ಮನಸ್ಸು ಶುದ್ಧವಾಗಿದ್ದರೆ ಸಾಧನೆ ಹಾದಿ ಸುಗಮ: ಬ್ರಹ್ಮಾನಂದ ಸರಸ್ವತಿ ಶ್ರೀ

Chinmaya Mission Guruvandane
ಗುರುವಂದನಾ ಕಾರ್ಯಕ್ರಮದಲ್ಲಿ ಸಾವಿರ ಭಕ್ತರಿಂದ ಸಾಮೂಹಿಕ ಸ್ತೋತ್ರ ಹಾಗೂ ಅಷ್ಟೋತ್ತರ ಶತ ನಾಮಾವಳಿ ಪಠಣ ನಡೆಯಿತು.
Published on

ಶಿವಮೊಗ್ಗ: ಸಾಧನೆಯ ಮಾರ್ಗಕ್ಕೆ ಮನಸ್ಸು ಶುದ್ಧವಾಗಿರಬೇಕು. ಚಂಚಲತೆ, ನೂರಾರು ವಿಷಯಗಳು ಮನಸ್ಸಿನಲ್ಲಿ ತುಂಬಿಕೊಂಡಿದ್ದರೆ, ಗೊಂದಗಳಿದ್ದರೆ ಯಾವುದೇ ಸಾಧನೆ ಮಾಡಲು ಸಾಧ್ಯವಿಲ್ಲ ಎಂದು ಬೆಂಗಳೂರು ಚಿನ್ಮಯ ಮಿಷನ್‌ನ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.

ನಗರದ ಗಾಯತ್ರಿ ಮಾಂಗಲ್ಯ ಮಂದಿರದಲ್ಲಿ ಭಾನುವಾರ ಸ್ವಾಮಿ ಚಿನ್ಮಯಾನಂದರ 108ನೇ ಜಯಂತ್ಯುತ್ಸವದ ಅಂಗವಾಗಿ ಚಿನ್ಮಯ ಮಿಷನ್ ಸ್ಥಳೀಯ ಘಟಕದಿಂದ ಏರ್ಪಡಿಸಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಅವರು, ಸಾಧನೆ ಮಾಡುವ ಹಾದಿ ಬಗ್ಗೆ ಭಗವದ್ಗೀತೆಯಲ್ಲಿ ಸವಿಸ್ತಾರವಾಗಿ ಹೇಳಲಾಗಿದೆ. ಮನಸ್ಸಿನ ಕಲ್ಮಶವನ್ನು ತೆಗೆದಾಗ ಮಾತ್ರ ಸಾಧನೆ ಸಾಧ್ಯ ಎಂದರು.
ಜಗತ್ತಿನಲ್ಲಿ ಹಿಂದು, ಜೈನ, ಬೌದ್ಧ, ಪಾರ್ಸಿ, ಕ್ರೈಸ್ತ, ಇಸ್ಲಾಂ ಸೇರಿ ಎಲ್ಲ ಧರ್ಮಗಳೂ ಶಾಂತಿಯನ್ನೇ ಬೋಧಿಸುತ್ತವೆ. ಮನಸ್ಸು ಶುದ್ಧ ಮತ್ತು ಶಾಂತವಾಗಿದ್ದರೆ ಇಡೀ ವಿಶ್ವವೇ ನೆಮ್ಮದಿಯಾಗಿರುತ್ತದೆ. ಆಸೆಗಳಿಂದ ವಿಮುಖರಾದರೆ, ಎಲ್ಲರೂ ಸಮಾನರೆಂಬ ಭಾವನೆ ಮೂಡಿದರೆ ಸಮಾಜದಲ್ಲಿ ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದ ಇರುವುದಿಲ್ಲ ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ವ್ಯವಸ್ಥಾಪನಾ ಸಮಿತಿ ಕಾರ್ಯದರ್ಶಿ ಅರುಣ್‌ಕುಮಾರ್, ಚಿನ್ಮಯ ಮಿಷನ್ ಕೋಟ್ಯಂತರ ಜನರಿಗೆ ಭಗವದ್ಗೀತೆಯನ್ನು ಹೇಳಿಕೊಡುವ ಕೆಲಸ ಮಾಡುತ್ತಿದೆ. ಮಕ್ಕಳಲ್ಲಿ ಮೌಲ್ಯ ಬೆಳೆಸುವ ಸಲುವಾಗಿ ಭಗವದ್ಗೀತೆಯನ್ನು ಹೇಳಿ ಕೊಡಲಾಗುತ್ತದೆ. ವಾರದಲ್ಲಿ ಒಂದು ಗಂಟೆ ಕಾಲ ಭಗವದ್ಗೀತೆ ಹೇಳಿ ಕೊಡುವ ಮೂಲಕ ವ್ಯಕ್ತಿತ್ವ ನಿರ್ಮಾಣ ಮಾಡಲಾಗುತ್ತಿದೆ. ಮಕ್ಕಳಿಗೆ ಮಾತ್ರವಲ್ಲ ಎಲ್ಲಾ ವಯೋಮಾನದವರಿಗೂ ಸಂಸ್ಕಾರ ಹೇಳಿಕೊಡುತ್ತಾ ಬಂದಿದೆ ಎಂದರು.
ವೇದ ಪಠಣದಿಂದ ಆರಂಭಗೊಂಡು ಒಂದು ಸಾವಿರ ಭಕ್ತರಿಂದ ಸಾಮೂಹಿಕ ಸ್ತೋತ್ರ ಹಾಗೂ ಅಷ್ಟೋತ್ತರ ಶತ ನಾಮಾವಳಿ ಪಠಣ ನಡೆಯಿತು. ಸಹಸ್ರ ಕಂಠದಿಂದ ಭಜನೆ, ಅಷ್ಟೋತ್ತರ ಶತನಾಮಾವಳಿಯೊಂದಿಗೆ ಭಕ್ತರು ಪಾದುಕಾಪೂಜೆ ಮತ್ತು ಗುರುವಂದನೆ ನೆರವೇರಿಸಿದರು. ಸಮತಾನಂದಾ ಮಾತಾಜಿ, ಗುರುವಂದನಾ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಮೇಶ್ ಅವಧಾನಿ, ಕುಮಾರಶಾಸಿ, ಎಂ.ಡಿ.ಕೃಷ್ಣಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net