ಸಿಗ್ನಲ್ ಜಂಪ್ ಮಾಡಿದ್ರೆ ಮನೆಗೆ ಬರುತ್ತೆ ನೋಟಿಸ್

press meet
ಸ್ಮಾರ್ಟ್ ಸಿಟಿ ಕಚೇರಿಯಲ್ಲಿರುವ ಕಮ್ಯಾಂಡ್ ಕಂಟ್ರೋಲ್ ಸೆಂಟರ್.
Published on

ಶಿವಮೊಗ್ಗ: ನಗರದ ಪ್ರಮುಖ 13 ವೃತ್ತಗಳು ಈಗ ಸಂಪೂರ್ಣ ಸಿಸಿ ಕ್ಯಾಮರಾ ಸುಪರ್ದಿಗೆ ಒಳಪಟ್ಟಿವೆ. ಸಂಚಾರ ನಿಯಮಗಳನ್ನು ಉಲ್ಲಂಘಿಸುವ ವಾಹನ ಸವಾರರ ಮನೆಗೆ ಆ.28ರಿಂದಲೇ ಬರಲಿದೆ ಕಂಪ್ಯೂಟರೀಕೃತ ದಂಡದ ರಸೀದಿ. ಜತೆಗೆ ಮೊಬೈಲ್‌ಗೆ ಬರುತ್ತೆ ಮೆಸೇಜ್.

ಶಿವಮೊಗ್ಗದ ವಿವಿಧೆಡೆ 100ಕ್ಕೂ ಹೆಚ್ಚು ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಸ್ಮಾರ್ಟ್ ಸಿಟಿಯ ಇಂಟಿಗ್ರೇಟೆಡ್ ಟ್ರಾಫಿಕ್ ಮ್ಯಾನೇಜ್‌ಮೆಂಟ್ ಸಿಸ್ಟಂ ಯೋಜನೆ ಮೂಲಕ 14 ಪ್ರಮುಖ ವೃತ್ತಗಳು ಹಾಗೂ ಕೆಲ ಪ್ರಮುಖ ರಸ್ತೆಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಆ.28ರಿಂದ ಈ ಕ್ಯಾಮರಾಗಳಲ್ಲಿನ ದೃಶ್ಯಾವಳಿಗಳನ್ನು ಆಧರಿಸಿ ದಂಡ ವಿಧಿಸಲಾಗುತ್ತದೆ ಎಂದು ಎಸ್ಪಿ ಜಿ.ಕೆ.ಮಿಥುನ್ ಕುಮಾರ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ವೃತ್ತಗಳಲ್ಲಿ ಕೆಂಪು ದೀಪ ಉಲ್ಲಂಘಿಸಿ ಸಿಗ್ನಲ್ ಜಂಪ್ ಮಾಡುವುದನ್ನು ಗಮನಿಸಲು 72 ಕ್ಯಾಮರಾಗಳಿವೆ. 30 ಕ್ಯಾಮರಾಗಳು ಅತಿ ವೇಗವಾಗಿ ಸಂಚರಿಸುವ ವಾಹನವನ್ನು ಪತ್ತೆ ಮಾಡುತ್ತವೆ. 44 ಕ್ಯಾಮರಾಗಳು ವಾಹನಗಳ ನೋಂದಣಿ ಸಂಖ್ಯೆಯನ್ನು ಗುರುತಿಸುತ್ತವೆ ಎಂದು ವಿವರಿಸಿದರು.
ಸಿಸಿ ಕ್ಯಾಮರಾಗಳು ಮಾತ್ರವಲ್ಲದೆ, 360 ಡಿಗ್ರಿ ಸುತ್ತಲಿನ ದೃಶ್ಯಾವಳಿಗಳನ್ನು ಸೆರೆಹಿಡಿಯುವ ಸ್ಮಾರ್ಟ್ ಪೋಲ್‌ಗಳನ್ನು ಅಲ್ಲಲ್ಲಿ ಇರಿಸಲಾಗಿದೆ. ಇವೆಲ್ಲವೂ ಒಎಫ್‌ಸಿ ನೆಟ್‌ವರ್ಕ್ ಮೂಲಕ ಸ್ಮಾರ್ಟ್ ಸಿಟಿ ಕಚೇರಿಯಲ್ಲಿರುವ ಕಮ್ಯಾಂಡ್ ಕಂಟ್ರೋಲ್ ಸೆಂಟರ್‌ಗೆ ದೃಶ್ಯಾವಳಿಗಳನ್ನು ರವಾನಿಸುತ್ತವೆ. ಅಲ್ಲಿರುವ ಸ್ಮಾರ್ಟ್ ಸಿಟಿ ಹಾಗೂ ಪೊಲೀಸ್ ಸಿಬ್ಬಂದಿ ವಾಹನ ಸಂಚಾರ ನಿಯಮ ಉಲ್ಲಂಘಿಸಿದ ವಾಹನಗಳ ಮಾಲೀಕರಿಗೆ ದಂಡ ವಿಧಿಸಲಿದ್ದಾರೆ ಎಂದು ತಿಳಿಸಿದರು.
ಮೊಬೈಲ್‌ಗೆ ಬರುತ್ತೆ ಸಂದೇಶ: ಸಂಚಾರ ನಿಯಮ ಉಲ್ಲಂಘಿಸಿದ ವಾಹನದ ಸಂಖ್ಯೆ ಆಧಾರದಲ್ಲಿ ಮಾಲೀಕರನ್ನು ಗುರುತಿಸಲಾಗುತ್ತದೆ. ಆರ್‌ಸಿಯಲ್ಲಿರುವ ಮೊಬೈಲ್ ಸಂಖ್ಯೆಗೆ ಸಂದೇಶ ಬರುತ್ತದೆ. ಅದರಲ್ಲಿರುವ ಲಿಂಕ್ ತೆರೆದರೆ ಯಾವ ರೀತಿ ಸಂಚಾರ ನಿಯಮ ಉಲ್ಲಂಘನೆಯಾಗಿದೆ. ಎಷ್ಟು ದಂಡ ಪಾವತಿಸಬೇಕು ಎಂಬುದನ್ನು ತಿಳಿಯಬಹುದು.
ಒಂದು ವೇಳೆ ತಾಂತ್ರಿಕ ಸಮಸ್ಯೆಯಿಂದ ಸಂದೇಶ ರವಾನೆಯಾಗದೇ ಇದ್ದರೆ ಆರ್‌ಸಿಯಲ್ಲಿರುವ ವಿಳಾಸಕ್ಕೆ ಒಂದೆರಡು ದಿನದಲ್ಲೇ ದಂಡದ ರಸೀದಿ ತಲುಪಲಿದೆ. ಬೆಂಗಳೂರಿನಲ್ಲಿರುವ ಈ ಮಾದರಿ ಶಿವಮೊಗ್ಗದಲ್ಲೂ ಅನುಷ್ಠಾನ ಆಗಲಿದೆ. ಪಿಎಸ್‌ಐ, ಇನ್ಸ್‌ಪೆಕ್ಟರ್ ಬಳಿ ಇರುವ ಸ್ಮಾರ್ಟ್ ಡಿವೈಸ್ ಇಲ್ಲವೇ ಸಮೀಪದ ಪೊಲೀಸ್ ಠಾಣೆಯಲ್ಲಿ ವಿಚಾರಿಸಿ ದಂಡ ಪಾವತಿಸಬಹುದು. ಒಂದು ವೇಳೆ ದೀರ್ಘ ಸಮಯ ದಂಡ ಪಾವತಿಸದೇ ಇರುವುದು ವಾಹನ ತಪಾಸಣೆ ಸಂದರ್ಭದಲ್ಲಿ ದೃಢಪಟ್ಟರೆ ಸ್ಥಳದಲ್ಲೇ ದಂಡ ಪಾವತಿಸಬೇಕಾಗುತ್ತದೆ ಎಂದರು.
ಎಎಸ್ಪಿ ಅನಿಲ್‌ಕುಮಾರ್ ಭೂಮರಡ್ಡಿ, ಟ್ರಾಫಿಕ್ ಇನ್ಸ್‌ಪೆಕ್ಟರ್ ಸಂತೋಷ್, ಡಿವೈಎಸ್ಪಿ ಸುರೇಶ್ ಇತರರು ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net