ಜ್ಞಾನಜ್ಯೋತಿ ಬೆಳಗಿದರೆ ಅಂಧಕಾರ ದೂರ

balija
ಶಿವಮೊಗ್ಗದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕೈವಾರ ತಾತಯ್ಯ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ಸಿ.ಎಸ್.ಚಂದ್ರಭೂಪಾಲ, ಡಾ. ಇ.ಛಾಯಾಕುಮಾರಿ, ಜಿ.ರಾಘವೇಂದ್ರ, ಬಿ.ಆರ್.ಶಿವಕುಮಾರ್, ಎಚ್.ಉಮೇಶ್, ಸ್ಮಿತಾ ಶಿವಕುಮಾರ್ ಮತ್ತಿತರರಿದ್ದರು.
Published on

ಶಿವಮೊಗ್ಗ: ಮನುಷ್ಯನ ಅಹಂ ಎಂಬ ಅಂಧಕಾರ ಸಕ್ಕರೆಯಂತೆ ಕರಗಬೇಕು. ಜ್ಞಾನಜ್ಯೋತಿ ಬೆಳಗಬೇಕು ಎಂದು ಪ್ರತಿಪಾದಿಸಿದವರು ಕೈವಾರ ತಾತಯ್ಯ. ಅವರು ದೈವಾಂಶ ಸಂಭೂತರಾಗಿದ್ದರು ಎಂದು ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಪ್ರಾಧ್ಯಾಪಕಿ ಡಾ. ಇ.ಛಾಯಾಕುಮಾರಿ ತಿಳಿಸಿದರು.

ಜಿಲ್ಲಾಡಳಿತ ಹಾಗೂ ಜಿಲ್ಲಾ ಬಲಿಜ ಸೇವಾ ಸಂಘದ ಆಶ್ರಯದಲ್ಲಿ ಶುಕ್ರವಾರ ಏರ್ಪಡಿಸಿದ್ದ ಶ್ರೀ ಯೋಗಿನಾರೇಯಣ ಯತೀಂದ್ರ(ಕೈವಾರ ತಾತಯ್ಯ) ಜಯಂತಿಯಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು, ಗುರುವಿದ್ದಲ್ಲಿ ಮೋಕ್ಷವಿದೆ. ಗುರುವಿಲ್ಲದೆ ಗೋವಿಂದನನ್ನು ಪಡೆಯಲು ಸಾಧ್ಯವಿಲ್ಲ ಎಂಬುದಕ್ಕೆ ಕೈವಾರ ತಾತಯ್ಯ ಅವರ ಬದುಕೇ ನಿದರ್ಶನ ಎಂದರು.

ಕೈವಾರ ತಾತಯ್ಯ ಅವರನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ. ಅವರೊಂದು ಸಮುದ್ರ. ಸಾಮಾನ್ಯ ವ್ಯಕ್ತಿಯಾಗಿದ್ದ ತಾತಯ್ಯನವರು ಸಂಸಾರದ ಕ್ಲೇಷಗಳಿಂದ ಹೊರಬರಲು ಗುರುಗಳೊಬ್ಬರ ಬಳಿ ತೆರಳಿದರು. ಅವರ ಸಲಹೆಯಂತೆ ನಾರಾಯಣನ ಧ್ಯಾನದಲ್ಲಿ ತಲ್ಲೀನರಾದರು. ಮೂರು ವರ್ಷಗಳ ಬಳಿಕ ಅವರು ಪವಾಡ ಪುರುಷರಾಗಿ, ಸಮಾಜ ಸುಧಾರಕರಾದರು. ಜನರು ಮೌಢ್ಯದಿಂದ ಹೊರಬರಲು ಪ್ರೇರಣೆ ನೀಡಿದರು ಎಂದು ವಿವರಿಸಿದರು.

ಜಯಂತಿ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಸಿ.ಎಸ್.ಚಂದ್ರಭೂಪಾಲ, ಕೈವಾರ ತಾತಯ್ಯ ಅತ್ಯಂತ ಶ್ರೇಷ್ಠರು. ಅವರೊಬ್ಬ ಆದರ್ಶ ಪುರುಷ. ಮಹಾನ್ ವ್ಯಕ್ತಿ. ಅವರ ವೃತ್ತಿ ಬಳೆ ವ್ಯಾಪಾರ. ಕಷ್ಟದಿಂದಲೇ ಬದುಕಿದವರು. ಮನೆ ಮನೆಗೆ ಹೋಗಿ ಬಳೆ ತೊಡಿಸುವುದರೊಂದಿಗೆ ಎಲ್ಲರನ್ನೂ ಗೌರವಿಸುತ್ತಿದ್ದರು. ಇಂತಹ ವೃತ್ತಿಯಲ್ಲಿ ಬಂದಿರುವ ಬಲಿಜ ಸಮಾಜದವರು ಅತ್ಯಂತ ಪ್ರೀತಿ, ವಿಶ್ವಾಸಾರ್ಹತೆಗೆ ಹೆಸರಾಗಿದ್ದಾರೆ ಎಂದರು.

ಪತ್ರಕರ್ತರ ಸಂಘದ ದತ್ತಿ ನಿಧಿ ಪ್ರಶಸ್ತಿ ಪುರಸ್ಕೃತ ಹಿರಿಯ ಪತ್ರಕರ್ತೆ ಕವಿತಾ ಪ್ರಶಾಂತ್ ಅವರನ್ನು ಸನ್ಮಾನಿಸಲಾಯಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಚ್.ಉಮೇಶ್, ಜಿಲ್ಲಾ ಬಲಿಜ ಸೇವಾ ಸಂಘದ ಅಧ್ಯಕ್ಷ ಜಿ.ರಾಘವೇಂದ್ರ, ಜಿಲ್ಲಾ ಬಲಿಜ ಸೇವಾ ಸಂಘದ ಕಾರ್ಯದರ್ಶಿ ಬಿ.ಆರ್.ಶಿವಕುಮಾರ್, ಜಿಲ್ಲಾ ಬಲಿಜ ಸೌಹಾರ್ದ ಪತ್ತಿನ ಸಹಕಾರ ಸಂಘದ ವೆಂಕಟೇಶ ನಾಯ್ಡು, ಆದಿಲಕ್ಷ್ಮೀ ಬಲಿಜ ಮಹಿಳಾ ಸಮಾಜದ ಸ್ಮಿತಾ ಶಿವಕುಮಾರ್, ತಹಸೀಲ್ದಾರ್ ಎಂ.ಲಿಂಗರಾಜು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net