

ಶಿಕಾರಿಪುರ: ಸ್ವಚ್ಛತೆ ನಮ್ಮ ಆದ್ಯತೆಯಾಗಲಿ, ಮನೆ ಪರಿಸರ ಹಾಗೂ ಸುತ್ತಮುತ್ತಲಿನ ಪ್ರದೇಶವನ್ನು ನಾವು ಸ್ವಚ್ಛವಾಗಿಟ್ಟುಕೊಂಡರೆ ಪಟ್ಟಣವೂ ಸುಂದರವಾಗಿರುತ್ತದೆ ಎಂದು ಪುರಸಭೆ ಅಧ್ಯಕ್ಷೆ ಶೈಲಾ ಯೋಗೀಶ್ ಮಡ್ಡಿ ಹೇಳಿದರು.
ಪುರಸಭೆ ಹಾಗೂ ಬನಸಿರಿ ಲಯನ್ಸ್ ವಿದ್ಯಾಸಂಸ್ಥೆ ಆಶ್ರಯದಲ್ಲಿ ಏರ್ಪಡಿಸಿದ್ದ ಸ್ವಚ್ಛತೆಯೇ ಸೇವೆ ಪ್ರತಿಜ್ಞಾವಿಧಿ ಸ್ವೀಕಾರ ಕಾರ್ಯಕ್ರಮದಲ್ಲಿ ಮಾತನಾಡಿ, ಮಕ್ಕಳಿಗೆ ಬಾಲ್ಯದಿಂದಲೇ ಸ್ವಚ್ಛತೆ ಹಾಗೂ ಪ್ರಯೋಜನಗಳ ಬಗ್ಗೆ ಅರಿವು ಮೂಡಿಸಬೇಕು. ಇದರಿಂದ ಅನೇಕ ಕಾಯಿಲೆಗಳು ಬಾರದಂತೆ ತಡೆಯಲು ಸಾಧ್ಯ ಎಂದು ತಿಳಿಸಿದರು.
ಮರಗಳ ಕಡಿತಲೆಯಿಂದ ಅರಣ್ಯ ನಾಶವಾಗಿ ಪರಿಸರ ಹಾಳಾಗುತ್ತಿದೆ. ಪ್ರಕೃತಿ ವಿಕೋಪದಿಂದ ಅತಿವೃಷ್ಟಿ, ಅನಾವೃಷ್ಟಿ, ಪ್ರವಾಹ ಸೇರಿ ಇತರ ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ಮನೆಯ ಪ್ರತಿಯೊಬ್ಬರ ಹೆಸರಿನಲ್ಲಿ ಗಿಡ ನೆಟ್ಟು ಪೋಷಿಸಬೇಕು. ಕಾಡಿದ್ದರೆ ಮಳೆ, ಮಳೆಯಿದ್ದರೆ ಬೆಳೆ ಮತ್ತು ನಮ್ಮ ಬದುಕು ಸಮೃದ್ಧ ಎಂದರು.
ಸಾರ್ವಜನಿಕರು ಮನೆಯಿಂದಲೇ ಸ್ವಚ್ಛತೆಯ ಕಾಳಜಿ ವಹಿಸಬೇಕು. ಹಸಿ ಮತ್ತು ಒಣ ಕಸ ಹಾಗೂ ಹಾನಿಕಾರಕ ತ್ಯಾಜ್ಯ ಪ್ರತ್ಯೇಕಿಸಿ ಪುರಸಭೆ ವಾಹನಗಳಿಗೆ ನೀಡಬೇಕು. ಎಲ್ಲೆಂದರಲ್ಲಿ ಕಸ ಎಸೆಯಬಾರದು. ಇದರಿಂದ ಕಾಯಿಲೆಗಳು ಜಾಸ್ತಿಯಾಗುತ್ತವೆ. ಪುರಸಭೆಯ ವಾಹನಗಳಿಗೆ ಕಸ ನೀಡಬೇಕು.ಶೈಲಾ ಯೋಗೀಶ್ ಮಡ್ಡಿಪುರಸಭೆ ಅಧ್ಯಕ್ಷೆ
ಮುಖ್ಯಾಧಿಕಾರಿ ಭರತ್ ಮಾತನಾಡಿ, ಸ್ವಚ್ಛತೆಯೇ ಸೇವೆ ಅಂಗವಾಗಿ ಪ್ರತಿಯೊಬ್ಬರೂ ತಾಯಿ ಹೆಸರಿನಲ್ಲಿ ಒಂದು ಗಿಡ ನೆಟ್ಟು ಪೋಷಿಸಬೇಕು ಎಂದರು. ಬನಸಿರಿ ಲಯನ್ಸ್ ವಿದ್ಯಾ ಸಂಸ್ಥೆಯ ಡಿ.ಕೆ.ಮಲ್ಲಿಕಾರ್ಜುನ್ ಮಾತನಾಡಿ, ಸ್ವಚ್ಛ ಪರಿಸರ ಕಾಪಾಡುವುದು ನಮ್ಮೆಲ್ಲರ ಕರ್ತವ್ಯ ಎಂದು ತಿಳಿಸಿದರು.
ಪುರಸಭೆ ಕಚೇರಿ ವ್ಯವಸ್ಥಾಪಕ ರಾಜ್‌ಕುಮಾರ, ಹಿರಿಯ ಆರೋಗ್ಯ ನಿರೀಕ್ಷಕ ಸೈಯದ್ ನವಾಜ್, ಲಯನ್ಸ್ ಕ್ಲಬ್ ಕಾರ್ಯದರ್ಶಿ ಡಿ.ಕೆ.ಪ್ರವೀಣ್, ಪ್ರಶಾಂತ್‌ಕುಮಾರ್, ನವೀನ್ ಆರ್. ಜೋಗಿ, ಲಕ್ಷ್ಮೀಕಾಂತ್, ಸುಧಾ ಅರ್ಕಸಾಲಿ, ಪುರಸಭೆ ಸಿಬ್ಬಂದಿ, ಶಿಕ್ಷಕರು, ಮಕ್ಕಳು ಹಾಗೂ ಸಾರ್ವಜನಿಕರು ಇದ್ದರು.