

ಶಿವಮೊಗ್ಗ: ಪ್ರಪಂಚದ ಅನೇಕ ರಾಷ್ಟ್ರಗಳು ಆರ್ಥಿಕವಾಗಿ ಅವನತಿ ಹೊಂದಿದ್ದರೆ, ಭಾರತ ಮಾತ್ರ ಆರ್ಥಿಕವಾಗಿ ಅಭಿವೃದ್ಧಿ ಪಥದಲ್ಲಿರಲು ಸಹಕಾರ ವ್ಯವಸ್ಥೆಯೇ ಕಾರಣ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ ಹೇಳಿದರು.
ನಗರದ ಡಿಸಿಸಿ ಬ್ಯಾಂಕ್‌ನಲ್ಲಿ ಶನಿವಾರ ರಾಜ್ಯ ಸಹಕಾರ ಮಹಾ ಮಂಡಳ, ರಾಜ್ಯ ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್, ಜಿಲ್ಲಾ ಸಹಕಾರ ಯೂನಿಯನ್ ಹಾಗೂ ಶಿವಮೊಗ್ಗ ಸಹಕಾರ ಇಲಾಖೆ ಆಶ್ರಯದಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ವಿಶೇಷ ಸಹಕಾರ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದರು. 1994-95ರಲ್ಲಿ ಜಿಲ್ಲೆ ಒಳಗೊಂಡಂತೆ ಇಡೀ ರಾಜ್ಯದಲ್ಲಿ ಒಂದು ಮಟ್ಟಿಗೆ ಪಿಕಾರ್ಡ್ ಬ್ಯಾಂಕ್‌ಗಳು ಆರ್ಥಿಕವಾಗಿ ನಷ್ಟವನ್ನು ಅನುಭವಿಸುತ್ತಿದ್ದವು. ಆದರೆ ಪ್ರಸ್ತುತ ಎಲ್ಲ ಪಿಕಾರ್ಡ್ ಬ್ಯಾಂಕ್‌ಗಳು ಸ್ವಂತ ಕಟ್ಟಡ ಹೊಂದಿ ಆರ್ಥಿಕ ಅಭಿವೃದ್ಧಿ, ಸ್ವಾವಲಂಬಿಯಾಗಿ ತನ್ನ ಸದಸ್ಯರಿಗೆ ಕೃಷಿ ಸಾಲದ ಜತೆ ಇನ್ನಿತರ ಸಾಲ ಸೌಲಭ್ಯ ಕಲ್ಪಿಸುತ್ತಿವೆ ಎಂದರು. ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ವಾಟಗೋಡು ಸುರೇಶ್ ಮಾತನಾಡಿ, ಯೂನಿಯನ್‌ನಿಂದ ಜರುಗುವ ತರಬೇತಿ ಕಾರ್ಯಕ್ರಮಗಳಲ್ಲಿ ಪ್ರತಿಯೊಬ್ಬ ಸಹಕಾರಿ, ಸಿಬ್ಬಂದಿ ಪಾಲ್ಗೊಂಡು ಪ್ರಯೋಜನ ಪಡೆಯಬೇಕು. ಸಂಸ್ಥೆಯನ್ನು ಇನ್ನಷ್ಟು ಸದೃಢಗೊಳಿಸಲು ದಿನನಿತ್ಯದ ಕೆಲಸಗಳಲ್ಲಿ ಅನುಷ್ಠಾನಗೊಳಿಸಬೇಕು ಎಂದು ಸಲಹೆ ನೀಡಿದರು. ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎಸ್.ಕೆ.ಮರಿಯಪ್ಪ, ಡಿಸಿಸಿ ಬ್ಯಾಂಕ್ ನಿರ್ದೇಶಕ ಎಚ್.ಎನ್.ವಿಜಯದೇವ್, ಉಪನಿಬಂಧಕ ನಾಗಭೂಷಣ ಸಿ. ಕಲ್ಮನೆ, ಕಾಸ್‌ಕಾರ್ಡ್ ಬ್ಯಾಂಕ್ ಜಿಲ್ಲಾ ವ್ಯವಸ್ಥಾಪಕ ಎನ್.ರಘುನಾಥ್, ಶಿವಮೊಗ್ಗ ಜಿಲ್ಲಾ ಸಹಕಾರ ಯೂನಿಯನ್ ಉಪಾಧ್ಯಕ್ಷ ಎಚ್.ಎನ್.ಸಂಜೀವಕುಮಾರ್, ನಿರ್ದೇಶಕರಾದ ಎಂ.ಮಂಜಪ್ಪ, ರಾಜು ಜಿ. ಪಟೇಲ್, ಕೆ.ಜಿ.ಮಮತಾ, ಜಯರಾಮ್ ಗೋಂದಿ, ಪಿ.ವೀರಮ್ಮ, ಡಿ.ಎಸ್.ಈಶ್ವರಪ್ಪ, ಪಿ.ಕರಿಯಪ್ಪ, ಎಸ್.ಎಲ್.ನಿಖಿಲ್ ಇತರರಿದ್ದರು. ಉತ್ತರ ಕನ್ನಡದ ಸಹಕಾರ ಸಂಘಗಳ ನಿವೃತ್ತ ಲೆಕ್ಕ ಪರಿಶೋಧನಾ ಉಪನಿರ್ದೇಶಕ ಜಿ.ಕೆ.ರಾಮಪ್ಪ ಅವರು ಬಂಡವಾಳ ಕ್ರೋಡೀಕರಣ ಮತ್ತು ಎನ್‌ಪಿಎ ಕುರಿತು ಎನ್.ರಘುನಾಥ್ ಉಪನ್ಯಾಸ ನೀಡಿದರು.
ಸೌಹಾರ್ದ ಕಾಯ್ದೆಯಡಿ ಸಹಕಾರ ಇಲಾಖೆ ಮತ್ತು ಸರ್ಕಾರ ಯಾವುದೇ ರೀತಿಯಲ್ಲಿ ಮಧ್ಯಸ್ಥಿಕೆ ವಹಿಸುವುದಿಲ್ಲ. ಅಲ್ಲದೆ ಸಂಘದ ಸ್ಥಾಪನೆ ಮತ್ತು ಸಮಾಪನೆಗೆ ಮಾತ್ರ ಸಹಕಾರ ಇಲಾಖೆ ಕಾರ್ಯ ನಿರ್ವಹಿಸುತ್ತದೆ. ಆದರೆ ಸಹಕಾರ ಕಾಯ್ದೆಯಲ್ಲಿ ಸಹಕಾರ ಇಲಾಖೆಯು ಪ್ರತಿ ಹಂತದಲ್ಲೂ ಮತ್ತು ಸರ್ಕಾರ ಸಹ ಸಹಕಾರ, ಸಹಾಯ ನೀಡುತ್ತಿದೆ. -ಆರ್.ಎಂ.ಮಂಜುನಾಥ ಗೌಡ, ಶಿವಮೊಗ್ಗ ಡಿಸಿಸಿ ಬ್ಯಾಂಕ್ ಅಧ್ಯಕ್ಷ