ಹೆಲ್ಮೆಟ್​ ಧರಿಸದಿದ್ದರೆ ದಂಡಾಸ್ತ್ರ

helmet story
ಕೋಲಾರದಲ್ಲಿ ಹೆಲ್ಮೆಟ್​ ಕಡ್ಡಾಯಗೊಳಿಸಿದ್ದ ಸಂಚಾರಿ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಹೆಲ್ಮೆಟ್​ ಧರಿಸದೆ ಇರುವ ಸಾರ್ವಜನಿಕರಿಗೆ ದಂಡ ವಿಧಿಸುವುತ್ತಿರುವುದು.
Published on

ಕಿರುವಾರ ಎಸ್​.ಸುದರ್ಶನ್​ ಕೋಲಾರ
ಕೋಲಾರದಲ್ಲಿ ದ್ವಿಚಕ್ರವಾಹನ ಸವಾರರು ಹೆಲ್ಮೆಟ್​ ಧರಿಸುವುದನ್ನು ಪೊಲೀಸ್​ ಇಲಾಖೆ ಕಡ್ಡಾಯಗೊಳಿಸಿದ್ದು, ನಿಯಮ ಉಲ್ಲಂಘಿಸುವ ಸವಾರರು ದಂಡ ತೆರಬೇಕಿದೆ.

ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಸೇರಿ ಹಲವು ಜಿಲ್ಲೆಗಳಲ್ಲಿ ಹೆಲ್ಮೆಟ್​ ಕಡ್ಡಾಯ ನಿಯಮವನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲಾಗಿದೆ. ಅದೇ ರೀತಿ ಜಿಲ್ಲೆಯಲ್ಲೂ ಹೆಲ್ಮೆಟ್​ ಕಡ್ಡಾಯಗೊಳಿಸಲು ಪೊಲೀಸ್​ ಇಲಾಖೆ ಕ್ರಮಕೈಗೊಂಡಿದೆ. ಪ್ರತಿ ದಿನ ಕಾರ್ಯಾಚರಣೆ ನಡೆಸುತ್ತಿರುವ ಸಂಚಾರ ಪೊಲೀಸರು ಪ್ರಸಕ್ತ ಸಾಲಿನಲ್ಲಿ ಇದುವರೆಗೂ ಒಟ್ಟು 4,162 ಪ್ರಕರಣ ದಾಖಲಿಸಿ, 20,81,000 ರೂ. ದಂಡ ವಸೂಲು ಮಾಡಿದ್ದಾರೆ.
ಬೆಂಗಳೂರು&ಚೆನ್ನೆ$ ರಾಷ್ಟ್ರೀಯ ಹೆದ್ದಾರಿ, ತಾಲೂಕು, ಗ್ರಾಮಗಳಿಂದ ಜಿಲ್ಲಾ ಕೇಂದ್ರಕ್ಕೆ ದ್ವಿಚಕ್ರ ವಾಹನಗಳಲ್ಲಿ ಆಗಮಿಸುವವರ ಸಂಖ್ಯೆ ಹೆಚ್ಚಿದೆ. ವಾಹನ ದಟ್ಟಣೆ ಹೆಚ್ಚಾಗುತ್ತಿದ್ದು, ಅಪಘಾತ ಪ್ರಕರಣವೂ ಹೆಚ್ಚುತ್ತಿವೆ. ಇದರ ತಡೆಗೆ ಪೊಲೀಸ್​ ಇಲಾಖೆಯಿಂದ ಸಾರ್ವಜನಿಕರಲ್ಲಿ ಅದರಲ್ಲೂ ಯುವಕ, ಯುವತಿಯರಿಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸಲಾಗುತ್ತಿದೆ. ಆದಾಗ್ಯೂ ಎಚ್ಚೆತ್ತುಕೊಳ್ಳದ ಹಿನ್ನೆಲೆಯಲ್ಲಿ ಸಂಚಾರ ಪೊಲೀಸರು ನಗರದ ವಿವಿಧೆಡೆ ಕಾರ್ಯಾಚರಣೆ ನಡೆಸಿ ದ್ವಿಚಕ್ರ ವಾಹನ ಸವಾರರಿಗೆ ದಂಡ ವಿಧಿಸುವ ಜತೆಗೆ ಹೆಲ್ಮೆಟ್​ ಕಡ್ಡಾಯ ಅರಿವು ಮೂಡಿಸುತ್ತಿದ್ದಾರೆ.
ಹೆಲ್ಮೆಟ್​ ಕಡ್ಡಾಯಕ್ಕೆ ಈ ಹಿಂದೆಯೇ ಕೈಗೊಂಡಿದ್ದ ಪೊಲೀಸ ಪ್ರಯತ್ನ ಕೈಗೂಡಿರಲಿಲ್ಲ. ಆದರೆ ಈ ಬಾರಿ ಗಂಭೀರವಾಗಿ ತೆಗೆದುಕೊಂಡಿರುವ ಪೊಲೀಸರು, ಪರಿಣಾಮಕಾರಿಯಾಗಿ ಹೆಲ್ಮೆಟ್​ ಜಾರಿ ಮಾಡಲು ಮುಂದಾಗಿದ್ದಾರೆ. ಹಿಂದೆ ಅಧಿಕಾರಿಗಳು ಕ್ರಮಕೈಗೊಂಡು ವಾಹನ ಸವಾರರಿಗೆ ಜಾಗೃತಿ ಮೂಡಿಸಲು ಮುಂದಾದಾಗ ಮೊದಲು ರಸ್ತೆಗಳನ್ನು ಸಮರ್ಪಕವಾಗಿ ಅಭಿವೃದ್ಧಿಪಡಿಸಿ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಿ, ಆನಂತರ ಸಂಚಾರ ನಿಯಮ ಪಾಲನೆ ಮಾಡುವುದಾಗಿ ಹೇಳುತ್ತಿದ್ದರು. ಈ ನಿಟ್ಟಿನಲ್ಲಿ ನಗರದಲ್ಲಿ ಇಟಿಸಿಎಂ ರಸ್ತೆ, ಅಂತರಗಂಗೆ ರಸ್ತೆ, ಕೋರ್ಟ್​ ವೃತ್ತದಿಂದ ಕೋಟೆ ರಸ್ತೆ, ಎಂಜಿ ರಸ್ತೆ, ದೊಡ್ಡಪೇಟೆ ರಸ್ತೆ ಹೀಗೆ ಹಲವು ರಸ್ತೆಗಳಿಗೆ ಡಾಂಬರೀಕರಣ ಹಾಕಿ ಅಭಿವೃದ್ಧಿಪಡಿಸಲಾಗುತ್ತಿದೆ.

ಪಾಲಕರ ವಿರುದ್ಧ ಪ್ರಕರಣ
ಇತ್ತೀಚೆಗೆ ಅಪ್ರಾಪ್ತರು ದ್ವಿಚಕ್ರ ವಾಹನ ಓಡಿಸುತ್ತಿರುವುದು ಹೆಚ್ಚಾಗಿ ಕಂಡುಬರುತ್ತಿದೆ. ಇಂತಹ ಪ್ರಕರಣದಲ್ಲಿ ವಾಹನ ವಶಪಡಿಸಿಕೊಂಡು ಪಾಲಕರ ವಿರುದ್ಧ ಪ್ರಕರಣ ದಾಖಲಿಸಿ, ದಂಡ ವಿಧಿಸಲಾಗುತ್ತದೆ. ಇನ್ನಾದರೂ ಪಾಲಕರು ಮಕ್ಕಳಿಗೆ ವಾಹನ ಕೊಡದಂತೆ ಎಚ್ಚೆತ್ತುಕೊಳ್ಳಬೇಕು.

ಸ್ವಯಂಪ್ರೇರಿತರಾಗಿ ಹೆಲ್ಮೆಟ್​ ಧರಿಸಿ
ಯುವಕರೇ ಹೆಚ್ಚಾಗಿ ವಾಹನ ಅಪಘಾತಗಳಿಂದ ಮೃತಪಡುತ್ತಿರುವ ಪ್ರಕರಣ ಸಂಭವಿಸುತ್ತಿವೆ. ಅದರಲ್ಲೂ ಕೋಲಾರ ಭಾಗದಲ್ಲಿ ಬಾರ್​, ರೆಸ್ಟೋರೆಂಟ್​ಗಳಲ್ಲಿ ಮೋಜು ಮಸ್ತಿಗಾಗಿ ಬರುವ ಯುವಪಡೆ ಬೈಕ್​ ಚಲಾಯಿಸುವಾಗ ಹೆಲ್ಮೆಟ್​ ಧರಿಸದೆ ಅಪಘಾತಕ್ಕೀಡಾಗಿ ಮೃತಪಟ್ಟಿರುವುದನ್ನು ಕಂಡಿದ್ದೇವೆ. ಮನೆಯಿಂದ ಹೊರಗೆ ಬರುವ ಮುಂಚೆ ಕುಂಟುಬದ ಸದಸ್ಯರ ಬಗ್ಗೆ ಯೋಚನೆ ಮಾಡಬೇಕು. ಕುಟುಂಬಕ್ಕೆ ಆಧಾರವಾಗಿರುವ ಯುವಕರು ಪ್ರಾಣ ಕಳೆದುಕೊಂಡರೆ ಕುಟುಂಬ ಬೀದಿಪಾಲಾಗುತ್ತದೆ. ಆದ್ದರಿಂದ ಬೈಕ್​ ಸವಾರರು ಸ್ವಯಂಪ್ರೇರಿತರಾಗಿ ಹೆಲ್ಮೆಟ್​ ಧರಿಸಬೇಕು ಎಂದು ಇಲಾಖೆ ಮನವಿ ಮಾಡಿದೆ.

ಬೆಳಕು ಚೆಲ್ಲಿದ್ದ ವಿಜಯವಾಣಿ
ಕೋಲಾರದಲ್ಲಿ ಹೆಲ್ಮೆಟ್​ ಕಡ್ಡಾಯ ಯಾವಾಗ…? ಶೀರ್ಷಿಕೆಯಡಿಯಲ್ಲಿ ವಿಜಯವಾಣಿಯಲ್ಲಿ 2023ರ ಅ.27ರಂದು ವರದಿ ಪ್ರಕಟಿಸಲಾಗಿತ್ತು. ಆನಂತರ ನಡೆದ ರಸ್ತೆ ಪ್ರಾಧಿಕಾರದ ಸಭೆಯಲ್ಲಿ ಚರ್ಚಿಸಿ ಹೆಲ್ಮೆಟ್​ ಕಡ್ಡಾಯವಾಗಿ ಜಾರಿಗೊಳಿಸಲು ಅಧಿಕಾರಿಗಳು ತೀರ್ಮಾನಕೈಗೊಂಡಿದ್ದರು. ಈಗ ಹಂತಹಂತವಾಗಿ ಸಾರ್ವಜನಿಕರಲ್ಲಿ ಅರಿವು ಮೂಡಿಸಿ, ಹೆಲ್ಮೆಟ್​ ಕಡ್ಡಾಯಗೊಳಿಸಿದ್ದಾರೆ.

ಸಂಚಾರ ನಿಯಮ ಇನ್ನಷ್ಟು ಬಿಗಿ
ಸಂಚಾರ ನಿಯಮಗಳ ಸಮರ್ಪಕ ಅನುಷ್ಠಾನಕ್ಕೆ ಇಲಾಖೆ ಮುಂದಾಗಿದ್ದು, ಇಡೀ ಜಿಲ್ಲೆಯಲ್ಲಿ ಬೈಕ್​ ಚಲಾಯಿಸುವ ಹಾಗೂ ಹಿಂಬದಿ ಸವಾರರು ಕೂಡ ಹೆಲ್ಮೆಟ್​ ಧರಿಸಬೇಕು ಎಂದು ಎಸ್ಪಿ ನಾರಾಯಣ್​ ಹೇಳಿದ್ದರು. ಸಂಚಾರ ನಿಯಮಗಳನ್ನು ಗಾಳಿಗೆ ತೂರಿದ್ದ ವಾಹನ ಸವಾರರಿಗೆ ಚಾಟಿ ಬೀಸಲು ದಂಡಾಸ್ತ್ರ ಪ್ರಯೋಗಿಸಲಾಗಿದೆ. ರಸ್ತೆ ಅಪಘಾತದಿಂದ ಮೃತ ಪಡುವವರ ಸಂಖ್ಯೆ ನಿಯಂತ್ರಿಸಲು ನಿಯಮ ಬಿಗಿಗೊಳಿಸಲಾಗುತ್ತಿದೆ. ಹೆಲ್ಮೆಟ್​ ಧರಿಸದ ಹಿನ್ನೆಲೆಯಲ್ಲಿ ರಸ್ತೆ ಅಪಘಾತದಲ್ಲಿ ಮೃತಪಟ್ಟ ವಾಹನ ಸವಾರರ ಸಂಖ್ಯೆ 5 ವರ್ಷಗಳಲ್ಲಿ ಜಿಲ್ಲೆಯಲ್ಲಿ ಶೇ.40 ಏರಿಕೆಗೊಂಡಿದ್ದು, 2013ರಿಂದ ಈವರೆಗೂ 450ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಹೆದ್ದಾರಿಯಲ್ಲಿ ಸಂಭವಿಸುವ ಅಪಘಾತಗಳ ಪ್ರಮಾಣಕ್ಕೆ ಲೆಕ್ಕವೇ ಇಲ್ಲದಂತಾಗಿದೆ. ಹೀಗಾಗಿ ಬೈಕ್​ ಸವಾರರಿಗೆ ಹೆಲ್ಮೆಟ್​ ಕಡ್ಡಾಯಗೊಳಿಸಲು ಆದೇಶಿಸಲಾಗಿದೆ ಎಂದು ಎಸ್ಪಿ ತಿಳಿಸಿದ್ದಾರೆ.

ಹೆಲ್ಮೆಟ್​ ಧರಿಸುವ ಬಗ್ಗೆ ಪೊಲೀಸ್​ ಇಲಾಖೆಯಿಂದ ಈಗಾಗಲೇ ವ್ಯಾಪಕ ಜಾಗೃತಿ ಮೂಡಿಸಲಾಗಿದೆ. ಈ ವಿಚಾರದಲ್ಲಿ ಯಾರಿಗೂ ವಿನಾಯಿತಿ ನೀಡುವುದಿಲ್ಲ. ಪೊಲೀಸ್​ ಇಲಾಖೆ ಆಪರೇಷನ್​ ಹೆಲ್ಮೆಟ್​ ಕಾರ್ಯಾಚರಣೆಗಿಳಿದು ಸಂಚಾರ ನಿಯಮ ಇನ್ನಷ್ಟು ಬಿಗಿ ಮಾಡಲಾಗುವುದು.
-ಎಂ.ನಾರಾಯಣ, ಎಸ್ಪಿ, ಕೋಲಾರ

ಹೆಲ್ಮೆಟ್​ ಕಡ್ಡಾಯಗೊಳಿಸಲು ಪೊಲೀಸ್​ ಇಲಾಖೆಗೆ ಮನವಿ ಸಲ್ಲಿಸಲಾಗಿತ್ತು, ನಿರಂತರವಾಗಿ ಸಂಚಾರ ಪೊಲೀಸರು ಕಾರ್ಯಾಚರಣೆ ನಡೆಸಿ ಹೆಲ್ಮೆಟ್​ ಧರಿಸದೆ ಇರುವವರಿಗೆ ಅರಿವು ಮೂಡಿಸುತ್ತಿದ್ದಾರೆ. ಇದು ಪರಿಣಾಮಕಾರಿಯಾಗಬೇಕು.- ಡಾ.ಅರಿವು ಶಿವಪ್ಪ, ಉಪನ್ಯಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net