ದಿನಬೆಳಗಾದರೆ ಅಸಂಬದ್ಧ ಟೀಕೆ ಮಾಡಿದರೆ ಯಾರ್ರೀ ಹತ್ರಕ್ ಸೇರಿಸಿಕೊಳ್ತಾರೆ !?

IMG-20231102-WA0016
Published on

ಬೆಂಗಳೂರು: ದಿನಬೆಳಗಾದರೆ ಅಸಂಬದ್ಧ ಟೀಕೆ ಮಾಡಿದರೆ ಯಾರ್ರೀ ಹತ್ರಕ್ ಸೇರಿಸಿಕೊಳ್ತಾರೆ ? ಹೀಗೆಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಕೇಳುವ ಮೂಲಕ ಸಿಎಂ ಸಿದ್ದರಾಮಯ್ಯಗೆ ಮೊಟಕಿದರು.

ಬಿಜೆಪಿ ರಾಜ್ಯ ಕಚೇರಿಯಲ್ಲಿ ಗುರುವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಮೊದಲು ಬೇಜವಾಬ್ದಾರಿ ಹೇಳಿಕೆ ನೀಡುವುದನ್ನು ನಿಲ್ಲಿಸಲಿ. ರಾಜ್ಯ, ರೈತರ ಬಗ್ಗೆ ನಿಜವಾದ ಕಾಳಜಿಯಿದ್ದರೆ ಎರಡು ದಿನ ದೆಹಲಿಯಲ್ಲಿ ಬಿಡಾರ ಹೂಡಲಿ.

ಪ್ರಧಾನಿ ನರೇಂದ್ರ ಮೋದಿ ಸೇರಿ ಕೇಂದ್ರ ಸಚಿವರ ಭೇಟಿಗೆ ಕಾಲಾವಕಾಶ ಕೇಳಲಿ. ಖಂಡಿತವಾಗಿ ಸಿಕ್ಕೇ ಸಿಗುತ್ತದೆ. ಸಾಮಾಜಿಕ ಜಾಲ ತಾಣಗಳಲ್ಲಿ ಪ್ರತಿಪಕ್ಷಗಳ ಮೇಲೆ ದಾಳಿ ಮಾಡುವುದು ಪ್ರಜಾಪ್ರಭುತ್ವದ ಅಣಕವೆಂದು ಬಿಎಸ್ ವೈ ವಾಗ್ದಾಳಿ ಮಾಡಿದರು.

ಹಿಂದೆಲ್ಲಾ ಬರದ ವೇಳೆ ಕೇಂದ್ರದ ಪರಿಹಾರಕ್ಕೆ ಕಾಯದೆ ಪರಿಹಾರ ರಾಜ್ಯವೇ ಕೊಡುತ್ತಿತ್ತು ಆದರೆ ಈಗ ಸಿದ್ದರಾಮಯ್ಯ ಕೇಂದ್ರದ ಕಡೆ ನೋಡುತ್ತಿದ್ದಾರೆ.  ಕಾಂಗ್ರೆಸ್ ನಾಯಕರಾದ ವೇಣುಗೋಪಾಲ್, ಸುರ್ಜೇವಾಲಾ ಕರ್ನಾಟಕಕ್ಕೆ ಭೇಟಿ ನೀಡುತ್ತಿರುವುದು. ಸರ್ಕಾರ ಎಟಿಎಂ ಆಗಿದೆ ಚುನಾವಣಾ ಟಾರ್ಗೆಟ್ ನೀಡಲು ಅವರು ರಾಜ್ಯಕ್ಕೆ ಭೇಟಿ ನೀಡುತ್ತಿದ್ದಾರೆ ಎಂದರು.

ಕೇಂದ್ರದ ನೆರವು

ಅನಗತ್ಯವಾಗಿ ಮೋದಿ ಟೀಕೆ ಮಾಡುವುದು ಸಿದ್ದರಾಮಯ್ಯ ನಿತ್ಯ ಚಾಳಿಯಾಗಿದೆ. ಕೇಂದ್ರ ಸರ್ಕಾರ ರಾಜ್ಯಕ್ಕೆ ಅನುದಾನದ ಮಹಾಪೂರ ಹರಿಸಿದೆ. ಸಿದ್ದರಾಮಯ್ಯಗೆ ಮಾಹಿತಿ ಕೊರತೆ ಇರಬಹುದು,‌ 12784 ಕೋಟಿ ಎನ್ಡಿಆರ್ ಅಡಿಬ 3377 ಕೋಟ ಎನ್ಡಿಆರ್ಎಫ್ ನಡಿ ಬಿಡುಗಡೆ ಮಾಡಿದೆ 5.23 ಲಕ್ಷ ಕೋಟಿ ಕೇಂದ್ರದ ಯೋಜನೆ ಹೊರತುಪಡಿಸಿ ಕೊಟ್ಟಿದ್ದಾರೆ. 37510 ಕೋಟಿ ಹಣ ರಾಷ್ಟ್ರೀಯ ಹೆದ್ದಾರಿಗೆ ವೆಚ್ಚ ಮಾಡುತ್ತಿದೆ, 42262 ಕೋಟಿ ಯೋಜನೆ ಚಾಲನೆಯಲ್ಲಿದೆ, ಎಕ್ಸ್ ಪ್ರೆಸ್ ವೇ ಸಿದ್ದವಾಗುತ್ತಿದೆ, ಕಿಸಾನ್ ಕ್ರಿಡಿಟ್ ಕಾರ್ಡ್ ನಡಿ 20 ಸಾವಿರ ಕೋಟಿ ನೀಡಿದೆ. ರಸಗೊಬ್ಬರ ಸಹಾಯಧನ 19567 ಕೋಟಿ ಹಣ ನೀಡಲಾಗಿದೆ 5300 ಕೋಟಿ ಭದ್ರಾ ಯೋಜನೆಗೆ ನೀಡಿದೆ. 1727 ಕೋಟಿ ರೈಲ್ವೆ ಯೋಜನೆಗೆ ನೀಡಿದೆ.ಉಪನಗರ ರೈಲು ಯೋಜನೆಗೆ 450 ಕೋಟಿ ನೀಡಲಾಗಿದೆ. ಮೆಟ್ರೋ ಯೋಜನೆಗೂ ಹಣ ನೀಡಲಾಗುತ್ತಿದೆ, ಮೋದಿ ಯಾವುದೇ ತಾರತಮ್ಯ ಮಾಡದೆ ಅನುದಾನ ನೀಡಿದ್ದಾರೆ ಆದರೆ ರಾಜಕೀಯ ಕಾರಣಕ್ಕಾಗಿ ಸಿದ್ದರಾಮಯ್ಯ ನಿತ್ಯ ಮೋದಿ ಅವರನ್ನು ಟೀಕಿಸುತ್ತಿದ್ದಾರೆ ಎಂದರು.

ಪ್ರವಾಸ ಮುಂದೂಡಿಕೆ

ನಾಳೆಯಿಂದ ಶುರು ಮಾಡಬೇಕಿದ್ದ ರಾಜ್ಯ ಪ್ರವಾಸವನ್ನು ಐದರ ಬಳಿಕ ಆರಂಭಿಸಲಿದ್ದೇವೆ, ನಾಳೆ ಭದ್ರಾವತಿಯ ವಿಐಎಸ್ಎಲ್ ಕಾರ್ಖಾನೆಗೆ ಮೈಸೂರು ರಾಜರು ಭೇಟಿ ನೀಡುತ್ತಿರುವ ಕಾರಣದಿಂದಾಗಿ ನಾಳೆ ಅಲ್ಲಿಗೆ ಹೋಗುತ್ತಿದ್ದೇನೆ ಹಾಗಾಗಿ ನಾಳೆ ಆರಂಭಿಸಬೇಕಿದ್ದ ಬರ ಅಧ್ಯಯನ ಪ್ರವಾಸವನ್ನು ಎರಡು ದಿನ ಮುಂದೂಡಿಕೆ ಮಾಡುತ್ತಿದ್ದೇನೆ, ಈಗ ಮೇಘಾಲಯ, ಜಮ್ಮು ಕಾಶ್ಮೀರಕ್ಕೆ ಕೆಲ ನಾಯಕರು ತೆರಳಿದ್ದು ಅವರೂ ಕೂಡ ವಾಪಸ್ಸಾದ ನಂತರ ರಾಜ್ಯ ಪ್ರವಾಸ ಮಾಡಲಿದ್ದಾರೆ ಎಂದರು.

ನಾನು ಇನ್ನು ಮುಂದೆ ಮನೆಯಲ್ಲಿ ಕುಳಿತುಕೊಳ್ಳುವ ಪ್ರಶ್ನೆಯೇ ಇಲ್ಲ, ರೈತರ, ಜನ ಹಿತ ಕಾಯಲು ಬದ್ದವಾಗಿದ್ದೇನೆ, ಒಂದು ವಾರದ ನಂತರ ಸರ್ಕಾರದ ಬೇಜವಾಬ್ದಾರಿ ಬಯಲಿಗೆಳೆಯುತ್ತೇವೆ.ಬರ ಪ್ರವಾಸದ ನಂತರ ಈ ಮೊದಲು ಘೋಷಣೆ ಮಾಡಿದ್ದಂತೆ ರಾಜ್ಯ ಪ್ರವಾಸ ಮಾಡಲಿದ್ದೇವೆ ಎಂದರು.

ನಮ್ಮ ಶಾಸಕರ ಸೆಳೆಯಲು ಬಿಜೆಪಿ ಹಣದ ಆಮಿಷವೊಡ್ಡಿದೆ ಎಂದು ಸಿಎಂ ಸಿದ್ದರಾಮಯ್ಯ ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ. ಇಂತಹ ಹೇಳಿಕೆ ಬದಲು ಸಾಕ್ಷಿ ಇದ್ದರೆ ತನಿಖೆ ನಡೆಸಿ, ವಿನಾಕಾರಣ ನಿಮ್ಮ ತಪ್ಪು ಮುಚ್ಚಿಕೊಳ್ಳಲು ಆಪರೇಷನ್ ಕಮಲದ ಆರೋಪ ಮಾಡಬೇಡಿ ಎಂದು ಬಿಎಸ್ ವೈ ಹರಿಹಾಯ್ದರು.

ಜೆಡ್ ಪ್ಲಸ್ ಭದ್ರತೆ ಬೇಡ

ನನಗೆ ಜೆಡ್ ಪ್ಲಸ್ ಭದ್ರತೆ ಬೇಡ ಎಂದು ನಾನು ಗೃಹ ಸಚಿವರಿಗೆ ಮನವಿ ಮಾಡಿದ್ದೇನೆ, ಜೆಟ್ ಪ್ಲಸ್ ಬೇಡ ಎಂದಿದ್ದೇನೆ, ಮೊದಲಿದ್ದ ಭದ್ರತೆ ಸಾಕು ಎಂದಿದ್ದೇನೆ, ಜೆಡ್ ಪ್ಲಸ್ ಭದ್ರತೆ ಇದ್ದರೆ ನನ್ನ ಅಕ್ಕಪಕ್ಕ ಯಾರೂ ಬರಲಾಗಲ್ಲ, ನಾನು ಜನರ ನಡುವೆ ಇರುವವನು ಹಾಗಾಗಿ ಮೊದಲಿದ್ದ ಭದ್ರತೆ ಸಾಕು ಎಂದಿದ್ದೇನೆ ಎಂದರು.

ವಿರೋಧ ಪಕ್ಷದ ನಾಯಕರ ಆಯ್ಕೆ ತಡ ಆಗಿದೆ, ಆದಷ್ಟು ಬೇಗ ಮಾಡಲು ಹೈಕಮಾಂಡ್ ಗೆ ಹೇಳಿದ್ದೇನೆ, ಮತ್ತೆ ಒತ್ತಡವನ್ನೂ ಹೇರುತ್ತೇನೆ, ನೂರಕ್ಕೆ ನೂರು ಅಧಿವೇಶನಕ್ಕೆ ಮೊದಲು ನೇಮಕ ಮಾಡಲು ಹೇಳಲಿದ್ದೇನೆ ಎಂದರು. ರಾಜ್ಯಾಧ್ಯಕ್ಷ ಸ್ಥಾನಕ್ಕೆ ಶೋಭಾ ಕರಂದ್ಲಾಜೆ ಸೇರಿ ಹಲವರ ಹೆಸರು ಕೇಳಿಬರುತ್ತಿರುವ ಕುರಿತು ಪ್ರತಿಕ್ರಿಯೆ ನೀಡಿದ ಯಡಿಯೂರಪ್ಪ, ಯಾರನ್ನಾದರೂ ರಾಜ್ಯಾಧ್ಯಕ್ಷರನ್ನಾಗಿ ಮಾಡಲಿ ಆದರೆ ಆದಷ್ಟು ಬೇಗ ನೇಮಕ ಮಾಡಲಿ ಎಂದು ಯಡಿಯೂರಪ್ಪ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net