ಅರಣ್ಯ ಇಲಾಖೆ ದಾಖಲೆ ಕೊಟ್ಟರೆ ತನಿಖೆ ಮಾಡುವ ತಾಕತ್ತಿದೆಯಾ; ಕುಮಾರಸ್ವಾಮಿ ಪ್ರಶ್ನೆ

Ishwar Khandre
Published on

ಬೆಂಗಳೂರು: ರಾಜ್ಯದಲ್ಲಿ ಅರಣ್ಯ ಇಲಾಖೆಯಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ಮಾಹಿತಿ, ದಾಖಲೆಗಳನ್ನು ಕೊಡುತ್ತೇನೆ. ತನಿಖೆ ಮಾಡುವ ದಮ್ಮು ತಾಕತ್ತು ಅರಣ್ಯ ಸಚಿವ ಈಶ್ವರ ಖಂಡ್ರೆ ಅವರಿಗೆ ಇದೆಯಾ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಸವಾಲು ಹಾಕಿದರು.

ಜೆ.ಪಿ.ಭವನದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ತರೀಕೆರೆಯಲ್ಲಿ ಅರಣ್ಯದಲ್ಲಿ ಮರಗಳನ್ನು ಕಡಿದ ಪ್ರಕರಣದಲ್ಲಿ ನಿಮ್ಮ ಸರ್ಕಾರದ ಅಧಿಕಾರಿಗಳೇ ಎಷ್ಟು ಜನ ಶಾಮೀಲಾಗಿದ್ದಾರೆ? ಕಡಿದ ಆ ಮರಗಳಲ್ಲಿ ಅರ್ಧ ಭಾಗದಷ್ಟು ಮರಗಳು ಯಾವ ಶಾಸಕನ ಮನೆಗೆ ಹೋಯಿತು? ಮನೆ ಕಟ್ಟುತ್ತಿದ್ದ ಶಾಸಕನ ಮನೆಗೆ ಮರಗಳು ಹೋಗಿವೆ. ಈ ಬಗ್ಗೆ ನಿಮಗೆ ಗೊತ್ತಿಲ್ಲವಾ ಖಂಡ್ರೆ ಅವರೇ? ಎಂದು ಪ್ರಶ್ನಿಸಿದರು.

ನಾನು ದಾಖಲೆ ಇಲ್ಲದೆ ಮಾತಾಡಲ್ಲ. ಆ ಶಾಸಕ ಯಾರು ಎಂದು ಈಶ್ವರ್ ಖಂಡ್ರೆ ಅವರನ್ನೆ ಕೇಳಿ ಎಂದು ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದರು.

ಆ ಮರಗಳು ತರೀಕೆರೆಯಲ್ಲಿ ಯಾವ ಶಾಸಕನ ಮನೆಗೆ ಹೋದವು? ನೀವು ಕ್ರಮ ತೆಗೆದುಕೊಂಡಿದ್ದೀರಾ? ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಯಾಕೆ? ಮರ ಕಡಿಯುವವರಿಗೆ ಕುಮಾರಸ್ವಾಮಿ ಬೆಂಬಲ ಕೊಡ್ತಿದ್ದಾರೆ ಎಂಬ ಸಚಿವರು ಹೇಳಿದ್ದಾರೆ. ನಾನು ಮರ ಕಡಿಯುವವರಿಗಾಗಲಿ, ಅಕ್ರಮ ಚಟುವಟಿಕೆ ಮಾಡುವವರಿಗಾಗಲಿ ಬೆಂಬಲ ಕೊಡುವವನಲ್ಲ. ಬಹುಶಃ ಈಶ್ವರ್ ಖಂಡ್ರೆಗೆ ಅವರಿಗೆ ಮಾಹಿತಿ ಸರಿಯಾಗಿ ಇಲ್ಲ ಎಂದು ಕುಮಾರಸ್ವಾಮಿ ತರಾಟೆಗೆ ತೆಗೆದುಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net