

ನವದೆಹಲಿ: ಮಾರಕ ಕರೊನಾ ವೈರಸ್ ಸಾಂಕ್ರಾಮಿಕ ರೋಗವಾಗಿ ಪರಿಣಮಿಸಿದರೆ ಜಾಗತಿಕ ಆರ್ಥಿಕ ಹಿಂಜರಿತ ಉಂಟಾಗುತ್ತದೆ. ಈಗಾಗಲೇ ಚೀನಾದ ಆರ್ಥಿಕತೆಗೆ ದೊಡ್ಡ ಹೊಡೆತ ನೀಡಿರುವ ಕರೊನಾ ಸೋಂಕು, ಜಾಗತಿಕ ಆರ್ಥಿಕತೆಗೆ ಸಂಕಷ್ಟವೊಡ್ಡಬಹುದು ಎಂದು ಜಾಗತಿಕ ಆರ್ಥಿಕ ರೇಟಿಂಗ್ ಸಂಸ್ಥೆ ಮೂಡಿ’ಸ್ ಆತಂಕ ವ್ಯಕ್ತಪಡಿಸಿದೆ. ಚೀನಾದಲ್ಲಿ ಕರೊನಾ ದಿಂದಾಗಿ ವ್ಯಾಪಾರ ಮತ್ತು ಪ್ರವಾಸೋದ್ಯಮ ಸ್ಥಗಿತವಾಗಿದೆ. ಜಾಗತಿಕ ವಿಮಾನಯಾನ ಸಂಸ್ಥೆಗಳು ಸಹ ಚೀನಾಕ್ಕೆ ಹೋಗುತ್ತಿಲ್ಲ. ಅಮೆರಿಕ ಸೇರಿದಂತೆ ವಿವಿಧ ದೇಶಗಳಿಗೆ ಭೇಟಿ ನೀಡುತ್ತಿದ್ದ ಸುಮಾರು 30 ಲಕ್ಷ ಚೀನಾ ಪ್ರವಾಸಿಗರ ಪ್ರಯಾಣವೂ ಈಗ ಸ್ಥಗಿತವಾಗಿದೆ. ಇದರಿಂದ ಜಾಗತಿಕ ಪ್ರವಾಸೋದ್ಯಮಕ್ಕೂ ಹೊಡೆತ ಬಿದ್ದಿದೆ ಎಂದು ಮೂಡಿ’ಸ್ ಸಂಸ್ಥೆಯ ಮುಖ್ಯ ಅರ್ಥಶಾಸ್ತ್ರಜ್ಞ ಮಾರ್ಕ್ ಜಾಂಡಿ ಹೇಳಿದ್ದಾರೆ.
ಜಾಗತಿಕವಾಗಿ ಏನೇನು ಸಮಸ್ಯೆ?
ಇರಾನ್ ಆರೋಗ್ಯ ಉಪಸಚಿವಗೆ ಸೋಂಕು
ಇರಾನ್ನ ಆರೋಗ್ಯ ಖಾತೆ ಉಪಸಚಿವ ಹರಿರ್ಚಿಗೆ ಕರೊನಾ ಸೋಂಕು ತಗುಲಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಾಗಿದೆ. ಇರಾನ್ನಲ್ಲಿ ಕಳೆದ 24 ಗಂಟೆಯಲ್ಲಿ ಕರೊನಾಗೆ ಮತ್ತೆ ನಾಲ್ವರು ಸಾವನ್ನಪ್ಪಿದ್ದು, ಮೃತರ ಸಂಖ್ಯೆ 19ಕ್ಕೆ ಏರಿಕೆಯಾಗಿದೆ. ಜತೆಗೆ ಹೊಸದಾಗಿ 44 ಜನರಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಒಟ್ಟು ಸೋಂಕಿತರ ಸಂಖ್ಯೆ 139ಕ್ಕೆ ಏರಿಕೆಯಾಗಿದೆ.
ಚೀನಾದಲ್ಲಿ ಕರೊನಾ ತೀವ್ರತೆ ಮತ್ತೆ ಹೆಚ್ಚಾಗುತ್ತಿದ್ದು ಬುಧವಾರ 52 ಜನರು ಸಾವನ್ನಪ್ಪಿದ್ದಾರೆ. ಈ ಮೂಲಕ ಮೃತರ ಸಂಖ್ಯೆ 2,715ಕ್ಕೆ ಏರಿಕೆಯಾಗಿದೆ. ಅಲ್ಲದೇ ಮತ್ತೆ 406 ಜನರಲ್ಲಿ ಕರೊನಾ ಸೋಂಕು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 78,064ಕ್ಕೆ ಏರಿದೆ. ಜತೆಗೆ ಚೀನಾದಲ್ಲಿ ಈವರೆಗೆ ಸುಮಾರು 49 ಪೊಲೀಸರು ಕರೊನಾದಿಂದಾಗಿ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಕರೊನಾ ಪರಿಸ್ಥಿತಿ ನಿಭಾಯಿಸಲು ಚೀನಾಗೆ ಭಾರತ ಸಹಾಯ ನೀಡುತ್ತಿದ್ದು, ವಿವಿಧ ವೈದ್ಯಕೀಯ ಔಷಧಿ, ಉಪಕರಣಗಳನ್ನು ಹೊತ್ತ ವಾಯುಪಡೆಯ ಸಿ-17 ವಿಮಾನ ಬುಧವಾರ ಚೀನಾಗೆ ತೆರಳಿದೆ. ಭಾರತಕ್ಕೆ ವಾಪಸ್ ಬರುವಾಗ ಅಲ್ಲಿ ಉಳಿದಿರುವ ಸುಮಾರು 100 ಭಾರತೀಯರನ್ನು ಕರೆತರಲಿದೆ.