

ಚಿಕ್ಕಮಗಳೂರು: ಅಂಗಡಿಗಳಲ್ಲಿ ದಸ್ತಾನು ಇರುವ ಗೊಬ್ಬರದ ಮಾಹಿತಿ, ದರಪಟ್ಟಿಯನ್ನು ಕಡ್ಡಾಯವಾಗಿ ಪ್ರಕಟಿಸಬೇಕು, ನಿಗದಿತ ದರಕ್ಕಿಂತ ಹೆಚ್ಚಿನ ದರಕ್ಕೆ ಮಾರಾಟ ಮಾಡಿದರೆ ಲೈಸನ್ಸ್ ರದ್ದುಗೊಳಿಸಲು ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಸಿ.ಎನ್.ಮೀನಾ ನಾಗರಾಜ್ ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಕೃಷಿ ಇಲಾಖೆ ಅಧಿಕಾರಿಗಳು, ಔಷದಿ ಅಂಗಡಿ ಮಾಲೀಕರು ಹಾಗೂ ರೈತರ ಮುಖಂಡರ ಸಭೆಯಲ್ಲಿ ಮಾತನಾಡಿ, ರೈತರಿಗೆ ಅಗತ್ಯ ರಸಗೊಬ್ಬರ ವಿತರಣೆಗೆ ಕ್ರಮಕೈಗೊಳ್ಳಬೇಕು ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಪ್ರತಿ ವರ್ಷ ಮುಂಗಾರು, ಹಿಂಗಾರು ಸಮಯದಲ್ಲಿ ಪ್ರಮುಖವಾಗಿ ಯೂರಿಯ, ಡಿಎಪಿಗೆ ಬೇಡಿಕೆ ಇಡುತ್ತಾರೆ. ಗೊಬ್ಬರ ಖರೀದಿಗೆ ರೈತರು ಬಂದಾಗ ಅವರ ಪಹಣಿ ಮತ್ತು ಅಧಾರ್ ನಂಬರ್ ಕಡ್ಡಾಯವಾಗಿ ಪಡೆದುಕೊಳ್ಳಬೇಕು. ಸೊಸೈಟಿ, ಅಂಗಡಿಗಳಲ್ಲಿ ದಾಸ್ತಾನು ಇರುವುದಕ್ಕೂ ಹಾಗೂ ಇಲ್ಲಿ ನೀಡಿರುವ ಅಂಕಿ-ಅಂಶಗಳಿಗೂ ವ್ಯತ್ಯಾಸ ಕಂಡು ಬರುತ್ತಿವೆ. ಅಂಗಡಿ ಮಾಲೀಕರು ಬಿಲ್ ನೀಡದೆ ಮಾರಾಟ ಮಾಡಿರುವ ಬಗ್ಗೆ ಅನುಮಾನ ವ್ಯಕ್ತವಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ದರಪಟ್ಟಿ ಹಾಕದಿದ್ದರೆ ಶಿಕ್ಷೆ :
ಜಿಲ್ಲೆಯಲ್ಲಿ ಕೆಲವರು ರೈತರ ಹೆಸರಿನಲ್ಲಿ ಖರೀದಿ ಮಾಡಿ, ಹೊರ ರಾಜ್ಯದವರಿಗೆ ಮಾರಾಟ ಮಾಡಿರುವ ಬಗ್ಗೆ ಮಾಹಿತಿ ಬಂದಿದೆ. ಇದು ಇಲ್ಲಿಗೆ ನಿಲ್ಲಿಸಬೇಕು. ಯಾವುದೇ ಅಂಗಡಿ ವಿರುದ್ಧ ದೂರು ಬಂದರೆ ಕ್ರಮ ನಿಶ್ಚಿತ. ಬಿತ್ತನೆ ವೇಳೆಯಲ್ಲಿ ರೈತರಿಗೆ ಬೇಕಾಗಿರುವುದು ಯೂರಿಯ ಮತ್ತು ಡಿಎಪಿ. ಕಂಪನಿಗಳು ಲಾಭದ ದೃಷ್ಟಿಯಿಂದ ರೈತರಿಗೆ ಬೇಡವಾದ ಗೊಬ್ಬರ ತೆಗೆದುಕೊಳ್ಳಿ ಎಂದು ಒತ್ತಾಯ ಮಾಡುವುದು ಸರಿಯಲ್ಲ ಎಂದರು.
ಬೇಡಿಕೆಗೆ ತಕ್ಕಂತೆ ಗೊಬ್ಬರ ಪೂರೈಸಬೇಕು. ಖಾಸಗಿ ಕಂಪನಿಗಳ ಗೊಬ್ಬರದ ದರ ವ್ಯತ್ಯಾಸ ಹೆಚ್ಚಾಗಿದ್ದು, ಇದರ ಹೊರೆಯನ್ನು ರೈತರ ಮೇಲೆ ಹಾಕಲಾಗುತ್ತಿದೆ. ಸ್ಥಳೀಯವಾಗಿ ಇರುವ ಸಮಸ್ಯೆಗಳನ್ನು ಬಗೆಹರಿಸಿದರೆ ದರ ವ್ಯತ್ಯಾಸ ಸುಧಾರಣೆಯಾಗುತ್ತದೆ. ಖಾಸಗಿ, ಸೊಸೈಟಿಯವರು, ಕಂಪನಿ ಮುಖ್ಯಸ್ಥರು ಇದಕ್ಕೆ ಸಹಕಾರ ನೀಡಬೇಕು ಎಂದು ತಿಳಿಸಿದರು.
ಕೃಷಿ ಅಧಿಕಾರಿ ಮಲ್ಲಿಕಾರ್ಜುನ್, ರಸಗೊಬ್ಬರ ಅಂಗಡಿ ಮಾಲೀಕರು, ಸೊಸೈಟಿ ರಸಗೊಬ್ಬರ ಮಾರಾಟಗಾರರು, ರೈತ ಮುಖಂಡರು ಹಾಜರಿದ್ದರು.