

ಚಿಕ್ಕಮಗಳೂರು: ಸಮಾಜವನ್ನು ವ್ಯಸನಮುಕ್ತಗೊಳಿಸುವಲ್ಲಿ ಪಾಲಕರ ಪಾತ್ರ ಮುಖ್ಯ. ಮಕ್ಕಳನ್ನು ಡಾಕ್ಟರ್, ಇಂಜಿನಿಯರ್ ಮಾಡುವುದರ ಜತೆಗೆ ಅವರಲ್ಲಿ ಉತ್ತಮ ಸಂಸ್ಕಾರ ಬೆಳೆಸಬೇಕು. ಆಗ ಇಡೀ ಸಮಾಜವನ್ನು ವ್ಯಸನಮುಕ್ತಗೊಳಿಸಲು ಸಾಧ್ಯ ಎಂದು ಜಿಲ್ಲಾ ಕಾರಾಗೃಹ ಅಧೀಕ್ಷಕ ಶ್ರೀಶೈಲ ಎಸ್. ಮೇಟಿ ಅಭಿಪ್ರಾಯಪಟ್ಟರು.
ನಗರದ ಜಿಲ್ಲಾ ಕಾರಾಗೃಹ ಮತ್ತು ಸುಧಾರಣಾ ಸೇವಾ ಇಲಾಖೆ, ನಿಮ್ಹಾನ್ಸ್ ಆಸ್ಪತ್ರೆ, ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್ಸ್‌ನಿಂದ ಮಂಗಳವಾರ ಕಾರಾಗೃಹದಲ್ಲಿ ವ್ಯಸನಮುಕ್ತ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದರು.
ಸಮಾಜವನ್ನು ದುಶ್ಚಟಗಳಿಂದ ಮುಕ್ತಗೊಳಿಸಿ ರಕ್ಷಿಸಬೇಕಿದೆ. ಈ ನಿಟ್ಟಿನಲ್ಲಿ ದೇಶದ ಪ್ರತಿಯೊಬ್ಬ ಪ್ರಜೆಯೂ ಸಮಾಜಮುಖಿಯಾಗಿ ಕಾರ್ಯನಿರ್ವಹಿಸಬೇಕು. ವ್ಯಸನದಿಂದ ದೂರವಿರಲು ಸಮತೋಲನ ಆಹಾರ ಸೇವನೆ, ವ್ಯಾಯಾಮ ಇತರ ಆರೋಗ್ಯಕರ ಹವ್ಯಾಸಗಳನ್ನು ರೂಢಿಸಿಕೊಳ್ಳಬೇಕು. ದುಶ್ಚಟಗಳಿಂದ ದೂರವಿರಲು ಯುವಕರಲ್ಲಿ ಜಾಗೃತಿ ಮೂಡಿಸಬೇಕು. ಮಾದಕ ವ್ಯಸನವು ಮಿದುಳಿಗೆ ಸಂಬಂಧಿಸಿದ ಕಾಯಿಲೆ. ಮಾದಕ ವ್ಯಸನಗಳನ್ನು ಲಘುವಾಗಿ ಪರಿಗಣಿಸದೆ ಅವುಗಳ ವಿರುದ್ಧ ಹೋರಾಡುವುದು ಅವಶ್ಯ ಎಂದು ಹೇಳಿದರು.
ವ್ಯಸನಮುಕ್ತ ಸಮಾಜ ನಿರ್ಮಾಣ ಕಾರ್ಯದಲ್ಲಿ ಡಾ. ಮಹಾಂತ ಶ್ರೀಗಳ ಪಾತ್ರ ಮುಖ್ಯವಾಗಿದೆ. ಅವರ ಈ ಕಾರ್ಯಕ್ಕೆ ನಾವೆಲ್ಲರೂ ಪಣತೊಡುವ ಅಗತ್ಯವಿದೆ. ಯುವಜನರು ಹೆತ್ತವರ ಆಶಯ ಮತ್ತು ಕನಸುಗಳನ್ನು ಅರ್ಥಮಾಡಿಕೊಂಡು ಉತ್ತಮ ಭವಿಷ್ಯಕ್ಕಾಗಿ ವ್ಯಸನಗಳಿಂದ ದೂರವಿರಬೇಕು ಎಂದು ತಿಳಿಸಿದರು.
ಬೆಂಗಳೂರು ನಿಮ್ಹಾನ್ಸ್ ಆಸ್ಪತ್ರೆ ಸಹಾಯಕ ಪ್ರಾಧ್ಯಾಪಕ ಡಾ. ಜಯಂತ್ ಮಹಾದೇವನ್ ಮಾತನಾಡಿ, ವ್ಯಸನದಿಂದ ಬಳಲುತ್ತಿರುವವರು ಕೆಲವೊಂದು ವಸ್ತುಗಳಿಗೆ ದಾಸರಾಗಿರುತ್ತಾರೆ. ವ್ಯಸನದಿಂದ ಮುಂದಿನ ಜೀವನದಲ್ಲಿ ಆರೋಗ್ಯ ಸಮಸ್ಯೆ ಎದುರಾಗುವ ವಿಷಯ ಅರಿತಿದ್ದರೂ ಅದರಿಂದ ಹೊರಬರಲು ಸಾಧ್ಯವಾಗದೆ ಪರಿತಪಿಸುತ್ತಾರೆ. ಅಂಥವರಿಗೆ ಜಾಗೃತಿ ಮೂಡಿಸಿ ವ್ಯಸನಮುಕ್ತಗೊಳಿಸಲು ಅರಿವು ಮೂಡಿಸಲಾಗುತ್ತಿದೆ ಎಂದರು.
ದುಶ್ಚಟಗಳಿಂದ ಆರೋಗ್ಯದ ಮೇಲೆ ಉಂಟಾಗುವ ದುಷ್ಪರಿಣಾಮ ಕುರಿತು ಚಿತ್ರಗಳುಳ್ಳ ಬ್ಯಾನರ್‌ನ್ನು ಜಿಲ್ಲಾ ಕಾರಾಗೃಹ ಅಧೀಕ್ಷಕ ಬಿಡುಗಡೆಗೊಳಿಸಿದರು. ಜಿಲ್ಲಾ ಕಾರಾಗೃಹ ಸಹಾಯಕ ಜೈಲರ್ ಎಂ.ಕೆ.ನೆಲಧರಿ, ಜಿಲ್ಲಾಸ್ಪತ್ರೆ ಮಾನಸಿಕ ಆರೋಗ್ಯ ತಜ್ಞ ಡಾ. ಚಂದ್ರಶೇಖರ್, ಡಿಎಲ್‌ಎಸ್‌ಎ ಉಪ ಕಾನೂನು ಅಭಿರಕ್ಷಕ ಡಿ.ನಟರಾಜ್, ನಿಮ್ಹಾನ್ಸ್ ಆಸ್ಪತ್ರೆ ವೈದ್ಯ ಡಾ. ರಾಹುಲ್ ಶರ್ಮ, ಡಾ. ಹರ್ಷಿತ್ ದೋವ, ಎನ್‌ಜಿಒ ಡಿ.ಪ್ರವೀಣ್‌ಕುಮಾರ್ ಇತರರಿದ್ದರು.