ಮಹಿಳೆಯರಿಗೆ ನಾಯಕತ್ವ ನೀಡಿದರೆ ಸಂಘಟನೆಗೆ ಬಲ

31HDK 01
ಎಚ್.ಡಿ.ಕೋಟೆಯಲ್ಲಿ ದಸಂಸ ವತಿಯಿಂದ ಆಯೋಜಿಸಿದ್ದ ವಿಚಾರ ಸಂಕಿರಣವನ್ನು ಗಣ್ಯರು ಅರಳಿ ಗಿಡಕ್ಕೆ ನೀರು ಹಾಕುವ ಮೂಲಕ ಉದ್ಘಾಟಿಸಿದರು.
Published on

ಎಚ್.ಡಿ.ಕೋಟೆ: ಮಹಿಳೆಯರಿಗೆ ನಾಯಕತ್ವ ಕೊಟ್ಟರೆ ಸಂಘಟನೆಗಳು ಗಟ್ಟಿಯಾಗಿ ಬೆಳೆಯಲು ಸಾಧ್ಯ ಎಂದು ರಂಗಕರ್ಮಿ ಜನಾರ್ದನ (ಜನ್ನಿ) ಅಭಿಪ್ರಾಯಪಟ್ಟರು.

ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯದಲ್ಲಿ ಮಂಗಳವಾರ ತಾಲೂಕು ದಲಿತ ಸಂಘರ್ಷ ಸಮಿತಿ ವತಿಯಿಂದ ಆಯೋಜಿಸಿದ್ದ ಬುದ್ಧನ ಹಾದಿಯಲ್ಲಿ ಒಂದು ಹೆಜ್ಜೆ ವಿಚಾರ ಸಂಕಿರಣದಲ್ಲಿ ಮಾತನಾಡಿದರು. ಒಂದು ಸಂಘಟನೆ ಪ್ರಬಲ, ಸೈದ್ಧಾಂತಿಕವಾಗಿ ಮುನ್ನಡೆಗೆ ಬರಲು ಮಹಿಳೆಯರಿಂದ ಸಾಧ್ಯ. ಅಂಬೇಡ್ಕರ್ ಮತ್ತು ಬುದ್ಧನ ಚಿಂತನೆಗಳನ್ನು ನಾವೆಲ್ಲರೂ ಮೈಗೂಡಿಸಿಕೊಂಡಾಗ ಮಾತ್ರ ಅವರ ಆಶಯಗಳಿಗೆ ಬೆಲೆಕೊಟ್ಟಂತೆ ಎಂದರು.

ಸಾಹಿತಿ ಎಸ್.ತುಕಾರಾಂ ಮಾತನಾಡಿ, ಎಡ ಮತ್ತು ಬಲ ಎಂದು ಜಾತಿಗಳ ನಡುವೆ ಕಂದಕ ಸೃಷ್ಟಿಯಾಗಿ ಒಟ್ಟಿಗೆ ಬದುಕುವ ಆಸೆ ಕಮರಿ ಹೋಗಿದೆ. ಸಮಾಜದಲ್ಲಿ ಗಟ್ಟಿತನ ಕ್ಷೀಣಿಸುತ್ತಿದ್ದು, ಬುದ್ಧನತ್ತ ಮುಖ ಮಾಡದಿದ್ದರೆ ಉಳಿಗಾಲವಿಲ್ಲ. ಅಲ್ಲದೆ ದಲಿತ ಚಳವಳಿ ಸಾಮಾಜಿಕವಾಗಿ ಹೋರಾಡಿದ್ದು, ಸಾಂಸ್ಕೃತಿಕವಾಗಿ ಹಿಂದೆ ಬಿದ್ದಿದೆ ಎಂದರು.

ಕಾರ್ಯಕ್ರಮದ ಸಾನ್ನಿಧ್ಯವನ್ನು ಅಂತರಸಂತೆ ಬೌದ್ಧ ವಿಹಾರದ ಬಂತೆ ಗೌತಮಿ ವಹಿಸಿದ್ದರು. ದಸಂಸ ಹಿರಿಯ ಮುಖಂಡ ಹರಿಹರ ಆನಂದಸ್ವಾಮಿ, ತಾಲೂಕು ಆದಿಕರ್ನಾಟಕ ಸಮುದಾಯದ ಅಧ್ಯಕ್ಷ ಎಚ್.ಸಿ.ನರಸಿಂಹಮೂರ್ತಿ, ಸರಗೂರು ಶಿವಣ್ಣ, ರಾಜಶೇಖರ, ಮಣಿಯಯ್ಯ, ಆನಗಟ್ಟಿ ದೇವರಾಜು, ಚಾ.ನಂಜುಂಡ ಮೂರ್ತಿ, ಎಚ್.ಸಿ.ಲಕ್ಷ್ಮಣ್, ಆಕಾಶ್, ಸಣ್ಣಸ್ವಾಮಿ, ಹೈರಿಗೆ ಶಿವರಾಜು, ಮುದ್ದಮಲ್ಲಯ್ಯ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ವೆಂಕಟಸ್ವಾಮಿ, ಭಾಗ್ಯಲಕ್ಷ್ಮೀ, ಮಾಲಿಂಗಯ್ಯ, ಪುಟ್ಟಮಾದು, ಸವ್ವೆ ಸಿದ್ದಯ್ಯ, ಶಿವಣ್ಣ, ಲಿಂಗಯ್ಯ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net