

ಚೆನ್ನೈ: ಗೋಮೂತ್ರ ಕುಡಿಯುವುದರಿಂದ ರೋಗಗಳು ಬೇಗನೆ ಗುಣವಾಗುತ್ತವೆ ಎಂದು ಹೇಳಿಕೆ ನೀಡಿ ಚರ್ಚೆಗೆ ಗ್ರಾಸವಾಗಿದ್ದ ಐಐಟಿ ಮದ್ರಾಸ್ (IIT Madras) ನಿರ್ದೇಶಕ ವಿ. ಕಾಮಕೋಟಿ ಇದೀಗ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ತಾವು ನೀಡಿದ ಹೇಳಿಕೆಗೆ ಬದ್ಧವಾಗಿರುವಾಗಿ ಹೇಳಿರುವ ಕಾಮಕೋಟಿ ಅವರು ತಾವೇ ಪಂಚಗವ್ಯವನ್ನು ಸೇವಿಸಿರುವುದಾಗಿ ಹೇಳಿದ್ದಾರೆ.
ಕೆಲವು ದಿನಗಳ ಹಿಂದೆ ಚೆನ್ನೈನ ಗೋಶಾಲೆಯೊಂದರಲ್ಲಿ ಕಾರ್ಯಕ್ರಮವನ್ನು ಉದ್ಧೇಶಿಸಿ ಮಾತನಾಡಿದ ಕಾಮಕೋಟಿ (IIT Director) ಅವರು, ತಮ್ಮ ತಂದೆಗೆ ಜ್ವರ ಬಂದಾಗ, ಸನ್ಯಾಸಿಯ ಸಲಹೆಯ ಮೇರೆಗೆ ಅವರು ಗೋಮೂತ್ರ ಕುಡಿದರು. ಇದಾದ 15 ನಿಮಿಷಗಳ ನಂತರ ಜ್ವರ ಕಡಿಮೆಯಾಯಿತು. ಸಲಹೆ ಕೊಟ್ಟ ಸನ್ಯಾಸಿಯ ಹೆಸರು ನನಗೆ ನೆನಪಿಲ್ಲ. ಆದರೆ, ಗೋಮೂತ್ರವು ಬ್ಯಾಕ್ಟೀರಿಯಾ ಮತ್ತು ವೈರಸ್‌ಗಳನ್ನು ನಾಶಪಡಿಸುತ್ತದೆ ಹಾಗೂ ಹೊಟ್ಟೆಯಲ್ಲಿನ ಜೀರ್ಣಕಾರಿ ಸಮಸ್ಯೆಗಳನ್ನು ಗುಣಪಡಿಸುತ್ತದೆ ಎಂದು ಕಾಮಕೋಟಿ ಅವರು ಹೇಳಿದ್ದರು.
ಇದೀಗ ತಮ್ಮ ಹೇಳಿಕೆ ವ್ಯಾಪಕ ಚರ್ಚೆಯನ್ನು ಹುಟ್ಟುಹಾಕುತ್ತಿದ್ದಂತೆ ಮಾತನಾಡಿರುವ ಕಾಮಕೋಟಿ ಅವರು, ನನ್ನ ಹೇಳಿಕೆಗೆ ನಾನು ಬದ್ಧವಾಗಿದ್ಧೇನೆ. ಹಲವರು ಹೇಳುವ ಪ್ರಕಾರ ನಾನು ಪಂಚಗವ್ಯವನ್ನು ಸೇವಿಸಿಲ್ಲ ಎಂಬುದು ಅವರ ಆರೋಪವಾಗಿದೆ. ನಾನು ಹಬ್ಬ ಹಾಗೂ ಶುಭ ಸಮಾರಂಭಗಳಲ್ಲಿ ಪಂಚಗವ್ಯವನ್ನು ಸೇವಿಸಿದ್ದೇನೆ ಎಂದು ಹೇಳುವ ಮೂಲಕ ತಾವು ಈ ಹಿಂದೆ ನೀಡಿದ್ದ ಹೇಳಿಕೆಯನ್ನು ಪುನರುಚ್ಛರಿಸಿದ್ದಾರೆ.
ಪ್ರಸ್ತುತ ಮದ್ರಾಸ್ ಐಐಟಿ (IIT) ನಿರ್ದೇಶಕರಾಗಿ ಕೆಲಸ ಮಾಡುತ್ತಿರುವ ವಿ. ಕಾಮಕೋಟಿ ಅವರು ಭಾರತದ ಮೊದಲ ಸ್ವದೇಶಿ ಮೈಕ್ರೋಪ್ರೊಸೆಸರ್ ‘ಶಕ್ತಿ’ಯನ್ನು ಅಭಿವೃದ್ಧಿಪಡಿಸಿದ ತಂಡದ ಪ್ರಮುಖ ಸದಸ್ಯರಾಗಿದ್ದ ವಿ. ಕಾಮಕೋಟಿ ಅವರು ವಿಶ್ವದ ಅತ್ಯಂತ ಪ್ರಸಿದ್ಧ ವಿಜ್ಞಾನಿಗಳಲ್ಲಿ ಒಬ್ಬರಾಗಿದ್ದಾರೆ. ಪ್ರಸ್ತುತ ಅವರ ಹೇಳಿಕೆಯೂ ಭಾರಿ ಚರ್ಚೆಯನ್ನು ಹುಟ್ಟುಹಾಕಿದೆ.