

Operation Sindoor : ಕಾಶ್ಮೀರದ ಪಹಲ್ಗಾಮ್‌ನಲ್ಲಿ 26 ಅಮಾಯಕರನ್ನು ಬಲಿ ಪಡೆದ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಭಾರತ ನಡೆಸಿದ ಆಪರೇಷನ್ ಸಿಂಧೂರ ಬಗ್ಗೆ ಸೇನಾ ಮುಖ್ಯಸ್ಥ (COAS) ಜನರಲ್ ಉಪೇಂದ್ರ ದ್ವಿವೇದಿ ಪ್ರಮುಖ ಹೇಳಿಕೆ ನೀಡಿದ್ದಾರೆ. ಆಪರೇಷನ್ ಸಿಂಧೂರವು ಭಾರತೀಯ ಮಿಲಿಟರಿ ಕಾರ್ಯಾಚರಣೆಯ ಪಾತ್ರವನ್ನು ಒತ್ತಿಹೇಳುತ್ತದೆ. ಈ ಕಾರ್ಯಾಚರಣೆಯಲ್ಲಿ ನಾವು ಚದುರಂಗದಲ್ಲಿ ಪಾನ್ ಅಥವಾ ಕಾಯಿಗಳಂತೆ ಶತ್ರುಗಳ ಪ್ರತಿಯೊಂದು ಚಲನವಲನಗಳನ್ನು ನಾವು ತಿಳಿದುಕೊಂಡೆವು ಎಂದು ಹೇಳಿದರು.
ಅಂದಹಾಗೆ, ಉಪೇಂದ್ರ ದ್ವಿವೇದಿ ಅವರು ಐಐಟಿ ಮದ್ರಾಸ್‌ನಲ್ಲಿ ಅಗ್ನಿಶೋಧ್-ಭಾರತೀಯ ಸೇನಾ ಸಂಶೋಧನಾ ಕೋಶ (IARC)ವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುವಾಗ ಆಪರೇಷನ್ ಸಿಂಧೂರ ವಿಷಯದ ಕುರಿತು ಆಸಕ್ತಿ ಸಂಗತಿಗಳನ್ನು ಬಹಿರಂಗಪಡಿಸಿದರು.
ಆಪರೇಷನ್ ಸಿಂಧೂರದ ವೇಳೆ ನಾವು ಚೆಸ್ ಆಟವನ್ನು ಆಡಿದ್ದೇವೆ. ಶತ್ರುಗಳ ಮುಂದಿನ ನಡೆಗಳು ಏನು ಮತ್ತು ನಾವು ಏನು ಮಾಡಲಿದ್ದೇವೆ ಎಂಬುದು ನಮಗೆ ತಿಳಿದಿರಲಿಲ್ಲ. ಆದರೆ, ನಾವು ಚೆಸ್ ಆಟದಲ್ಲಿ ಕಾಯಿಗಳಂತೆ ಮುಂದೆ ಸಾಗಿದೆವು. ಶತ್ರುಗಳು ಊಹಿಸಲು ಸಾಧ್ಯವಾಗದ ರೀತಿಯಲ್ಲಿ ನಾವು ದಾಳಿಗಳನ್ನು ನಡೆಸಿದೆವು. ಪಾಕಿಸ್ತಾನ ಮತ್ತು ಪಿಒಕೆಯಲ್ಲಿನ ಭಯೋತ್ಪಾದಕ ಶಿಬಿರಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ. ಎಲ್ಲೋ ಒಂದು ಕಡೆ ನಾವು ಅವರಿಗೆ ಚೆಕ್‌ಮೇಟ್ ನೀಡುತ್ತಿದ್ದೆವು. ಆದರೆ, ಅದೇ ಸಮಯದಲ್ಲಿ ನಮ್ಮದನ್ನು ಕಳೆದುಕೊಳ್ಳುವ ಅಪಾಯದಲ್ಲಿದ್ದೆವು. ಜೀವನ ಕೂಡ ಅಷ್ಟೆ ಅಲ್ಲವೇ ಎಂದು ಉಪೇಂದ್ರ ದ್ವಿವೇದಿ ಹೇಳಿದರು.
ಏಪ್ರಿಲ್ 22 ರಂದು ಪಹಲ್ಗಾಮ್‌ನಲ್ಲಿ ನಡೆದ ಘಟನೆ ದೇಶವನ್ನೇ ಬೆಚ್ಚಿಬೀಳಿಸಿದೆ. ಮರುದಿನ ಅಂದರೆ, ಏಪ್ರಿಲ್ 23 ರಂದು ನಾವೆಲ್ಲರೂ ಭೇಟಿಯಾದೆವು. ಈ ವೇಳೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಹಿಸಿಕೊಂಡಿದ್ದು "ಸಾಕು ಸಾಕು" ಎಂದು ಹೇಳಿದರು. ಇದೇ ಮೊದಲ ಬಾರಿಗೆ ಆ ಮಾತನ್ನು ಅವರು ಹೇಳಿದರು. ಮೂವರು ಸೇನಾ ಮುಖ್ಯಸ್ಥರಿಗೆ ಏನಾದರೂ ಮಾಡಬೇಕು ಎಂಬುದು ಅಷ್ಟರಲ್ಲಾಗಲೇ ಸ್ಪಷ್ಟವಾಗಿತ್ತು. ಅದೇ ರೀತಿ ಏನು ಮಾಡಬೇಕೆಂದು ನಿರ್ಧರಿಸಲು ರಕ್ಷಣಾ ಸಚಿವರು ಕೂಡ ನಮಗೆ ಸ್ವಾತಂತ್ರ್ಯ ನೀಡಿದರು. ಅದು ನಮ್ಮ ನೈತಿಕತೆಯನ್ನು ಹೆಚ್ಚಿಸಿತು. ಏಪ್ರಿಲ್ 29ರಂದು ನಾವು ಮೊದಲ ಬಾರಿಗೆ ಪ್ರಧಾನಿಯನ್ನು ಭೇಟಿ ಮಾಡಿದೆವು. ಆಪರೇಷನ್ ಸಿಂಧೂರ ಎಂಬ ಹೆಸರನ್ನು ನೀಡಲಾಯಿತು. ಇದೇ ಹೆಸರು ಇಡೀ ದೇಶವನ್ನೇ ರೋಮಾಂಚನಗೊಳಿಸಿದೆ ಎಂದು ಉಪೇಂದ್ರ ದ್ವಿವೇದಿ ಹೇಳಿದರು.
ಆಪರೇಷನ್ ಸಿಂಧೂರ ವೇಳೆ ತಾವೇ ಗೆದ್ದಿರುವುದಾಗಿ ಎಲ್ಲೆಡೆ ಹೇಳಿಕೊಂದು ಬೀಗುತ್ತಿರುವ ಪಾಕಿಸ್ತಾನಕ್ಕೆ ಇದೇ ಸಮಯದಲ್ಲಿ ದ್ವಿವೇದಿ ತಿರುಗೇಟು ನೀಡಿದರು. ಭಾರತ ಪಾಕಿಸ್ತಾನದ ವಿರುದ್ಧ ಗೆದ್ದಿದೆಯೇ ಅಥವಾ ಸೋತಿದೆಯೇ ಎಂದು ನೀವು ಪಾಕ್ ಪ್ರಜೆಗಳನ್ನು ಕೇಳಿದರೆ ಗೊತ್ತಾಗುತ್ತದೆ ಎಂದರು. (ಏಜೆನ್ಸೀಸ್)