

ಕೋಲಾರ: ಜಿಲ್ಲೆಯ ಜನತೆಗೆ ಗುಣಮಟ್ಟದ ಆರೋಗ್ಯ ಸೇವೆ ಕಲ್ಪಿಸಬೇಕು ಎಂಬುದು ಇಲಾಖೆಯ ಉದ್ದೇಶ, ಅದು ಬಿಟ್ಟು ಸರ್ಕಾರಿ ವೈದ್ಯರು ಖಾಸಗಿ ಸೇವೆಯಲ್ಲಿ ತೊಡಗಿಸಿಕೊಳ್ಳುವುದು ಗಮನಕ್ಕೆ ಬಂದರೆ ಸಹಿಸುವುದಿಲ್ಲ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಶ್ರೀನಿವಾಸ್ ಹೇಳಿದರು.
ತಾಲೂಕಿನ ತೇರ್ನಹಳ್ಳಿ ಅದಿಮ ಸಾಂಸತಿಕ ಕೇಂದ್ರದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಪತ್ರಕರ್ತರಿಗಾಗಿ ಬುಧವಾರ ಹಮ್ಮಿಕೊಂಡಿದ್ದ ಆರೋಗ್ಯ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರಿ ವೈದ್ಯರಿಗೆ ಹಣ ಮಾಡಬೇಕು ಎಂಬ ಆಸೆಯಿದ್ದರೆ ಪರ್ಯಾಯವಾಗಿ ಪಾನಿಪುರಿ ಅಂಗಡಿ ಇಟ್ಟುಕೊಳ್ಳಿ. ಇದಕ್ಕೆ ನಾನೂ ಸಹಾಯ ಮಾಡುತ್ತೇನೆ. ಆದರೆ ಖಾಸಗಿ ಆಸ್ಪತ್ರೆಯಲ್ಲಿ ಸೇವೆಗೆ ಹೋದರೆ ಸಹಿಸಲ್ಲ ಎಂದರು.
ಬಡವರಿಗಾಗಿಯೇ ಸರ್ಕಾರಿ ಆಸ್ಪತ್ರೆಗಳಿದ್ದು, ಉತ್ತಮ ರೀತಿಯ ಸೌಲಭ್ಯಗಳು ದೊರೆಯುತ್ತಿವೆ. ಹೀಗಿರುವಾಗ ರೋಗಿಗಳನ್ನು ಸ್ವಾರ್ಥಕ್ಕಾಗಿ ಖಾಸಗಿ ಆಸ್ಪತ್ರೆಗಳಿಗೆ ಕರೆದುಕೊಂಡು ಹೋಗುವ ವೈದ್ಯರಿಗೆ ಒಳ್ಳೆಯದಾಗುವುದಿಲ್ಲ. ಮುಂದಿನ ದಿನಗಳಲ್ಲಿ ಕಾನೂನಾತ್ಮಕವಾಗಿಯೂ ಬುದ್ಧಿ ಕಲಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸರ್ಕಾರಿ ವೈದ್ಯರು ಖಾಸಗಿ ಆಸ್ಪತ್ರೆಗಳನ್ನು ನಿರ್ಮಿಸಿಕೊಂಡಿದ್ದು, ಬಡ ರೋಗಿಗಳನ್ನು ಖಾಸಗಿ ಆಸ್ಪತ್ರೆಗಳಿಗೆ ಕರೆಸಿಕೊಂಡು ಹೆರಿಗೆ ಮಾಡಿಸುವುದು, ಚಿಕಿತ್ಸೆ ನೀಡುವ ಬಗ್ಗೆ ದೂರುಗಳಿವೆ. ದುರಾಸೆಗಾಗಿ ಬಡವರ ಹಣ ಪೀಕುವ ಬದಲಿಗೆ ಪಾನಿಪುರಿ ಅಂಗಡಿ ಹಾಕಿಕೊಂಡರೆ ಆಹಾರ ಸುರಕ್ಷತಾ ಇಲಾಖೆಯಿಂದ ಅನುಮತಿ ಕೊಡಿಸುತ್ತೇನೆ ಎಂದು ಕಟುವಾಗಿ ಕಿವಿಮಾತು ಹೇಳಿದರು.
ಸರ್ಕಾರಿ ಆಸ್ಪತ್ರೆ ಜನಸ್ನೇಹಿಯಾಗಿಸಲು ಕ್ರಮ
ಸರ್ಕಾರಿ ಆಸ್ಪತ್ರೆಯಿಂದ ಶಿಾರಸು ಮೇರೆಗೆ ಖಾಸಗಿ ಆಸ್ಪತ್ರೆಗೆ ಹೋದರೆ ಸಾವಿರಾರು ರೂ. ರ್ಖಚಾಗುವ ಚಿಕಿತ್ಸೆಗಳನ್ನು ಸಹ ಖಾಸಗಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಇಲ್ಲವೇ ಕಡಿಮೆ ಹಣದಲ್ಲಿ ಪಡೆಯಬಹುದು. ಇಂತಹ ಕಾರ್ಯಕ್ರಮಗಳ ಬಗ್ಗೆ ಅರಿವು ಪಡೆದುಕೊಳ್ಳಬೇಕು. ಜಿಲ್ಲೆಯಲ್ಲಿರುವ ಪ್ರಾಥಮಿಕ, ಸಮುದಾಯ, ತಾಲೂಕು ಹಾಗೂ ಜಿಲ್ಲಾಸ್ಪತ್ರೆಗಳ ಸುಧಾರಣೆಗೆ ಅಗತ್ಯ ಕ್ರಮಕೈಗೊಳ್ಳಲಾಗುತ್ತಿದ್ದು, ಜನರಿಗೆ ಮೂಲ ಸೌಕರ್ಯ ಹಾಗೂ ಸೇವೆಗಳು ದೊರೆಯುವಂತೆ ಮಾಡಲು ಸೂಚಿಸಲಾಗಿದೆ. ಮುಂದಿನ ದಿನಗಳಲ್ಲಿ ಸರ್ಕಾರಿ ಆಸ್ಪತ್ರೆಗಳನ್ನು ಇನ್ನಷ್ಟು ಜನಸ್ನೇಹಿಯಾಗಿಸಲು ಒತ್ತು ನೀಡಲಾಗುವುದು ಎಂದು ಶ್ರೀನಿವಾಸ್ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಆರ್ಸಿಎಚ್ ಚಾರಣಿ, ಜಿಲ್ಲಾ ಮಾನಸಿಕ ಆರೋಗ್ಯ ವಿಭಾಗದ ಡಾ.ನಾರಾಯಣಸ್ವಾಮಿ, ಕಲ್ಯಾಣಾಧಿಕಾರಿ ಡಾ.ಚಂದನ್, ಹಿರಿಯ ಪತ್ರಕರ್ತ ಕೆ.ಎಸ್.ಗಣೇಶ್, ಆರೋಗ್ಯ ಇಲಾಖೆಯ ಐಇಸಿ ವಿಭಾಗದ ಪ್ರೇಮ ಹಾಗೂ ಇತರರು ಇದ್ದರು.