

ಬೆಟ್ಟದಪುರ: ಯಾವುದೇ ವ್ಯಕ್ತಿ ಸಾಧನೆ ಮಾಡಲು ಮೊದಲು ಲೋಕ ಜ್ಞಾನವಿರಬೇಕು. ಜ್ಞಾನಕ್ಕೆ ಮೂಲ ಸಾಧನವೇ ಶಿಕ್ಷಣವಾಗಿದೆ ಎಂದು ಬೆಟ್ಟದಪುರದ ಡಿಟಿಎಂಎನ್ ವಿದ್ಯಾಸಂಸ್ಥೆಯ ನಿರ್ದೇಶಕ ಸಿ.ಟಿ.ಗುರುದತ್ ಹೇಳಿದರು.
ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರದ ಡಿಟಿಎಂಎನ್ ವಿದ್ಯಾಸಂಸ್ಥೆಯಲ್ಲಿ ಭಾನುವಾರ ಆಯೋಜಿಸಿದ್ದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ನಮ್ಮ ಸಂಸ್ಥೆ ಸೇವೆ ಸಲ್ಲಿಸುತ್ತಿದೆ. ಕಳೆದ 19 ವರ್ಷಗಳಿಂದ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇ.100ರಷ್ಟು ಫಲಿತಾಂಶ ಬಂದಿದೆ. ಆದರೆ ಈ ಬಾರಿ ಶೇ.98 ಫಲಿತಾಂಶ ಬಂದಿದ್ದು, ಒಂದು ಕಡೆ ಬೇಸರವಿದ್ದರೂ, ನಮ್ಮ ಅನೇಕ ವಿದ್ಯಾರ್ಥಿಗಳು 600ಕ್ಕೂ ಹೆಚ್ಚು ಅಂಕಗಳು ಹಾಗೂ ವಿಷಯವಾರು ಅತಿ ಹೆಚ್ಚು ಅಂಕ ಗಳಿಸುವ ಮೂಲಕ ಸಾಧನೆ ಮಾಡಿದ್ದು, ಇದು ನಮ್ಮಲ್ಲಿ ಒಂದಿಷ್ಟು ಅತ್ಮತೃಪ್ತಿ ತಂದಿದೆ ಎಂದರು.
ಮೈಸೂರು ಪೇಟ ತೊಡಿಸಿ ಸನ್ಮಾನ: ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯಲ್ಲಿ ಸಂಸ್ಥೆಯ 35 ವಿದ್ಯಾರ್ಥಿಗಳು ಅತ್ಯುತ್ತಮ ಶ್ರೇಣಿಯಲ್ಲಿ, 53 ಪ್ರಥಮ ದರ್ಜೆಯಲ್ಲಿ ಹಾಗೂ ನಾಲ್ಕು ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾರೆ. ಜೆ.ತನು 615, ಎಚ್.ಆರ್ ಭೂಮಿಕಾ 612, ಆರಾಧ್ಯ ಧನುಷ್ 611, ಡಿ.ಕೆ ಧನುಷ್ 611, ಡಿ.ನಿಶಾ 611, ಜೆ.ಪಿ ಪ್ರೀತಮ್ 610, ಎಂ.ಮಾನ್ಯತಾ 603, ಪೂಜಾ 602 ಅಂಕಗಳನ್ನು ಪಡೆದುಕೊಂಡಿದ್ದಾರೆ. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಮೈಸೂರು ಪೇಟ ತೊಡಿಸಿ ಸನ್ಮಾನಿಸಿ, ಅಭಿನಂದನೆ ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಸತೀಶ್ ಮಾತನಾಡಿದರು.
ಸಂಸ್ಥೆಯ ಅಧ್ಯಕ್ಷ ಚಂದ್ರಶೇಖರ್, ಕಾರ್ಯದರ್ಶಿ ಶ್ರೀಶೈಲಾ, ಪ್ರಾಂಶುಪಾಲ ಸತೀಶ್, ಮುಖ್ಯಶಿಕ್ಷಕ ಮುರಳಿ ಕೃಷ್ಣ, ಶಿಕ್ಷಕರಾದ ಮೋಹನ್, ಪುನೀತ್ ಸೇರಿದಂತೆ ಶಿಕ್ಷಕರು ಹಾಗೂ ಪಾಲಕರು ಇದ್ದರು.