ಆಹಾರ ಪದಾರ್ಥಗಳ ಗುಣಮಟ್ಟ ಕಳಪೆಯಾಗಿದ್ದರೆ ಕ್ರಮ ಎದುರಿಸಬೇಕಾದೀತು ಎಚ್ಚರ !

IMG_20240619_102801
Published on

ಬೆಂಗಳೂರು: ರಾಜ್ಯಾದ್ಯಂತ 201 ಜಿಲ್ಲಾ ಮತ್ತು ತಾಲೂಕು ಕೇಂದ್ರಗಳ ಕಚೇರಿ ಹಾಗೂ ಖಾಸಗಿ ಬಸ್‌ ನಿಲ್ದಾಣಗಳಲ್ಲಿ ಇರುವ 748 ವ್ಯಾಪಾರ ಮಳಿಗೆಗಳು ಮತ್ತು ಆಹಾರ ಉದ್ದಿಮೆಗಳನ್ನು ಪರಿಶೀಲನೆ ಮಾಡಲಾಗಿದೆ. ಈ ವೇಳೆ ಮಾಲೀಕರಿಗೆ ಎಚ್ಚರಿಕೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.

ಬಸ್‌ ನಿಲ್ದಾಣಗಳಲ್ಲಿನ ವ್ಯಾಪಾರ ಮಳಿಗೆಗಳು ಮತ್ತು ಆಹಾರ ಉದ್ದಿಮೆಗಳಲ್ಲಿ ಅವಧಿ ಮೀರಿದ ಆಹಾರ ಪದಾರ್ಥಗಳ ಮಾರಾಟ ಮಾಡುವಿಕೆ, ನೈರ್ಮಲ್ಯದ ಕೊರತೆ ಮುಂತಾದ ವಿಷಯಗಳ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಭಿತ್ತರವಾದ ವರದಿಗಳನ್ನು ಆಧರಿಸಿ ಮುಖ್ಯಮಂತ್ರಿ ಕಚೇರಿಯ ಸಾರ್ವಜನಿಕ ಕುಂದುಕೊರತೆ ವಿಭಾಗದ ವಿಶೇಷ ಕರ್ತವ್ಯಾಧಿಕಾರಿಗಳು ತಕ್ಷಣವೇ ಕಾರ್ಯತತ್ಪರರಾಗಿದ್ದಾರೆ.

ವಿಶೇಷ ಅಭಿಯಾನ

ವ್ಯಾಪಾರ ಮಳಿಗೆಗಳು ಹಾಗೂ ಆಹಾರ ಉದ್ದಿಮೆಗಳಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟದ ಕಾಯ್ದೆ 2006 ಮತ್ತು ನಿಯಮಗಳು 2011 ಅನ್ನು ಪಾಲಿಸುತ್ತಿರುವ ಬಗ್ಗೆ ಪರಿಶೀಲನೆ ಮಾಡಲು 2024ರ ಜೂನ್‌ ತಿಂಗಳಲ್ಲಿ ವಿಶೇಷ ಅಭಿಯಾನವನ್ನು ಕೈಗೊಳ್ಳಲಾಗಿದೆ.

ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ 2006 ಮತ್ತು ನಿಯಮಗಳು 2011 ಅನ್ನು ಪಾಲಿಸುವಂತೆ ಅರಿವು ಮೂಡಿಸಲಾಗಿರುತ್ತದೆ. ಮುಂದಿನ ದಿನಗಳಲ್ಲಿ ಪುನರ್‌ ಪರಿಶೀಲನೆ ಸಂದರ್ಭದಲ್ಲಿ ಲೋಪದೋಷಗಳನ್ನು ಸರಿಪಡಿಸಿಕೊಳ್ಳದೇ ಇದ್ದಲ್ಲಿ ನಿಯಾಮಾನುಸಾರ ಕಾನೂನಾತ್ಮಕ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಮಾಲೀಕರಿಗೆ ಎಚ್ಚರಿಕೆ ನೀಡಲಾಗಿದೆ ಎಂದು ಸಿಎಂ ಕಚೇರಿ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net