ಲೋಪ ನಡೆದಿದ್ದರೆ ಆಡಳಿತ ಮಂಡಳಿಯೇ ಹೊಣೆ

govinda gowda
ಬ್ಯಾಲಹಳ್ಳಿ ಗೋವಿಂದಗೌಡ
Published on

ಕೋಲಾರ: ಕೋಲಾರ-ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕಿನಲ್ಲಿ ಆಡಳಿತ ಮಂಡಳಿ ಅಽಕಾರದಲ್ಲಿ ಇದ್ದಾಗ ಯಾವುದೇ ಬೋಗಸ್ ಸಂಘಗಳಿಗೆ ಸಾಲ ನೀಡಿಲ್ಲ. ಒಂದು ವೇಳೆ ಅಧಿಕಾರದಲ್ಲಿ ಲೋಪ ಆಗಿದ್ದರೆ ಮಂಡಳಿಯ ಪ್ರತಿಯೊಬ್ಬ ನಿರ್ದೇಶಕರೂ ಹೊಣೆಯಾಗುತ್ತಾರೆ ಎಂದು ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಹೇಳಿದರು.

ನಗರದ ಪತ್ರಕರ್ತರ ಭವನದಲ್ಲಿ ಸೋಮವಾರ ಮಾತನಾಡಿ, ಸೊಸೈಟಿ, ಮಹಿಳಾ ಸ್ವಸಹಾಯ ಸಂಘಗಳಿಗೆ ಸಾಲ ನೀಡುವಲ್ಲಿ ಅವ್ಯವಹಾರ ಆಗಿಲ್ಲ, ದಾಖಲೆಗಳ ವರದಿ ಸಲ್ಲಿಸಿರುವ ನಂತರವೂ ಕೆಲವರು ವಿನಾಕಾರಣ ಆರೋಪ ಮಾಡುತ್ತಿದ್ದಾರೆ ಎಂದು ತಿಳಿಸಿದರು.

ಮಹಿಳಾ ಸಂಘಗಳ ಬಡ್ಡಿ ಕ್ಲೆಂ, ಸಾಲ ನೀಡಿಕೆಯಲ್ಲಿ ಅವ್ಯವಹಾರ ಆರೋಪ ಮಾಡುತ್ತಿರುವ ಹಿನ್ನೆಲೆಯಲ್ಲಿ ಜನತೆಗೆ ಸತ್ಯ ತಿಳಿಸಬೇಕು. ತನಿಖಾ ಸಮಿತಿ ಸದಸ್ಯರು ಮಹಿಳಾ ಸ್ವಸಹಾಯ ಸಂಘಗಳ ಗುಂಪುಗಳ ಪ್ರತಿನಿಽ, ಸದಸ್ಯರನ್ನು ಭೇಟಿ ಮಾಡಿ ಮಾಹಿತಿ ಸಂಗ್ರಹಿಸಿ ವರದಿ ನೀಡಿದ್ದಾರೆ. ಅಸ್ತಿತ್ವದಲ್ಲಿಲ್ಲದ ಯಾವುದೇ ಸ್ವಸಹಾಯ ಗುಂಪುಗಳಿಗೆ ಸಾಲ ನೀಡಿರುವ ಪೂರಕ ದಾಖಲೆ ಕಂಡು ಬಂದಿಲ್ಲ ಎಂದರು.

ನನ್ನ ಮೇಲೆ ಹಾಕಿರುವ ಎಫ್ಐಆರ್ ಗಮನಿಸಿದರೆ ಎಲ್ಲ ಒಂದೇ ರೀತಿಯಿದ್ದು, ತಡೆಯಾಜ್ಞೆ ತರಲಾಗಿದೆ. ಇದು ದುರುದ್ದೇಶವಾಗಿದ್ದು, ಸೊಸೈಟಿಗಳಲ್ಲಿ ಯಾವುದೇ ರೀತಿ ಸಾಲ ಬಾಕಿಯಿಲ್ಲ, ಹೊರ ಬಾಕಿಯಿಲ್ಲ ಎಂಬುದಕ್ಕೆ ಬ್ಯಾಂಕಿನಿAದ ಪ್ರಮಾಣ ಪತ್ರ ನೀಡಿದ್ದಾರೆ ಎಂದು ತಿಳಿಸಿದರು.

* ಲಾ ಮೇಕರ್ ಮಾತನಾಡಲಿ

ಶಾಸನ ಸಭೆಯಲ್ಲಿ ಇರುವವರಿಗೆ ಕಾನೂನು ರಚಿಸುವ ಅವಕಾಶ ಇದೆ, ಸರ್ಕಾರವೇ ರಚಿಸಿದ ಸಮಿತಿ ವರದಿ ನಂತರವೂ ಇಂತಹ ಆರೋಪಗಳು ಬಂದರೆ ಹೇಗೆ ಎಂದು ಗೋವಿಂದಗೌಡ ಪ್ರಶ್ನಿಸಿದರು. ಈಗ ಲಾ ಮೇಕರ್‌ಗಳು ಏನು ಬೇಕಾದರು ಮಾತನಾಡುತ್ತಾರೆ. ಶಾಸನ ಸಭೆಯಲ್ಲಿ ಕುಳಿತು ಕಾನೂನು ಜಾರಿ ಮಾಡುವವರು ಮಾತನಾಡಲಿ ಎಂದು ಒತ್ತಾಯಿಸಿದರು.

* ಹೆಚ್ಚುವರಿ ಬಡ್ಡಿ ಕ್ಲೆಂ ಮಾಡಿಲ್ಲ

ಡಿಸಿಸಿ ಬ್ಯಾಂಕಿನ ಪರಿವೀಕ್ಷಣಾ ವರದಿಯಲ್ಲಿ ಮೈಸೂರು ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕ ಎಸ್.ಜಿ.ಮಂಜುನಾಥ್ ಸಿಂಗ್ ಅವರು ತಿಳಿಸಿರುವಂತೆ 2016-17ನೇ ಸಾಲಿನಿಂದ 2020-21ನೇ ಸಾಲಿನ ಅವಧಿಯಲ್ಲಿ ಸ್ವಸಹಾಯ ಸಂಘಗಳಿಗೆ ನೀಡಿರುವ ಸಾಲದ ಮೇಲೆ ಮಾಡಲಾದ ಬಡ್ಡಿ ಕ್ಲೆಂ ಬಿಲ್ಲುಗಳಲ್ಲಿ ಸರ್ಕಾರದಿಂದ ಹೆಚ್ಚಿನ ಮೊತ್ತ ಕ್ಲೆಂ ಮಾಡಿಲ್ಲ. ಬಿಡುಗಡೆಯಾದ ಮೊತ್ತ ಕಾಲಕಾಲಕ್ಕೆ ಆಯಾ ಗುಂಪುಗಳಿಗೆ ವರ್ಗಾವಣೆಯಾಗಿದೆ ಎಂದು ಸ್ಪಷ್ಟಪಡಿಸಿದರು.

ಚಿಂತಾಮಣಿ ಶಾಖೆ ಸೇರಿ ವಿವಿಧ ಕಡೆ 11 ಕೋಟಿ ರೂ. ಅವ್ಯವಹಾರ ನಡೆದಿದೆ. ಈ ಬಗ್ಗೆ ತನಿಖೆ ಮಾಡಿ ವ್ಯವಸ್ಥಾಪಕ ನಿರ್ದೇಶಕರು ತಪ್ಪಿತಸ್ಥರ ವಿರುದ್ಧ ಶಿಸ್ತು ಕ್ರಮ ಜರುಗಿಸಿ, ಸರ್ಕಾರಕ್ಕೆ ವರದಿ ನೀಡಿದ್ದಾರೆ ಎಂದು ತಿಳಿಸಿದರು.

* ಬಡ್ಡಿ ಸಮೇತ ಅಸಲು ತಿರುವಳಿ

ಬಂಗಾರಪೇಟೆ ಶಾಖೆಯಿಂದ ಸವೆನ್ ಸ್ಟಾರ್ ಕನ್ಸೂಮರ್ ಕೋ.ಆಪರೇಟಿವ್ ಸೊಸೈಟಿಗೆ ನಿಯಮ ಪಾಲಿಸಿಯೇ ಸಾಲ ನೀಡಲಾಗಿದೆ. ಆದರೆ, ಸಾಲ ಮರುಪಾವತಿಯಲ್ಲಿ ಗೋಲ್ಮಾಲ್ ಆಗಿದೆ ಎಂಬ ಆರೋಪ ಮಾಡಿದ್ದಾರೆ. ಆದರೆ, 2021ರ ಡಿಸೆಂಬರ್ 9ರಂದೇ ಸಾಲದ ಅಸಲು ಮತ್ತು ಬಡ್ಡಿ ಸಮೇತ ತಿರುವಳಿ ಮಾಡಿದ್ದಾರೆ ಎಂದು ಗೋವಿಂದ ಗೌಡ ಮಾಹಿತಿ ನೀಡಿದರು.

ಕೋಟ್...

ಶಾಸಕ ಕೊತ್ತೂರು ಮಂಜುನಾಥ್ ಅವರು ಇತ್ತೀಚೆಗೆ ಹೇಳಿಕೆ ನೀಡಿ ಬ್ಯಾಂಕ್, ಸಹಕಾರ ಸಂಘಗಳ ಹಣ ತಿಂದವರಿಗೆ ರೋಗ ಬರಲಿ ಎಂದು ಹೇಳಿದ್ದು, ಇದಕ್ಕೆ ನನ್ನ ಸಹಮತವಿದೆ.

* ಬ್ಯಾಲಹಳ್ಳಿ ಗೋವಿಂದ ಗೌಡ, ಮಾಜಿ ಅಧ್ಯಕ್ಷ, ಡಿಸಿಸಿ ಬ್ಯಾಂಕ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net