ಇತಿಹಾಸ ಮರೆತರೆ ನಮ್ಮನ್ನು ನಾವೇ ನಾಶ ಮಾಡಿಕೊಂಡಂತೆ

1a61dd22-f37e-424d-8b2e-55a7b190a07b
ನಾಗಮಂಗಲ ಪಟ್ಟಣದ ಶ್ರೀ ಸೌಮ್ಯಕೇಶವ ಸ್ವಾಮಿ ದೇವಾಲಯದ ಆವರಣದಲ್ಲಿ ತಾಲೂಕು ಆಡಳಿತದಿಂದ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡರ ಜಯಂತ್ಯುತ್ಸವನ್ನು ಸಚಿವ ಎನ್.ಚಲುವರಾಯಸ್ವಾಮಿ ಉದ್ಘಾಟಿಸಿದರು.
Published on

ನಾಗಮಂಗಲ: ಹಳೇ ಮೈಸೂರು ಭಾಗ ಇಷ್ಟು ಸುಭಿಕ್ಷವಾಗಿರಲು ನಾಡಪ್ರಭು ಕೆಂಪೇಗೌಡರು ಹಾಗೂ ನಾಲ್ವಡಿ ಕೃಷ್ಣರಾಜ ಒಡೆಯರ್ ಕಾರಣೀಭೂತರಾಗಿದ್ದು ಅವರ ಇತಿಹಾಸವನ್ನು ಮರೆತರೆ ನಮ್ಮನ್ನು ನಾವೇ ನಾಶ ಮಾಡಿಕೊಂಡಂತಾಗುತ್ತದೆ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.

ಪಟ್ಟಣದ ಶ್ರೀ ಸೌಮ್ಯಕೇಶವಸ್ವಾಮಿ ದೇವಾಲಯದ ಆವರಣದಲ್ಲಿ ತಾಲೂಕು ಆಡಳಿತದ ವತಿಯಿಂದ ಶುಕ್ರವಾರ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡ ಜಯಂತ್ಯುತ್ಸವ ಉದ್ಘಾಟಿಸಿ ಮಾತನಾಡಿದರು.

ಕೆಂಪೇಗೌಡರು ಇಂದಿನ ರಾಜಕಾರಣಿಗಳಿಗೆ ಮಾದರಿಯಾಗಿದ್ದಾರೆ. ಕರ್ನಾಟಕದಲ್ಲಿ ಒಂದಿಷ್ಟು ಕೆಲಸ ಮಾಡಲು, ಜನರಿಗೆ ಸೌಲಭ್ಯ ಸಿಗಲು ಕೆಂಪೇಗೌಡರೇ ಕಾರಣರಾಗಿದ್ದಾರೆ. ಹಳೇ ಮೈಸೂರು ಭಾಗ ವಿವಿಧ ಭಾಗಗಳಿಗಿಂತ ಎಲ್ಲ ರೀತಿ ಸುಭಿಕ್ಷವಾಗಿರಲು ಕೆಂಪೇಗೌಡರು ಮತ್ತು ನಾಲ್ವಡಿ ಕೃಷ್ಣರಾಜ ಒಡೆಯರ್ ಕಾರಣರಾಗಿದ್ದಾರೆ. ಅಂದು ಬೆಂಗಳೂರು ನಿರ್ಮಿಸದಿದ್ದರೆ ಇಂದು ನಾವು ಇಷ್ಟು ನೆಮ್ಮದಿಯಾಗಿ ಜೀವನ ನಡೆಸಲು ಸಾಧ್ಯವಾಗುತ್ತಿರಲಿಲ್ಲ ಎಂದರು.

ಕೆಂಪೇಗೌಡರ ಇತಿಹಾಸವನ್ನು ಆಗಾಗ್ಗೆ ಜನರ ಮುಂದೆ ಪ್ರಸ್ತಾಪಿಸಿದರೆ ಮಾತ್ರ ಅವರ ಇತಿಹಾಸ ಉಳಿಯಲಿದೆ. ಜನಪರವಾದ ಇತಿಹಾಸ ನಿರ್ಮಾಣ ಮಾಡುವವರನ್ನು ಆಯ್ಕೆ ಮಾಡುವ ಅಧಿಕಾರ ಜನರ ಕೈಯಲ್ಲಿದೆ. ದೇಶದ ಯಾವ ಮಹಾರಾಜರನ್ನೂ ಕೆಂಪೇಗೌಡರಿಗೆ ಹಾಗೂ ನಾಲ್ವಡಿ ಕೃಷ್ಣರಾಜ ಒಡೆಯರ್‌ಗೆ ಹೋಲಿಕೆ ಮಾಡಲು ಸಾಧ್ಯವಿಲ್ಲ. ಯಾವುದೇ ಮಹನೀಯರ ಜಯಂತಿಗಳನ್ನು ಒಂದು ಜಾತಿಗೆ ಸೀಮಿತಗೊಳಿಸಬಾರದು ಎಂದರು.

ನಾಗಮಂಗಲ ಪುರಸಭೆ ಅಧ್ಯಕ್ಷ ಅಲೀ ಅನ್ಸರ್ ಪಾಷ, ಬೆಳ್ಳೂರು ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಲಕ್ಷ್ಮಮ್ಮ ಮಹೇಶ್, ಪುರಸಭೆ ಉಪಾಧ್ಯಕ್ಷೆ ವಸಂತಾ ಅಶೋಕ್, ತಹಸೀಲ್ದಾರ್ ಆದರ್ಶ್, ಡಿವೈಎಸ್ಪಿ ಚಲುವರಾಜು, ತಾಪಂ ಇಒ ಸತೀಶ್, ಗ್ಯಾರಂಟಿ ಸಮಿತಿ ತಾಲೂಕು ಅಧ್ಯಕ್ಷ ಮೂಡ್ಲಿಗೌಡ, ಪುರಸಭೆ ಸದಸ್ಯರಾದ ತಿಮ್ಮಪ್ಪ, ರಮೇಶ್, ಎಸಿಎಫ್ ಶಿವರಾಮು, ಒಕ್ಕಲಿಗರ ಸಂಘದ ತಾಲೂಕು ಅಧ್ಯಕ್ಷ ಸಿ.ಎನ್.ಮಂಜುನಾಥ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಜೆ.ರಾಜೇಶ್, ಟಿಎಪಿಸಿಎಂಎಸ್ ಅಧ್ಯಕ್ಷೆ ಚಿಕ್ಕಮ್ಮ, ಮುಖಂಡರಾದ ಎಚ್.ಟಿ.ಕೃಷ್ಣೇಗೌಡ, ತಿಮ್ಮರಾಯಿಗೌಡ, ರಾಜೇಗೌಡ, ಸುನೀಲ್ ಲಕ್ಷ್ಮೀಕಾಂತ್, ಸಚಿನ್ ಚಲುವರಾಯಸ್ವಾಮಿ, ಗೀತಾ ದಾಸೇಗೌಡ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net