ಸರ್ವೇ ನಂಬರ್ ಒಳಗಿದ್ದರೇ ಬಿ ಖರಾಬ್ ಮೇಲೆ ಹಕ್ಕು

KBG
Published on

ಬೆಂಗಳೂರು: ಇನ್ನು ಮುಂದೆ ಸರ್ವೇ ನಂಬರ್ ಒಳಗಿದ್ದರಷ್ಟೇ ಬಿ ಖರಾಬ್ ಲ್ಯಾಂಡ್ ಲಾಕ್ ಮಾಡಬಹುದು. ಆದರೆ ಈಗ ಸರ್ವೇ ನಂಬರ್ ಒಳಗಿರದಿದ್ದರೂ ಬಿ ಖರಾಬ್ ಮಂಜೂರು ಮಾಡಿರುವ ಸಾಕಷ್ಟು ಪ್ರಕರಣ ಬೆಳಕಿಗೆ ಬಂದಿದೆ. ಇದನ್ನು ತಪ್ಪಿಸುವ ಉದ್ದೇಶದಿಂದ ಸೆಕ್ಷನ್ 2ಗೆ ತಿದ್ದುಪಡಿ ತರಲಾಗಿದೆ. ಸರ್ವೇ ನಂಬರ್ ಒಳಗಿರುವ ಬಿ ಖರಾಬ್ ಅನ್ನು ಭೂ ನಿರ್ಬಂಧಿತ ಮಾಡಿಕೊಳ್ಳಬಹುದು. ಪಕ್ಕದಲ್ಲಿ ಇದ್ದರೂ ಅನ್ವಯ ಆಗಲ್ಲ. ಪಿತ್ರಾರ್ಜಿತವಾಗಿ ಬಂದ ಜಮೀನು ವಿಭಾಗ ಆದಾಗ ಬೇರೆಯವರ ಭಾಗಕ್ಕೆ ಬಿ ಖರಾಬ್ ಹೋಗಿದ್ದರೆ ಅಂತಹ ವೇಳೆ ವಂಶಾವಳಿ ದಾಖಲೆ ಕೊಟ್ಟು ಭೂ ನಿರ್ಬಂಧಿತಕ್ಕೆ ಅರ್ಜಿ ಸಲ್ಲಿಸಬಹುದು ಎಂದು ಕಂದಾಯ ಸಚಿವರು ಸ್ಪಷ್ಟತೆ ನೀಡಿದರು.

ವಿಧಾನಸಭೆಯಲ್ಲಿ ಕರ್ನಾಟಕ ಭೂ ಕಂದಾಯ (ತಿದ್ದುಪಡಿ) ವಿಧೇಯಕ-2025 ಪರ್ಯಾಲೋಚನೆ ಪ್ರಕ್ರಿಯೆ ನಡೆದು ಅಂಗೀಕಾರಗೊಂಡಿತು. ಈ ವೇಳೆ ವಿಧೇಯಕದ ಕುರಿತು ಮಾಹಿತಿ ಹಂಚಿಕೊಂಡ ಕಂದಾಯ ಸಚಿವ ಕೃಷ್ಣಬೈರೇಗೌಡ, ಭೂ ಕಂದಾಯ (ತಿದ್ದುಪಡಿ) ಸೆಕ್ಷನ್ 25ಕ್ಕೆ ತಿದ್ದುಪಡಿ ತರಲಾಗಿದೆ.

94ಸಿ, 94ಸಿಸಿ ಅರ್ಜಿ ವಿಲೇವಾರಿ

ಸೆಕ್ಷನ್ 94ಸಿ ಮತ್ತು 94ಸಿಸಿಗೆ ತಿದ್ದುಪಡಿ ತರಲಾಯಿತು. ಸರ್ಕಾರಿ ಭೂಮಿ ಮತ್ತು ಸಾರ್ವಜನಿಕ ಉದ್ದೇಶಕ್ಕಾಗಿ, ಭೂಮಿ ರಕ್ಷಣೆಗಾಗಿ ಬೆಂಗಳೂರು ಮಹಾನಗರ ಪಾಲಿಕೆ ಪರಿಮಿತಿ 18 ಕಿ.ಮಿ. ಒಳಗೆ, ನಗರ ಪರಿಮಿತಿ 10 ಕಿ.ಮೀ ಮತ್ತು ನಗರಸಭೆ ಪರಿಮಿತಿ 5 ಕಿ.ಮೀ. ಮತ್ತು ಪುರಸಭೆ, ಪಂಚಾಯಿತಿ ಪರಿಮಿತಿ 3 ಕಿ.ಮೀ ವ್ಯಾಪ್ತಿಯಲ್ಲಿ ಸೈಟ್, ಭೂಮಿ ಮಂಜೂರು ಮಾಡದಂತೆ ತಿದ್ದುಪಡಿ ತರಲಾಗಿದೆ. ಅದರಲ್ಲಿ ವೈಮಾನಿಕ ಲೆಕ್ಕದ ಆಧಾರ ಅನ್ವಯ ಎನ್ನಲಾಗಿದೆ. ಇದಕ್ಕೆ ಪ್ರತಿಪಕ್ಷದವರು ಆಕ್ಷೇಪ ವ್ಯಕ್ತಪಡಿಸಿದಾಗ ಕೃಷ್ಣಬೈರೇಗೌಡ, 1897ರಲ್ಲಿ ಬ್ರಿಟಿಷರ ಕಾಲದಲ್ಲೇ ವೈಮಾನಿಕ ಅಂತರ ಎಂದು ಉಲ್ಲೇಖವಾಗಿದೆ. ಹೊಸದೇನೂ ಅಲ್ಲ. ಸರ್ಕಾರದ ಮುಂದಿರುವ 94ಸಿ, 94ಸಿಸಿ ಅರ್ಜಿಗಳಲ್ಲಿ ಶೇ.97 ವಿಲೇವಾರಿ ಮಾಡಿದ್ದು, ಉಳಿದ ಅರ್ಜಿಗಳನ್ನು ವಿಲೇವಾರಿ ಮಾಡುವುದಾಗಿ ಭರವಸೆ ನೀಡಿದರು.

ಭೂ ಕಂದಾಯ ತಿದ್ದುಪಡಿ

ವಿಧೇಯಕದ ಮುಖ್ಯಾಂಶ

* ಭೂಮಿ ಅತಿಕ್ರಮಣದಾರರ ದಂಡ ಮೊತ್ತ 5 ರಿಂದ 10 ಸಾವಿರ ರೂ.ಗೆ ಏರಿಕೆ

* ಡಿಸಿ, ಎಸಿ, ತಹಸೀಲ್ದಾರ್‌ಗೆ ಕಂದಾಯ ದಾಖಲೆ ಸ್ಕಾೃನಿಂಗ್, ಡಿಜಿಟಲೀಕರಣ ಹೊಣೆ

* ನಗರದಲ್ಲಿ ಸೈಟ್ ಹಂಚಿಕೆ 20*30 ಚದರಡಿ ಬದಲಿಗೆ 600 ಅಡಿ (ಆಕಾರ ಕಡ್ಡಾಯವಲ್ಲ)

* ಗ್ರಾಮೀಣ ಪ್ರದೇಶದಲ್ಲಿ ಸೈಟ್ ಹಂಚಿಕೆಗೆ 30*40 ಚದರಡಿ ಬದಲಿಗೆ 1200 ಅಡಿ ಬಳಕೆ

* ಸೀಲು, ಸ್ಟಾಂಪ್ ದುರ್ಬಳಕೆ ಅಪರಾಧ, ಬಿಎನ್‌ಎಸ್ ಕಾಯ್ದೆಯಡಿ ಶಿಕ್ಷೆಗೆ ಅವಕಾಶ

* ಸೆಕ್ಷನ್ 197ರಲ್ಲಿ ಕಾಲ ಕಾಲಕ್ಕೆ ಆನ್‌ಲೈನ್ ಸಿಸ್ಟಮ್ ಎನೇಬಲ್‌ಗೆ ಅವಕಾಶ ಕಲ್ಪಿಸಿ ತಿದ್ದುಪಡಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net