15 ದಿನ ಜೈಲಿನಲ್ಲಿದ್ದು ಬಂದರೆ ಸರಿಹೋಗ್ತೀರಿ..!: ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಹೈಕೋರ್ಟ್ ತರಾಟೆ

highcourt
Published on

ಬೆಂಗಳೂರು : ಆರೋಪಿಗಳು ಉನ್ನತ ಹುದ್ದೆಯಲ್ಲಿದ್ದಾರೆ ಎಂದು ನೀವು ಈವರೆಗೆ ಏನು ಮಾಡಿಲ್ಲ? ನಿಮಗೆ ಇನ್ನೆರಡು ವಾರ ಸಮಯ ಕೊಡುತ್ತೇನೆ. ಅಷ್ಟರೊಳಗೆ ಏನಾದರೂ ಕ್ರಮಕ್ಕೆ ಮುಂದಾಗಬಹುದಾ ನೋಡಿ. ಇಲ್ಲ, ಅಸಮರ್ಥರು ಎಂದಾದರೆ ನಿಮ್ಮನ್ನು ಎಲ್ಲಿಗೆ ಕಳಿಸಬೇಕೋ ಅಲ್ಲಿಗೇ ಕಳಿಸುತ್ತೇನೆ. ಹದಿನೈದು ದಿನ ಜೈಲಿನಲ್ಲಿದ್ದು ಬಂದರೆ ಸರಿಹೋಗ್ತೀರಿ...!

ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹಾಗೂ ಅವರ ಸಂಬಂಧಿ ಮಾಜಿ ಶಾಸಕ ಡಿ.ಸಿ. ತಮ್ಮಣ್ಣ ಮತ್ತಿತರರು ರಾಮನಗರ ಜಿಲ್ಲೆ ಬಿಡದಿ ಹೋಬಳಿಯ ಕೇತಗಾನಹಳ್ಳಿ ವ್ಯಾಪ್ತಿಯಲ್ಲಿ 14 ಎಕರೆ ಸರ್ಕಾರಿ ಜಮೀನು ಒತ್ತುವರಿ ಮಾಡಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದ ಅರ್ಜಿ ವಿಚಾರಣೆ ವೇಳೆ ಖುದ್ದು ಹಾಜರಿದ್ದ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರಕುಮಾರ್ ಕಠಾರಿಯಾ ಅವರನ್ನು ಹೈಕೋರ್ಟ್ ತರಾಟೆಗೆ ತೆಗೆದುಕೊಂಡ ಪರಿಯಿದು.

ಭೂ ಕಬಳಿಕೆ ಆರೋಪಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ನೀಡಿರುವ ಆದೇಶ ಜಾರಿಗೊಳಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಆಕ್ಷೇಪಿಸಿ ಎಸ್.ಆರ್.ಹಿರೇಮಠ ನೇತೃತ್ವದ ಸಮಾಜ ಪರಿವರ್ತನಾ ಸಮುದಾಯ ಸಲ್ಲಿಸಿರುವ ಸಿವಿಲ್ ನ್ಯಾಯಾಂಗ ನಿಂದನೆ ಅರ್ಜಿಯನ್ನು ನ್ಯಾಯಮೂರ್ತಿ ಕೆ. ಸೋಮಶೇಖರ್ ನೇತೃತ್ವದ ವಿಭಾಗೀಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.

ಈ ವೇಳೆ ನ್ಯಾಯಪೀಠ, ಸುಪ್ರೀಂ ಕೋರ್ಟ್ ಆದೇಶವೊಂದರಲ್ಲಿ ನ್ಯಾಯಾಂಗ ನಿಂದನೆ ಮೊಕದ್ದಮೆಗಳಲ್ಲಿ ಅದೂ ಸಾರ್ವಜನಿಕ ಕಾಳಜಿಯುಳ್ಳ ಪ್ರಕರಣಗಳಲ್ಲಿ ಆಡಳಿತಾಂಗಕ್ಕೆ ಕಿಂಚಿತ್ತೂ ಕರುಣೆ ತೋರಬಾರದು ಎಂದಿದೆ. ಇದನ್ನೇ ನಾನೂ ಅನುಸರಿಸಬೇಕಾಗುತ್ತದೆ. ನಿಮ್ಮ ವಿರುದ್ಧ ಈಗಲೇ ನ್ಯಾಯಾಂಗ ನಿಂದನೆಯ ದೋಷಾರೋಪ ನಿಗದಿಗೊಳಿಸುವ ಪ್ರಕ್ರಿಯೆ ಆರಂಭಿಸುತ್ತೇನೆ ಎಂದು ಕಿಡಿಕಾರಿತು. ಈ ವಿಚಾರವಾಗಿ ಗೊಡ್ಡು ನೆಪ ಹೇಳಿ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ. ನ್ಯಾಯಾಲಯದ ಆದೇಶಗಳನ್ನು ಪಾಲನೆ ಮಾಡುವವರೆಗೆ ನಿಮ್ಮ ಸಂಬಳ ಕಡಿತಗೊಳಿಸಿದರೆ ಸರಿಮಾಡಿಕೊಳ್ಳುವಿರಿ ಎಂದು ಎಚ್ಚರಿಸಿತು.

ಹೆಚ್ಚುವರಿ ಅಡ್ವೊಕೇಟ್ ಜನರಲ್ ಕಿರಣ್ ರೋಣ, ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರ ಕೈಗೊಂಡಿರುವ ಕ್ರಮ ಮತ್ತು ಈ ತನಕ ಹೈಕೋರ್ಟ್‌ಗೆ ಸಲ್ಲಿಸಿರುವ ಅನುಪಾಲನಾ ಪ್ರಮಾಣಪತ್ರಗಳ ಕುರಿತಂತೆ ವಿವರಿಸಲು ಮುಂದಾದರು. ಹೈಕೋರ್ಟ್ ಆದೇಶದ ಅನುಪಾಲನೆಗೆ ಮೂರು ತಿಂಗಳಾದರೂ ಕಾಲಾವಕಾಶ ನೀಡಬೇಕು ಎಂದು ಕೋರಿದರು. ಆದರೆ ನ್ಯಾಯಪೀಠ, ಈ ಮನವಿಯನ್ನು ಬಲವಾಗಿ ತಳ್ಳಿ ಹಾಕಿತು. ‘ಇನ್ನೆರಡು ವಾರಗಳ ಕಾಲಾವಕಾಶ ನೀಡುತ್ತೇನೆ.

ಅಷ್ಟರೊಳಗೆ ಪಾಲಿಸಿದರೆ ಸರಿ. ಇಲ್ಲದೆ ಹೋದಲ್ಲಿ ಎಲ್ಲ ಪ್ರತಿವಾದಿಗಳನ್ನೂ ಎಸ್ಕಾರ್ಟ್ ಕೊಟ್ಟು ಕರೆಯಿಸಿಬಿಡುತ್ತೇನೆ. ಅಧಿಕಾರಿಗಳನ್ನು ಎಲ್ಲಿಗೆ ಕಳುಹಿಸಬೇಕೋ ಅಲ್ಲಿಗೆ ಕಳುಹಿಸುತ್ತೇನೆ. ಯಾವುದಾದರೂ ವಿಷಯಕ್ಕೆ ಎಸ್‌ಐಟಿ ರಚಿಸುವುದು ಸರ್ಕಾರಕ್ಕೆ ರೂಢಿಯಾಗಿಬಿಟ್ಟಿದೆ’ ಎಂದು ನ್ಯಾಯಮೂರ್ತಿ ಸೋಮಶೇಖರ್ ಚಾಟಿ ಬೀಸಿದರು. ಬಳೀಕ ವಿಚಾರಣೆಯನ್ನು ಫೆ.21ಕ್ಕೆ ಮುಂದೂಡಿದರು.

ಹಿಂದಿನ ವಿಚಾರಣೆ ವೇಳೆ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಖುದ್ದು ಹಾಜರಿರಬೇಕು ಎಂದು ನ್ಯಾಯಪೀಠ ಆದೇಶಿಸಿತ್ತು.

ಭ್ರಷ್ಟತೆ ಪರಿಧಿಯಿಂದ ಹೊರಬನ್ನಿ...

ರಾಜೇಂದ್ರಕುಮಾರ್ ಕಠಾರಿಯಾ ಅವರು ನ್ಯಾಯಪೀಠಕ್ಕೆ ವಿವರಣೆ ಕೊಡಲು ಮುಂದಾಗಲೆಲ್ಲ ನ್ಯಾಯಮೂರ್ತಿ ಸೋಮಶೇಖರ್, ಬ್ಯುರೋಕ್ರಾಟ್‌ಗಳಿಗೆ ನ್ಯಾಯಾಂಗದ ಭಾಷೆಯೇ ಅರ್ಥವಾಗುತ್ತಿಲ್ಲ. ನೋಡಿ ನೀವು ಹೇಳಿದ್ದನ್ನೆಲ್ಲ ನಾನು ಬರೆದುಕೊಳ್ಳುತ್ತೇನೆ. ಸತ್ಯ ಹೇಳಿದರೂ ಸರಿ, ಸುಳ್ಳು ಹೇಳಿದರೂ ಸರಿ. ನಾನು ನಿಮ್ಮೆಲ್ಲರ ನಾಡಿಮಿಡಿತ ಅರ್ಥ ಮಾಡಿಕೊಳ್ಳಬಲ್ಲೆ.

ಈ ಪೀಠ ಅಷ್ಟು ಸುಲಭದ್ದಲ್ಲ. ಅವಕಾಶ ದೊರೆತಲ್ಲಿ ನಿಮ್ಮನ್ನೆಲ್ಲ ಫಿಕ್ಸ್ ಮಾಡಿಬಿಡ್ತೀನಿ ಎಂದು ಕಿಡಿ ಕಾರಿದರು. ಒಂದು ಹಂತದಲ್ಲಿ ಕಠಾರಿಯಾ, ಸರ್, ವ್ಯವಸ್ಥೆ ತುಂಬಾ ಕೆಟ್ಟದಾಗಿದೆ. ಸರ್ಕಾರ ತನ್ನೆಲ್ಲ ಪ್ರಯತ್ನ ಮಾಡುತ್ತಿದೆ. ಕಳೆದೊಂದು ವರ್ಷದಲ್ಲಿ ನಾವು 14 ಎಕರೆಗೂ ಹೆಚ್ಚು ಅಕ್ರಮಿತ ಸರ್ಕಾರಿ ಜಾಗವನ್ನು ವಶಕ್ಕೆ ಪಡೆದಿದ್ದೇವೆ. ಸಮಗ್ರ ಮತ್ತು ನಿಷ್ಪಕ್ಷಪಾತ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಎಸ್‌ಐಟಿ ರಚನೆ ಮಾಡಿದ್ದೇವೆ. ಭ್ರಷ್ಟಾಚಾರ ನಿರ್ಮೂಲನೆಗೆ ಶ್ರಮಿಸುತ್ತಿದ್ದೇವೆ’ ಎಂದರು. ಇದಕ್ಕೆ ದನಿಗೂಡಿಸಿದ ಕಿರಣ್ ವಿ. ರೋಣ, ‘ಹೌದು ಸ್ವಾಮಿ. ಇವರು ಕಂದಾಯ ಇಲಾಖೆಯ ಸುಧಾರಣೆಗೆ ಇ-ಖಾತಾ ವ್ಯವಸ್ಥೆ ರೂಪಿಸಿದ್ದಾರೆ’ ಎಂದರು. ಈ ವೇಳೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ಸೋಮಶೇಖರ್, ಇ-ಖಾತಾ ಎಂಬುದೇ ಭ್ರಷ್ಟಾಚಾರದ ಆಗರ. ನಮ್ಮಲ್ಲಿ ಮಾನಸಿಕ ಭ್ರಷ್ಟಾಚಾರ, ಪೂರ್ವಾಗ್ರಹಪೀಡಿತ ಭಾವನೆಯ ಭ್ರಷ್ಟಾಚಾರ, ಹಣದ ಭ್ರಷ್ಟಾಚಾರ ಎಂಬೆಲ್ಲ ಶ್ರೇಣಿಕೃತ ವ್ಯವಸ್ಥೆ ಇದೆ. ಮೊದಲು ಪೂರ್ವಾಗ್ರಹಪೀಡಿತ ಭಾವನೆಯ ಭ್ರಷ್ಟತೆ ಪರಿಧಿಯಿಂದ ಹೊರಬನ್ನಿ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net