

ಬೆಂಗಳೂರು: ರಾಜಧಾನಿಯ ಹೋಟೆಲ್, ಪಬ್, ಡಿಸ್ಕೋಥೆಕ್, ಹುಕ್ಕಾ ಬಾರ್‌ಗಳ ಮೇಲೆ ಪೊಲೀಸರು ದಾಳಿ ನಡೆಸಿ ಕೋಟ್ಪಾ ಕಾಯ್ದೆ, ಜೆಜೆ ಕಾಯ್ದೆ, ಅಬಕಾರಿ ಕಾಯ್ದೆಯ ನಿಯಮ ಉಲ್ಲಂಘಿಸಿದ ಆರೋಪದಡಿ 970 ಪ್ರಕರಣ ದಾಖಲಿಸಿದ್ದಾರೆ.
ಪಬ್, ಡಿಸ್ಕೋಥೆಕ್, ಬಾರ್ ಆ್ಯಂಡ್ ರೆಸ್ಟೋರೆಂಟ್‌ಗಳಲ್ಲಿ ಕೋಟ್ಪಾ ಕಾಯ್ದೆಯಡಿ ಪ್ರತ್ಯೇಕ ಧೂಮಪಾನ ವಲಯ ನಿರ್ಮಾಣ ಮಾಡುವ ಕಡ್ಡಾಯ. ಆದರೂ ಉಲ್ಲಂಘನೆ, ಅವಧಿ ಮೀರಿ ವಹಿವಾಟು ತೆರೆಯುವುದು, 18 ವರ್ಷ ಒಳಗಿನವರಿಗೆ ತಂಬಾಕು ಮತ್ತು 21 ವರ್ಷ ಒಳಗಿನವರಿಗೆ ಮದ್ಯ ಮಾರಾಟ ಮಾಡುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಕೇಳಿ ಬಂದಿದ್ದವು.
ಈ ಹಿನ್ನೆಲೆಯಲ್ಲಿ ಅ.14 ಮತ್ತು 15ರಂದು ಪೊಲೀಸರು ನಗರದಾದ್ಯಂತ 1,051 ಸ್ಥಳಗಳಲ್ಲಿ ದಾಳಿ ನಡೆಸಿ ಪರಿಶೀಲಿಸಿದ್ದು, ನಿಯಮ ಉಲ್ಲಂಘಿಸಿದ ಆರೋಪದ ಮೇಲೆ 970 ಪ್ರಕರಣಗಳನ್ನು ದಾಖಲಿಸಿ ದಂಡ ವಸೂಲಿ ಮಾಡಿದ್ದಾರೆ ಎಂದು ಪೊಲೀಸ್ ಆಯುಕ್ತ ಬಿ. ದಯಾನಂದ್ ತಿಳಿಸಿದ್ದಾರೆ.
ಇದರ ಜೊತೆಗೆ ಪೊಲೀಸ್ ಇಲಾಖೆಯಿಂದಲೇ ಪಬ್, ಡಿಸ್ಕೋಥೆಕ್, ಬಾರ್ ಆ್ಯಂಡ್ ರೆಸ್ಟೋರೆಂಟ್ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಕೋಟ್ಪಾ ಕಾಯ್ದೆಯಡಿ 4,698 ಧೂಮಪಾನ ನಿಷೇಧ ಫಲಕಗಳನ್ನು ಅಳಡಿಸಲಾಗಿದೆ. ಧೂಮಪಾನ ಮತ್ತು ಮದ್ಯಪಾನ ನಿಷೇಧಿತ ಸಾರ್ವಜನಿಕ ಸ್ಥಳಗಳಲ್ಲಿ ನಿಯಮ ಉಲ್ಲಂಘಿಸುವ ಜನರ ವಿರುದ್ಧವೂ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಲಾಗಿದೆ. ನಿಯಮ ಉಲ್ಲಂಘಿಸುವರ ವಿರುದ್ಧ ದಾಳಿ ಮುಂದುವರಿಯಲಿದೆ. ಪದೇ ಪದೆ ನಿಯಮ ಉಲ್ಲಂಘಿಸುವವರ ಮಾರಾಟ ಪರವಾನಗಿ ರದ್ದುಪಡಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪರವಾನಗಿ ನಿಯಮ ಕಡ್ಡಾಯವಾಗಿ ಪಾಲಿಸಬೇಕು. ಕೋಟ್ಪಾ ಕಾಯ್ದೆಯ ಸೆಕ್ಷನ್ 6ರ ಅಡಿ 18 ವರ್ಷದ ಒಳಗಿನವರಿಗೆ ತಂಬಾಕು ಉತ್ಪನ್ನಗಳ ಮಾರಾಟ, ಅಬಕಾರಿ ಕಾಯ್ದೆಯಡಿ 21 ವರ್ಷದ ಒಳಗಿನವರಿಗೆ ಮದ್ಯ ಮಾರಾಟ ಮಾಡಿದರೆ ಕ್ರಮ ಕೈಗೊಳ್ಳುವುದಾಗಿ ನಗರದ ಹೋಟೆಲ್‌ಗಳು, ಬಾರ್ ಆ್ಯಂಡ್ ರೆಸ್ಟೋರೆಂಟ್‌ಗಳು, ಪಬ್, ಡಿಸ್ಕೋಥೆಕ್ ಮಾಲೀಕರಿಗೆ ಎಚ್ಚರಿಕೆ ನೀಡಲಾಗಿದೆ.
ಧೂಮಪಾನ ಮತ್ತು ಮದ್ಯಪಾನ ನಿಷೇಧಿತ ಸಾರ್ವಜನಿಕ ಸ್ಥಳಗಳಲ್ಲಿ ನಿಯಮ ಉಲ್ಲಂಸುವರ ವಿರುದ್ಧವೂ ಕಾನೂನು ಕ್ರಮ ಜರುಗಿಸಲಾಗುತ್ತದೆ.
ಬಿ. ದಯಾನಂದ್-ನಗರ ಪೊಲೀಸ್ ಆಯುಕ್ತ