ತಂಬಾಕಿಗೆ ಉತ್ತಮ ಬೆಲೆ ಸಿಗದಿದ್ದರೆ ಬೀದಿಗಿಳಿದು ಹೋರಾಟ

HOSUR KUMAR
ಹೊಸೂರು ಕುಮಾರ್
Published on

ಹುಣಸೂರು: ಈ ಸಾಲಿನ ತಂಬಾಕು ಮಾರುಕಟ್ಟೆ ವಹಿವಾಟು ಆರಂಭಿಸಿ 20 ದಿನಗಳೊಳಗೆ ತಂಬಾಕಿನ ಬೆಲೆ ಕುಸಿತ ಕಂಡಿದ್ದು, ಇನ್ನೊಂದು ವಾರದೊಳಗೆ ಉತ್ತಮ ಬೆಲೆ ಸಿಗದಿದ್ದರೆ ರೈತ ಸಂಘ ಬೀದಿಗಿಳಿದು ಹೋರಾಟ ನಡಸಲಿದೆ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್ ಎಚ್ಚರಿಸಿದ್ದಾರೆ.

ಈ ವರ್ಷ ಕರ್ನಾಟಕ ರಾಜ್ಯದಲ್ಲಿ ತಂಬಾಕು ಬೆಳೆಗಾರರು ಮಂಡಳಿ ನಿರ್ಧರಿಸಿದ್ದ ನಿಗದಿತ ಪ್ರಮಾಣಕ್ಕಿಂತ ಕಡಿಮೆ ಪ್ರಮಾಣದಲ್ಲಿ ತಂಬಾಕು ಬೆಳೆದಿದ್ದು, ಉತ್ತಮ ಗುಣಮಟ್ಟದ ತಂಬಾಕನ್ನು ಉತ್ಪಾದನೆ ಮಾಡಿರುತ್ತಾರೆ. ಉತ್ತಮ ದರ್ಜೆಯ ತಂಬಾಕನ್ನು ಬೆಳೆದಿರುವ ರೈತರು ಒಳ್ಳೆಯ ಮಾರುಕಟ್ಟೆ ಬೆಲೆಯ ನಿರೀಕ್ಷೆಯಲ್ಲಿದ್ದ ಇದೀಗ ನಿರಾಸೆ ಉಂಟು ಮಾಡುತ್ತಿರುವ ಮಂಡಳಿ ಹಾಗೂ ಕಂಪನಿಯ ವಿರುದ್ಧ ಹೋರಾಟ ನಡೆಸುವ ಅನಿವಾರ್ಯತೆ ಬಂದೊದಗಿದೆ. ಆಂಧ್ರದ ತಂಬಾಕು ಮಾರುಕಟ್ಟೆಯಲ್ಲಿ ಕೆಜಿ ತಂಬಾಕಿಗೆ 455 ರೂ.ಗಳಿಗೆ ಖರೀದಿ ಮಾಡಲಾಗುತ್ತಿದ್ದು ಇದೇ ತಂಬಾಕಿಗೆ ರಾಜ್ಯದಲ್ಲಿ ಕೇವಲ 300 ರೂ.ಗಳಂತೆ ಖರೀದಿ ಮಾಡುತ್ತಿರುವುದು ಅನ್ಯಾಯವಾಗಿದೆ ಎಂದು ಬೇಸರಿಸಿದರು.

ರಾಜ್ಯದಲ್ಲಿ ಆರಂಭದ ದಿನದಲ್ಲಿ 320 ರೂ.ಗಳಿಗೆ ತಂಬಾಕು ಖರೀದಿ ಮಾಡಿದ್ದು ಮುಂದಿನ ದಿನಗಳಲ್ಲಿ ಹೆಚ್ಚಿನ ಬೆಲೆ ನೀಡುತ್ತೇವೆಂದು ಮಂಡಳಿಯವರು ಆಶ್ವಾಸನೆ ನೀಡಿದ್ದರು. ತಂಬಾಕು ಮಾರುಕಟ್ಟೆ ಪ್ರಾರಂಭವಾಗಿ 22 ದಿನಗಳೇ ಕಳೆದಿದ್ದು ಈಗಾಗಲೇ 5 ರಿಂದ 6 ಮಿಲಿಯನ್ ತಂಬಾಕು ಮಾರಾಟವಾಗಿರುತ್ತದೆ. ಈಗಾಗಲೇ ಮಾರಾಟ ಮಾಡಿರುವ ತಂಬಾಕು ಬೆಳೆಗಾರರಿಗೆ ಕೆಜಿಗೆ 150 ರೂ.ಗಳಂತೆ ನಷ್ಟದಲ್ಲಿ ಮಾರಾಟ ಮಾಡಿರುತ್ತಾನೆ. ಆಂಧ್ರ ಮಾರುಕಟ್ಟೆ ಮತ್ತು ಕರ್ನಾಟಕದ ಮಾರುಕಟ್ಟೆಯನ್ನು ಹೋಲಿಸಿದರೆ 7ರಿಂದ 8 ಕೋಟಿ ರೂ.ಗಳ ಕಡಿಮೆ ಬೆಲೆಗೆ ಮಾರಾಟವಾಗಿದ್ದು ರಾಜ್ಯದ ತಂಬಾಕು ಬೆಳೆಗಾರರಿಗೆ ಲಕ್ಷಾನುಗಟ್ಟಲೇ ನಷ್ಟ ಉಂಟಾಗಿರುತ್ತದೆ. ಇದಕ್ಕೆ ಮುಖ್ಯ ಕಾರಣ ಮಂಡಳಿ ಮತ್ತು ವರ್ತಕರ ನೀತಿಯಿಂದಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲೂ ರಾಜ್ಯದ ತಂಬಾಕಿಗೆ ಉತ್ತಮ ಬೇಡಿಕೆ ಇದ್ದರೂ ಮಂಡಳಿಯಿಂದ ಹಾಗೂ ವರ್ತಕರಿಂದ ರೈತರಿಗೆ ಅನ್ಯಾಯವಾಗುತ್ತಲೇ ಬಂದಿದೆ. ನಮ್ಮನ್ನು ನಾವು ರಕ್ಷಿಸಿಕೊಳ್ಳಲು ಹೋರಾಟದ ಮಾರ್ಗವೇ ಅನಿವಾರ್ಯವೆಂದು ಜಿಲ್ಲಾಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net