

ಭದ್ರಾವತಿ: ಭದ್ರಾ ಬಲದಂಡೆ ನಾಲೆಯನ್ನು ಸೀಳಿ ಕುಡಿಯುವ ನೀರಿನ ಕಾಮಗಾರಿ ಅವೈಜ್ಞಾನಿಕವಾಗಿದ್ದು, ಕೂಡಲೇ ಕಾಮಗಾರಿ ನಿಲ್ಲಿಸುವಂತೆ ಆಗ್ರಹಿಸಿ ರಾಜ್ಯ ರೈತ ಸಂಘದ ಮುಖಂಡರು ಬುಧವಾರ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಬಫರ್ ಜೋನ್ ವ್ಯಾಪ್ತಿಯಲ್ಲಿ ಕಾಮಗಾರಿ ನಡೆಸಬಾರದು. ಭದ್ರಾ ಜಲಾಶಯದ ಹಿನ್ನೀರಿನಲ್ಲಿ ಅಥವಾ ನದಿಯಲ್ಲಿ ಜಾಕ್‌ವೆಲ್‌ಗಳನ್ನು ನಿರ್ಮಿಸಿ ನೀರಿನ ಘಟಕಗಳಿಗೆ ನೀರು ಸರಬರಾಜು ಮಾಡುವಂತೆ ಸರ್ಕಾರವೇ ಆದೇಶ ನೀಡಿದೆ. ಆದರೂ ನಾಲೆಯ ಬಫರ್‌ಜೋನ್‌ನಲ್ಲಿ ಕಾಮಗಾರಿ ನಡೆಸಿ ನಾಲೆ ಸುರಕ್ಷತೆಗೆ ಧಕ್ಕೆ ತರುತ್ತಿದ್ದಾರೆ ಎಂದು ದೂರಿದರು.
ಕಾಮಗಾರಿ ವೀಕ್ಷಣೆಗೆಂದು ಬಂದ ಐಐಎಸ್‌ಸಿ ತಜ್ಞರ ಸಮಿತಿಯು ಸರ್ಕಾರದ ಲಾಬಿ ಹಾಗೂ ಬಂಡವಾಳಶಾಹಿಗಳಿಗೆ ಮಣಿದು ತಪ್ಪು ವರದಿ ನೀಡಿದೆ. ಕೂಡಲೇ ಕಾಮಗಾರಿಯನ್ನು ಸಂಪೂರ್ಣ ನಿಲ್ಲಿಸಬೇಕು. ಕಾಮಗಾರಿಗೆ ಅವಕಾಶ ನೀಡಿದ ನೀರಾವರಿ ಸಲಹಾ ಸಮಿತಿ ಸದಸ್ಯ, ಕಾರ್ಯದರ್ಶಿಗಳು ಹಾಗೂ ಮುಖ್ಯ ಇಂಜಿನಿಯರ್‌ಗಳ ವಿರುದ್ಧ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ಹಿನ್ನೀರಿನಿಂದ ಕುಡಿಯುವ ನೀರು ತೆಗೆದುಕೊಂಡು ಹೋಗಲು ನಮ್ಮ ತಕರಾರಿಲ್ಲ. ಆದರೆ ನಾಲೆಯನ್ನು ಸೀಳಿ ನೀರು ತೆಗೆದುಕೊಂಡು ಹೋಗಲು ಬಿಡುವುದಿಲ್ಲ. ಇದು ರೈತರ ನಡುವೆ ವೈರತ್ವ ತಂದಿಡುವ ಹುನ್ನಾರ. ಕೂಡಲೇ ಕಾಮಗಾರಿ ನಿಲ್ಲಿಸದಿದ್ದರೆ ಮುಂದಿನ ದಿನಗಳಲ್ಲಿ ತೀವ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ರೈತ ಸಂಘದ ತಾಲೂಕು ಅಧ್ಯಕ್ಷ ಹಿರಿಯಣ್ಣಯ್ಯ, ಜಿಲ್ಲಾಧ್ಯಕ್ಷ ಹಾಲೇಶಪ್ಪ ಗೌಡ, ಕಾರ್ಯಾಧ್ಯಕ್ಷ ಪುಟ್ಟಣ್ಣ ಗೌಡ, ಜಿಲ್ಲಾ ಗೌರವಾಧ್ಯಕ್ಷ ವೀರಣ್ಣ ಪ್ಯಾಟಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಚ್.ಎಸ್.ಮಂಜುನಾಥ್, ವಲಯ ಕಾರ್ಯದರ್ಶಿ ಡಿ.ವಿ.ವೀರೇಶ್, ಎಚ್.ಬಸವರಾಜ್, ಕೂಡ್ಲಿಗೆರೆ ಮೋಹನ್, ಕೃಷ್ಣಮೂರ್ತಿ ಇತರರಿದ್ದರು.