

ಬೆಂಗಳೂರು: ಕರ್ನಾಟಕದ ಪ್ರಖ್ಯಾತ ಸಿಹಿಖಾದ್ಯ ಮೈಸೂರುಪಾಕ್ ಅನ್ನು ತಿಂದರೆ ಕ್ಷಣದಲ್ಲೇ ಕರೊನಾ ಸೋಂಕು ಗುಣವಾಗುತ್ತಂತೆ!
ಹೀಗೆಂದು ಹೇಳಿದ್ದು ವೈದ್ಯರಲ್ಲ. ಈ ಬಗ್ಗೆ ಯಾವುದೇ ಕ್ಲಿನಿಕಲ್ ಟ್ರಯಲ್ ಕೂಡ ನಡೆದಿಲ್ಲ. ಆದರೆ, ಹೀಗೆ ಹೇಳಿದವರು ಕರ್ನಾಟಕದವರಂತೂ ಅಲ್ಲವೇ ಅಲ್ಲ. ಮತ್ತೆ ಯಾರು? ಕೊಯಮತ್ತೂರಿನ ಚಿನ್ನಿಯಾಂಪಾಳ್ಯಂನ ಪ್ರಖ್ಯಾತ ಸಿಹಿತಿಂಡಿ ಮಾರಾಟ ಮಳಿಗೆಯ ಮಾಲೀಕರು ಹೀಗೆಂದು ಪ್ರಚಾರ ಮಾಡುತ್ತಿದ್ದಾರೆ.
ಚಿನ್ನಿಯಾಂಪಾಳ್ಯಂ ಮಳಿಗೆಯಲ್ಲಿ ಗಿಡಮೂಲಿಕೆಗಳನ್ನು ಬಳಸಿ ಮೈಸೂರುಪಾಕ್ ಅನ್ನು ತಯಾರಿಸಲಾಗಿದೆ. ಇದನ್ನು ಚಿನ್ನಿಯಾಂಪಾಳ್ಯಂ ಮತ್ತು ವೆಲ್ಲಾಲೋರ್ನಲ್ಲಿ ಯಶಸ್ವಿಯಾಗಿ ಪ್ರಯೋಗಿಸಲಾಗಿದ್ದು, ಇದನ್ನು ತಿಂದವರಲ್ಲಿ ಕರೊನಾ ಸೋಂಕು ಗುಣವಾಗಿದೆ. ಕೋವಿಡ್-19 ಸೋಂಕಿನ ಗುಣಲಕ್ಷಣ ಇರುವವರು ಮತ್ತು ಕರೊನಾ ಸೋಂಕಿತರಿಗೆ ಮೈಸೂರುಪಾಕ್ ಅನ್ನು ಉಚಿತವಾಗಿ ಸರಬರಾಜು ಮಾಡುವುದಾಗಿ ಅಂಗಡಿಯ ಮಾಲೀಕ ಹೇಳಿಕೊಂಡಿದ್ದಾರೆ.
ಗಿಡಮೂಲಿಕೆಯ ಮೈಸೂರುಪಾಕ್ ತಯಾರಿಸುವ ಸೂತ್ರವನ್ನು ತಾನು ಕೇಂದ್ರ ಸರ್ಕಾರದೊಂದಿಗೆ ಹಂಚಿಕೊಳ್ಳಲು ಸಿದ್ಧ ಎಂದೂ ಹೇಳಿದ್ದರು. ಆದರೆ, ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಇವರ ಹೇಳಿಕೆ ಸಹ್ಯವಾಗದ ಹಿನ್ನೆಲೆಯಲ್ಲಿ ಅವರ ವಿರುದ್ಧ ತನಿಖೆ ಆರಂಭಿಸಿದ್ದಾರೆ.
ಅವರ ಈ ಹೇಳಿಕೆ ಸಾಂಕ್ರಾಮಿಕ ರೋಗಗಳ ಕಾಯ್ದೆ, 1897ರ ಸ್ಪಷ್ಟ ಉಲ್ಲಂಘನೆಯಾಗುತ್ತದೆ. ಕರೊನಾ ವೈರಾಣು ಹರಡದಂತೆ ತಡೆಯಬೇಕು ಎಂದು ಸರ್ಕಾರ ಜನರಲ್ಲಿ ಜಾಗೃತಿ ಮೂಡಿಸುತ್ತಿರುವ ಸಂದರ್ಭದಲ್ಲಿ ಜನರನ್ನು ತಪ್ಪುದಾರಿಗೆ ಎಳೆಯುವಂಥ ಇಂಥ ಪ್ರಕಟಣೆ ನೀಡಲಾಗಿದೆ. ಆದ್ದರಿಂದ ಆ ಅಂಗಡಿಯ ಮಾಲೀಕನ ವಿರುದ್ಧ ತನಿಖೆ ಆರಂಭಿಸಲಾಗಿದೆ ಎಂದು ತಮಿಳುನಾಡಿನ ಆರೋಗ್ಯ ಸೇವೆಗಳ ಉಪ ನಿರ್ದೇಶಕ ಜಿ. ರಮೇಶ್ ಕುಮಾರ್ ಹೇಳಿದ್ದಾರೆ.