ಶಿವಾಜಿ ಇರದಿದ್ದರೆ ದೇಶ ಉಳಿಯುತ್ತಿರಲಿಲ್ಲ: ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯಂದು ಸಚಿವ ಸಿ.ಟಿ. ರವಿ ಅಭಿಮತ

ಶಿವಾಜಿ
Published on

 ಬೆಂಗಳೂರು: ಛತ್ರಪತಿ ಶಿವಾಜಿ ಮಹಾರಾಜರು ಹೋರಾಡಿ ಹಿಂದು ಸಾಮ್ರಾಜ್ಯ ಕಟ್ಟದಿದ್ದರೆ ಭಾರತ ಮತ್ತೊಂದು ಪಾಕಿಸ್ತಾನ ಅಥವಾ ಅಫ್ಘಾನಿಸ್ತಾನ ಆಗಿರುತ್ತಿತ್ತು ಎಂದು ಸಚಿವ ಸಿ.ಟಿ. ರವಿ ಅಭಿಪ್ರಾಯಪಟ್ಟಿದ್ದಾರೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬುಧವಾರ ಆಯೋಜಿಸಿದ್ದ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಉದ್ಘಾಟಿಸಿ ಮಾತನಾಡಿದರು.

ಈಗಲೂ ಹಿಂದುಗಳು ನಾವೆಲ್ಲ ಒಂದೇ ಎಂಬ ಭಾವನೆ ಬೆಳೆಸಿಕೊಳ್ಳದಿದ್ದರೆ ಭಾರತಕ್ಕೆ ಉಳಿಗಾಲವಿಲ್ಲ ಎಂದರು. ಭಾರತ ನೆಲದಲ್ಲಿ ಶಿವಾಜಿ ಜನ್ಮ ತಾಳಿರದಿದ್ದರೆ ಇಂದು ನಮ್ಮ ತಾಯಂದಿರ ಹಣೆಯಲ್ಲಿ ಕುಂಕುಮ ಉಳಿಯುತ್ತಿರಲಿಲ್ಲ. ಇಂಥ ನಾಯಕನನ್ನು ಭಾಷೆ, ಜಾತಿ, ಪ್ರದೇಶಕ್ಕೆ ಸೀಮಿತ ಗೊಳಿಸಬಾರದು. ಅವರು ಕೇವಲ ಮರಾಠಿಗರಿಗೆ ಅಷ್ಟೇ ಅಲ್ಲ, ಎಲ್ಲ ಹಿಂದುಗಳಿಗೂ ಆದರ್ಶಪ್ರಾಯರು ಎಂದರು.

ಸಚಿವ ಶ್ರೀಮಂತ ಪಾಟೀಲ, ಮಾಜಿ ಸಚಿವ ಪಿಜಿಆರ್ ಸಿಂಧ್ಯ, ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್ ರಾಜ್ಯಾಧ್ಯಕ್ಷ ಸುರೇಶ್​ರಾವ್ ಸಾಠೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇ ಶಕ ರಂಗಪ್ಪ, ಸಾಹಿತಿ ಜಗನ್ನಾಥರಾವ್ ಬಹುಳೆ ಇದ್ದರು.

ಸಚಿವರ ಮರಾಠಿ ಭಾಷಣ: ಭಾಷಣದ ಆರಂಭದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯನ್ನು ಆಚರಿಸುತ್ತಿರುವುದಕ್ಕೆ ಸರ್ಕಾರಕ್ಕೆ ಕನ್ನಡದಲ್ಲಿ ಧನ್ಯವಾದ ಅರ್ಪಿಸಿದ ಸಚಿವ ಶ್ರೀಮಂತ ಪಾಟೀಲ, ನಂತರ ಮರಾಠಿಯಲ್ಲಿ ಮಾತು ಮುಂದುವರಿಸಿದರು.

ಮುಂಬರುವ ರಾಜ್ಯ ಮುಂಗಡಪತ್ರದಲ್ಲಿ ಮರಾಠ ಸಮುದಾಯದ ಅಭಿವೃದ್ಧಿಗೆ ಮರಾಠ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡುವುದಾಗಿ ಘೋಷಿಸಿ, 100 ಕೋಟಿ ರೂ. ಅನುದಾನ ಮೀಸಲಿಡಬೇಕು. ಮರಾಠ ಸಮುದಾಯವನ್ನು ಪ್ರವರ್ಗ 3ಬಿ ಯಿಂದ ಪ್ರವರ್ಗ 2ಎಗೆ ಸೇರಿಸಬೇಕು. | ವಿ.ಎ. ರಾಣೋಜಿರಾವ್ ಸಾಠೆ , ಕರ್ನಾಟಕ ಕ್ಷತ್ರೀಯ ಮರಾಠ ಪರಿಷತ್ ಆಡಳಿತ ಮಂಡಳಿ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net