

ಮೈಸೂರು: ಮುಖ್ಯಮಂತ್ರಿ ಬದಲಾವಣೆ ಪ್ರಶ್ನೆಯೇ ಇಲ್ಲ. ಒಂದು ವೇಳೆ ಬದಲಾದರೆ ಹೈಕಮಾಂಡ್ ಒಪ್ಪಿ, ಸಿದ್ದರಾಮಯ್ಯ ಅನುಮತಿ ಕೊಟ್ಟರೆ ನಾನು ಮುಖ್ಯಮಂತ್ರಿ ಆಗುತ್ತೇನೆ ಎಂದು ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ. ದೇಶಪಾಂಡೆ ಸಿಎಂ ಆಗುವ ಇಂಗಿತ ವ್ಯಕ್ತಪಡಿಸಿದರು.
ಭಾನುವಾರ ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ನಾನು ಸಿದ್ದರಾಮಯ್ಯ ಅವರಿಗಿಂತ ಎರಡು ವರ್ಷ ದೊಡ್ಡವನು. ಸಚಿವ ಆಗಿ ಆಗಿ ದಣಿದಿದ್ದೇನೆ. ಇನ್ನೇನಿದ್ದರೂ ಮುಖ್ಯಮಂತ್ರಿ ಆಗಬೇಕಷ್ಟೆ. ಎಲ್ಲರಂತೆಯೇ ನನಗೂ ಆಸೆ ಇದೆ. ಜತೆಗೆ ಜನರಿಗೂ ನಾನು ಸಿಎಂ ಆಗಬೇಕು ಎಂಬ ಆಸೆ ಇದೆ. ಜೀವನದಲ್ಲಿ ಮಹತ್ವಾಕಾಂಕ್ಷೆ ಇರಬೇಕು ಎನ್ನುವ ಮೂಲಕ ಪರೋಕ್ಷವಾಗಿ ಸಿಎಂ ಸ್ಥಾನದ ಆಸೆ ವ್ಯಕ್ತಪಡಿಸಿದರು.
ನಾನು ಸಿದ್ದರಾಮಯ್ಯ ಅವರಿಗೆ ಒಳ್ಳೆಯ ಸ್ನೇಹಿತ. 5 ವರ್ಷ ಸಿಎಂ ಆಗಿ ಅವರೇ ಇರುತ್ತಾರೆ. ಹೀಗಾಗಿ ಮುಖ್ಯಮಂತ್ರಿ ಬದಲಾವಣೆ ಬಗ್ಗೆಯೇ ಚರ್ಚೆಯಾಗಿಲ್ಲ. ನನಗೆ ಗೊತ್ತಿಲ್ಲದೆ ಅಂತಹ ಯಾವ ಚರ್ಚೆಯೂ ನಡೆಯಲು ಸಾಧ್ಯವಿಲ್ಲ. ಗೃಹ ಸಚಿವ ಜಿ.ಪರಮೇಶ್ವರ್ ಹಾಗೂ ಸತೀಶ ಜಾರಕಿಹೊಳಿ ನಡೆಸಿರುವ ಸಭೆ ಇಲಾಖೆಗಳಿಗೆ ಸಂಬಂಧಪಟ್ಟಿದ್ದಷ್ಟೆ. ಸಿದ್ದರಾಮಯ್ಯ ಅವಧಿ ಪೂರೈಸುತ್ತಾರೆ ಎಂದು ತಿಳಿಸಿದರು.
ಮುಡಾ ವಿಚಾರದಲ್ಲಿ ಸಿದ್ದರಾಮಯ್ಯ ತಪ್ಪೇ ಮಾಡಿಲ್ಲ ಎಂದು ಸಮರ್ಥಿಸಿಕೊಂಡ ಅವರು, ಸಾವಿರಾರು ಕೋಟಿ ರೂಪಾಯಿ ಹಗರಣ ನಡೆದಿದೆ ಎನ್ನುತ್ತಿರುವವರು, ಆರೋಪದ ಬಗ್ಗೆ ದಾಖಲೆ ಕೊಟ್ಟರೆ ನಾನೇ ಸರ್ಕಾರಕ್ಕೆ ಪತ್ರ ಬರೆಯುತ್ತೇನೆ ಎಂದರು.
ಟೆಲಿಫೋನ್ ಕದ್ದಾಲಿಕೆ ಆರೋಪ ಬಂದ ತಕ್ಷಣ ರಾಮಕೃಷ್ಣ ಹೆಗೆಡೆ ರಾಜೀನಾಮೆ ಕೊಟ್ಟಿದ್ದರು. ಈಗ ದಿನವೂ ಫೋನ್ ಕದ್ದಾಲಿಕೆ ನಡೆಯುತ್ತಿದೆ. ಈಗ ಮೌಲ್ಯ ಆಧರಿತ ರಾಜಕಾರಣ ನಡೆಯುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.