

ಶಿಕಾರಿಪುರ: ಸಹಕಾರ ಸಂಘಗಳು ಕೃಷಿಕರಿಗೆ ಪೂರಕವಾಗಿ ಕಾರ್ಯನಿರ್ವಹಿಸುತ್ತಿವೆ. ಹಾಗಾಗಿ ಕ್ಷೇತ್ರವನ್ನು ನಾವು ಇನ್ನಷ್ಟು ಬಲಗೊಳಿಸಬೇಕಾದ ಅಗತ್ಯವಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಪಟ್ಟಣದ ಸಾಂಸ್ಕೃತಿಕ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಟಿಎಪಿಸಿಎಂಎಸ್ ವಜ್ರಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಒಂದು ಸಂಸ್ಥೆ ಶಿಸ್ತು, ಸಮರ್ಥ ಆಡಳಿತದಿಂದ ವಜ್ರಮಹೋತ್ಸವ ಆಚರಿಸಿಕೊಳ್ಳುತ್ತಿರುವುದು ಹೆಮ್ಮೆಯ ಸಂಗತಿ ಎಂದರು.
ಸಹಕಾರ ಕ್ಷೇತ್ರದ ಬ್ಯಾಂಕ್‌ಗಳು ಇಂದು ರಾಷ್ಟ್ರೀಕೃತ ಬ್ಯಾಂಕ್‌ಗಳಿಗೆ ಸರಿಸಮನಾಗಿ ಕಾರ್ಯನಿರ್ವಹಿಸುತ್ತಿವೆ. ಸಹಕಾರಿಗಳು ಸಹಕಾರ ಸಂಘಗಳನ್ನು ಬೆಳೆಸುವ ಕಾರ್ಯ ಮಾಡಬೇಕು. ನಾನು ಅಧಿಕಾರದಲ್ಲಿದ್ದಾಗ ತಾಲೂಕನ್ನು ಒಂದು ಮಾದರಿ ತಾಲೂಕನ್ನಾಗಿ ಮಾಡಲು ಶಕ್ತಿಮೀರಿ ಪ್ರಯತ್ನಿಸಿದ್ದೇನೆ. ತಾಲೂಕಿನ ಜನರ ಸಹಕಾರದಿಂದ ಮೂರು ಬಾರಿ ಮುಖ್ಯಮಂತ್ರಿಯಾಗಿ ನಾಡಿನ ಜನರ ಸೇವೆ ಮಾಡಿದ್ದೇನೆ. ನಿಮ್ಮೆಲ್ಲರ ಆಶಯಕ್ಕೆ ತಕ್ಕಂತೆ ಕೆಲಸ ಮಾಡಿದ ತೃಪ್ತಿಯಿದೆ ಎಂದು ಅಭಿಪ್ರಾಯಪಟ್ಟರು.
ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ಸಹಕಾರ ಕ್ಷೇತ್ರ ಹೊಸ ಇತಿಹಾಸವನ್ನೇ ನಿರ್ಮಿಸಿದೆ. ಸಹಕಾರ ಕ್ಷೇತ್ರ ತುಂಬ ಎತ್ತರಕ್ಕೆ ಬೆಳೆದು ನಿಂತಿದೆ. ಸಹಕಾರಿಗಳ ನಿಸ್ವಾರ್ಥ ಸೇವೆಯ ಫಲ. ಸಹಕಾರ ತತ್ವ ವೇ ಸಂಘಟನೆಯ ಮೂಲ ಅಡಿಪಾಯ. ನಾಡಿನ ಅಭಿವೃದ್ಧಿ ಆಗಬೇಕಾದರೆ ಸಹಕಾರ ಕ್ಷೇತ್ರ ಬೆಳೆಯಬೇಕು ಎಂಬುದು ಪ್ರಧಾನಿ ನರೇಂದ್ರ ಮೋದಿ ಅವರ ಆಶಯ. ಅದಕ್ಕಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಶಿಕಾರಿಪುರ ತಾಲೂಕು ಜಿಲ್ಲೆಯಲ್ಲೇ ಅತಿ ಹೆಚ್ಚು ಸಹಕಾರ ಸಂಘಗಳು ಇರುವಂತಹ ತಾಲೂಕು ಎಂದರು.
ಯಡಿಯೂರಪ್ಪ ಅವರು ಅಧಿಕಾರದಲ್ಲಿದ್ದಾಗ ತಾಲೂಕಿನ ರೈತರಿಗೆ ಅನುಕೂಲವಾಗುವ ದೃಷ್ಟಿಯಿಂದ ಉಡುಗಣಿ, ತಾಳಗುಂದ, ಹೊಸೂರು ಹೋಬಳಿಯ ಕೆರೆಗಳನ್ನು ತುಂಗಭದ್ರಾ ನದಿಯಿಂದ ನೀರು ತಂದು ತುಂಬಿಸಲಾಗುತ್ತಿದೆ. ಶಿವಮೊಗ್ಗ ಸಮೀಪದ ಹೊಸಳ್ಳಿ ಹತ್ತಿರ ತುಂಗಾ ನದಿಯಿಂದ ಅಂಜನಾಪುರ ಜಲಾಶಯಕ್ಕೆ ನೀರು ತುಂಬಿಸಲಾಗುತ್ತಿದೆ. ಕಾಳೇನಹಳ್ಳಿ ಸಮೀಪದ ಬ್ಯಾರೇಜ್ ಕೂಡ ತಾಲೂಕಿನ ರೈತರಿಗೆ ವರದಾನವಾಗಿದೆ ಎಂದು ಹೇಳಿದರು.
ತಾಲೂಕಿನ ಜನತೆಯ ಹಿತದೃಷ್ಟಿಯಿಂದ ಶಿವಮೊಗ್ಗ-ರಾಣೆಬೆನ್ನೂರು ರೈಲ್ವೆ ಯೋಜನೆ ಕಾಮಗಾರಿ ಭರದಿಂದ ನಡೆಯುತ್ತಿದೆ. ತಾಲೂಕನ್ನು ಪ್ರವಾಸಿ ತಾಣ ಮಾಡುವ ದೃಷ್ಟಿಯಿಂದ ಶರಣೆ ಅಕ್ಕಮಹಾದೇವಿ ಜನ್ಮಸ್ಥಳ ಉಡುಗಣಿಯನ್ನು ದೆಹಲಿಯ ಅಕ್ಷರಧಾಮದ ಮಾದರಿಯಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿದೆ. ಕಾಳೇನಹಳ್ಳಿ ಸಮೀಪ ರೈತರಿಗೆ ಅನುಕೂಲವಾಗುವಂತೆ ಕೋಲ್ಡ್ ಸ್ಟೋರೇಜ್ ಘಟಕ ನಿರ್ಮಾಣವಾಗುತ್ತಿದೆ ಎಂದರು.
ಟಿಎಪಿಸಿಎಂಎಸ್ ಅಧ್ಯಕ್ಷ ಸುಧೀರ್ ಮಾರವಳ್ಳಿ, ಡಿಸಿಸಿ ಬ್ಯಾಂಕ್ ನಿರ್ದೇಶಕ ಡಿ.ಎಲ್.ಬಸವರಾಜ್, ಎಂಎಡಿಬಿ ಮಾಜಿ ಅಧ್ಯಕ್ಷ ಕೆ.ಎಸ್.ಗುರುಮೂರ್ತಿ, ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಚನ್ನವೀರಪ್ಪ, ನಗರದ ಮಹದೇವಪ್ಪ, ಶಶಿಧರ್, ಬಿ.ಡಿ.ಭೂಕಾಂತ್, ಮಾಜಿ ರಾಘವೇಂದ್ರ ಇತರರಿದ್ದರು.