವಾಗಿ ವರ್ಗಾವಣೆ ಮಾಡಲಾಗುತ್ತದೆ. ಯಶವಂತಪುರ ಆರ್ಟಿಒದಲ್ಲಿ ಕೆಲಸ ಮಾಡುತ್ತಿರುವ, ಶೀಘ್ರದಲ್ಲೇ ನಿವೃತ್ತಿಯಾಗಲಿರುವ ಪ್ರಥಮ ದರ್ಜೆ ಮಹಿಳಾ ಉದ್ಯೋಗಿಯನ್ನು (ಗಂಡ ತೀರಿಕೊಂಡ ನಂತರ ಸಿಕ್ಕ ಉದ್ಯೋಗ) ಹಣ ಕೊಡಲಿಲ್ಲ ಎಂಬ ಕಾರಣಕ್ಕೆ ಮಡಿಕೇರಿಗೆ ಟ್ರಾನ್ಸ್ಫರ್ ಮಾಡಲಾಗಿತ್ತು. ಈಗ ಹಲವರ ಬಳಿ ಅವಲತ್ತ್ತುಕೊಂಡ ಬಳಿಕ ಎರವಲು ಸೇವೆ ಮೇಲೆ ಬೆಂಗಳೂರಿಗೆ ನಿಯೋಜಿಸಲಾಗಿದೆ.
ಸಂಬಂಧಿಸದವರ ಹಿಡಿತ
ಹಣ ಕೊಟ್ಟವರಿಗಷ್ಟೇ ಅಧಿಕಾರ
ಮೂರು ತಿಂಗಳು, ಆರು ತಿಂಗಳು ಅಥವಾ 1 ವರ್ಷದ ಅವಧಿಗೆ ಈ ಪ್ರಭಾರ ಹುದ್ದೆ ಭಾಗ್ಯ ಕಲ್ಪಿಸಲು ಡೀಲ್ ನಡೆಯುತ್ತದೆ ಎಂಬ ಆರೋಪವಿದೆ. ಬೆಂಗಳೂರಿನಲ್ಲಿ 1 ವರ್ಷದ ಅವಧಿಗೆ ಆರ್ಟಿಒ ಆಗಿ ಹೆಚ್ಚುವರಿ ಪ್ರಭಾರಿಯಾಗಿ ನಿಯೋಜನೆಗೊಳ್ಳಬೇಕಾದರೆ ಕನಿಷ್ಠ 5 ಲಕ್ಷ ರೂ.ನಿಂದ ಲಂಚದ ಬೇಡಿಕೆ ಶುರುವಾಗುತ್ತದೆ. ಗರಿಷ್ಠ ಎಷ್ಟು ಬೇಕಾದರೂ ಆಗಿರಬಹುದು. ಹಣ ಕೊಟ್ಟವರಿಗೆ ಅಧಿಕಾರ ಸಿಗುತ್ತದೆ ಎಂದು ಖುದ್ದು ಆರ್ಟಿಒ ಕಚೇರಿ ಅಧಿಕಾರಿಗಳೇ ಮಾಹಿತಿ ನೀಡುತ್ತಾರೆ. ಆಡಳಿತದ ದಿಢೀರ್ ಬದಲಾವಣೆಯಿಂದಾಗಿ ಹಣ ಕೊಟ್ಟು ಪ್ರಭಾರಿಗಳಾದವರು ಕೆಲವೇ ದಿನಗಳಲ್ಲಿ ಅಥವಾ ತಿಂಗಳುಗಳಲ್ಲಿ ಹಿಂದಿನ ಹುದ್ದೆಗೆ ಮರಳಿ ಕೈ ಸುಟ್ಟಿಕೊಂಡಿರುವ ಉದಾಹರಣೆಗಳೂ ಇವೆ.
| ಕೀರ್ತಿನಾರಾಯಣ. ಸಿ.