

ಸಾಗರ: ನಗರ ವ್ಯಾಪ್ತಿಯ ರಸ್ತೆ ಡಾಂಬರೀಕರಣ ಕಾಮಗಾರಿಯನ್ನು ಮಳೆಗಾಲದೊಳಗೆ ಪೂರೈಸಲಾಗುವುದು. ನಿಗದಿತ ಅವಧಿಯಲ್ಲಿ ಕಾಮಗಾರಿ ಮುಗಿಸದ, ಕಾಮಗಾರಿ ಆರಂಭಿಸದ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಲಾಗುವುದು ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಎಚ್ಚರಿಸಿದರು.
ನಗರೋತ್ಥಾನ ಯೋಜನೆಯಡಿ 50 ಲಕ್ಷ ರೂ. ವೆಚ್ಚದಲ್ಲಿ ನಗರಸಭೆ ಎದುರಿನ ಜೆ.ಸಿ.ರಸ್ತೆ ಡಾಂಬರೀಕರಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ನಗರದ ಕೆಲವು ಭಾಗಗಳಲ್ಲಿ ಗುತ್ತಿಗೆದಾರರು ಕಾಮಗಾರಿ ಪೂರೈಸಿಲ್ಲ. ಮಳೆಗಾಲ ಸಮೀಪಿಸುತ್ತಿರುವುದರಿಂದ ತಕ್ಷಣ ಕಾಮಗಾರಿ ಪೂರ್ಣಗೊಳಿಸಲು ಸೂಚಿಸಲಾಗಿದೆ. ಒಂದೊಮ್ಮೆ ಗುತ್ತಿಗೆದಾರರು ಕಾಮಗಾರಿ ಆರಂಭಿಸದಿದ್ದರೆ ಬೇರೆಯವರಿಗೆ ಕಾಮಗಾರಿ ಹೊಣೆ ನೀಡಲಾಗುತ್ತದೆ ಎಂದರು.
ಪೊಲೀಸ್ ಸ್ಟೇಷನ್ ವೃತ್ತದಿಂದ ಸಾಗರ ಹೋಟೆಲ್ ವೃತ್ತದವರೆಗೆ ಮರು ಡಾಂಬರೀಕರಣ, ಪೋಸ್ಟ್ ಆಫೀಸ್ ವೃತ್ತದಿಂದ ಶ್ರೀರಾಮಪುರ ಬಡಾವಣೆಯ ರೈಲ್ವೆ ಕ್ರಾಸ್‌ವರೆಗೆ ಡಾಂಬರೀಕರಣ ಮಾಡಲಾಗುತ್ತದೆ. ಒಂದೊಮ್ಮೆ ಕಾಮಗಾರಿ ಕಳಪೆಯಾದರೆ ಅದಕ್ಕೆ ಪೌರಾಯುಕ್ತರನ್ನೇ ಹೊಣೆ ಮಾಡಲಾಗುವುದು ಎಂದು ತಿಳಿಸಿದರು.
ಪೌರಾಯುಕ್ತರಿಗೆ ತರಾಟೆ: ರಸ್ತೆ ಡಾಂಬರೀಕರಣ ಕಾಮಗಾರಿ ಚಾಲನೆ ನೀಡುವ ಕಾರ್ಯಕ್ರಮದ ಮಾಹಿತಿಯನ್ನು ಎಲ್ಲ ಸದಸ್ಯರಿಗೆ ತಿಳಿಸದ ಪೌರಾಯುಕ್ತ ಎಚ್.ಕೆ.ನಾಗಪ್ಪ ಅವರನ್ನು ನಗರಸಭೆ ಅಧ್ಯಕ್ಷೆ ಮೈತ್ರಿ ಪಾಟೀಲ್ ತರಾಟೆಗೆ ತೆಗೆದುಕೊಂಡರು. ಕಾಮಗಾರಿಗೆ ಚಾಲನೆ ನೀಡುತ್ತಿರುವುದನ್ನು ನನಗೆ ಬುಧವಾರ ಸಂಜೆ ತಿಳಿಸಿದ್ದಾರೆ. ಶಾಸಕರು ಬರುತ್ತಾರೆ ಎನ್ನುವ ಕಾರಣಕ್ಕೆ ನಮ್ಮ ಪೂರ್ವನಿಗದಿತ ಕಾರ್ಯಕ್ರಮವನ್ನು ನಿಲ್ಲಿಸಿ ಬಂದಿದ್ದೇವೆ. ನಗರಸಭೆಯ 31 ಸದಸ್ಯರು, ಐವರು ನಾಮ ನಿರ್ದೇಶಿತ ಸದಸ್ಯರಿಗೆ ಮಾಹಿತಿ ನೀಡುವಂತೆ ಪೌರಾಯುಕ್ತರಿಗೆ ತಿಳಿಸಲಾಗಿತ್ತು. ಯಾರಿಗೂ ತಿಳಿಸದೆ ತರಾತುರಿಯಲ್ಲಿ ತಮ್ಮ ಮೂಗಿನ ನೇರಕ್ಕೆ ಪೌರಾಯುಕ್ತರು ನಡೆದುಕೊಂಡಿದ್ದಾರೆ ಎಂದು ದೂರಿದರು.
ನಗರಸಭೆ ಅಧ್ಯಕ್ಷೆ ಮೈತ್ರಿ ಪಾಟೀಲ್, ಉಪಾಧ್ಯಕ್ಷೆ ಸವಿತಾ ವಾಸು, ಸದಸ್ಯರಾದ ಮಧುಮಾಲತಿ, ಗಣಪತಿ ಮಂಡಗಳಲೆ, ತುಕಾರಾಮ್, ಅರವಿಂದ ರಾಯ್ಕರ್, ಪ್ರಮುಖರಾದ ಕೆ.ಸಿದ್ದಪ್ಪ, ಕಲಸೆ ಚಂದ್ರಪ್ಪ, ನಾರಾಯಣಪ್ಪ ಇತರರಿದ್ದರು.