ತಪಸ್ಸು ಸಿದ್ಧಿಯಾದರೆ ಸಾಧನೆ

untitled-design-1-688908ab6249f
Published on
ಸೂರ್ಯನು ಉದಯಿಸುವಾಗ ತನ್ನ ಕಿರಣಗಳೆಂಬ ಕೈಯಿಂದ ಕಮಲಗಳನ್ನು ಅರಳಿಸುವಂತೆ, ಚಂದ್ರನು ತನ್ನ ಕಾಂತಿಯ ಕೈಗಳಿಂದ ಬಿಳಿನೈದಿಲೆಗಳನ್ನು ಅರಳಿಸುತ್ತಾನೆ. ಚಂದ್ರನ ಕಿರಣಗಳ ಸ್ಪರ್ಶವಾದಾಗಲೇ ನೈದಿಲೆ ಗಳು ಅರಳಿ ನಗು ಚೆಲ್ಲುತ್ತವೆ. ನೈದಿಲೆಗಳು ಚಂದ್ರನ ಕಿರಣಗಳಿಗಾಗಿ ಕಾದು ಕುಳಿತಿರುತ್ತವೆ. ಅವುಗಳ ಅಪೇಕ್ಷೆಯನ್ನು ಫಲಾಪೇಕ್ಷೆ ಇಲ್ಲದೇ ಪೂರೈಸುವ ಚಂದ್ರನ ಕಾಂತಿಯು ಇಮ್ಮಡಿಯಾಗುತ್ತದೆ. ಗೌರವವೂ ದ್ವಿಗುಣಿತವಾಗುತ್ತದೆ. ಯಾವಾಗಲೂ ಪರರಿಗಾಗಿ ಬದುಕುವ, ಪರೋಪಕಾರ ಮಾಡುವ ಸ್ವಭಾವವುಳ್ಳವರನ್ನು ಸಜ್ಜನಸಮಾಜ ಆದರಿಸುತ್ತದೆ. ಇದು ಶ್ರೇಷ್ಠಸ್ವಭಾವ.

ಮಾನವರಾಗಿ ಹುಟ್ಟಿದ ನಾವು ಇಂತಹ ಸದ್ಗುಣ ಗಳನ್ನು ಬೆಳೆಸಿಕೊಳ್ಳಬೇಕು. ಆಗಲೇ ಮಾನವ ಜನ್ಮಸಾರ್ಥಕವಾಗುವುದು. ನಮ್ಮ ಸ್ವಭಾವ ವಿಚಿತ್ರವಾದದ್ದು. ಮಾಡಬೇಕಾದ ಕೆಲಸಗಳಿಗಿಂತಲೂ ಮಾಡಬಾರದ ಕೆಲಸದತ್ತ ಹೆಚ್ಚು ಗಮನ ಹರಿಸುತ್ತೇವೆ. ಇದೇ ನಮ್ಮ ಬದುಕನ್ನು ಅಪಮೌಲ್ಯಗೊಳಿಸುತ್ತದೆ. ಸಜ್ಜನಿಕೆ, ಸಂತಗುಣ ಎಲ್ಲರಲ್ಲಿಯೂ ಇರುತ್ತದೆ ಎಂಬುದೇನೂ ಇಲ್ಲ. ಕೆಲವರಿಗೆ ಜನ್ಮಜಾತವಾಗಿ ಸಿದ್ದಿಸುತ್ತದೆ. ಇನ್ನು ಕೆಲವರಿಗೆ ಬಾಲ್ಯದಿಂದಲೂ ತಿಳಿಸಿ ಬೆಳೆಸಬೇಕಾ ಗುತ್ತದೆ. ಈ ಕಾರಣಕ್ಕಾಗಿಯೇ ಮಕ್ಕಳಿಗೆ ಮೌಲ್ಯ ಶಿಕ್ಷಣ ನೀಡಬೇಕು. ಮಕ್ಕಳಲ್ಲಿ ಮಾನವೀಯ ಸಭ್ಯತೆಯನ್ನು ಬೆಳೆಸಬೇಕು. ಇಂತಹ ಶಿಕ್ಷಣ ಹಾಗೂ ಸಂಸ್ಕಾರಗಳಿಂದ ಮಾತ್ರ ಸಭ್ಯತೆ ಸಿದ್ದಿಸುವುದು.

ಅಜೀರ್ಣಂ ತಪಸಃ ಕ್ರೋಧೋ ಜ್ಞಾನಾಜೀರ್ಣಮಹಂಕೃತಿಃ |

ಪರನಿಂದಾ ಕ್ರಿಯಾಜೀರ್ಣಾಂ ಅನ್ನಾಜೀರ್ಣಾಂ ವಿಷೂಚಿಕಾ ||

(ತಪಸ್ಸಿನ ಅಜೀರ್ಣ ಸಿಟ್ಟು. ಜ್ಞಾನದ ಅಜೀರ್ಣ ಅಹಂಕಾರ, ಕ್ರಿಯೆಯ ಅಜೀರ್ಣ ಅವರಿವರನ್ನು ಆಡಿಕೊಳ್ಳುವುದು. ಅನ್ನದ ಅಜೀರ್ಣ ಊಟ ಮಾಡಿದ್ದು ದಕ್ಕದಿರುವುದು.) ಮನುಷ್ಯನ ವ್ಯಕ್ತಿತ್ವವನ್ನು ರೂಪಿಸು ವಲ್ಲಿ ಅವನ ಮನಸ್ಸು ಪ್ರಮುಖ ಪಾತ್ರವಹಿಸುತ್ತದೆ. ಯಾವ ವ್ಯಕ್ತಿಯು ತನ್ನ ಮನಸ್ಸನ್ನು ನಿಯಂತ್ರಣದಲ್ಲಿಡುತ್ತಾನೋ, ಅವನು ಎಲ್ಲ ಕ್ಷೇತ್ರಗಳಲ್ಲಿ ಯಶಸ್ವಿಯಾಗಬಹುದು. ಆದರೆ ಕೆಲವೊಂದು ಬೇಡವಾದ ಗುಣಗಳು ಜೀವನದ ಬೆಳವಣಿಗೆಗೆ ಅಡ್ಡಿಯಾಗುತ್ತವೆ. ಮನಸ್ಸಿನ ಪ್ರಶಾಂತತೆಗಾಗಿ ಮಾಡುವ ಸಾಧನೆಯ ಹೆಸರು ತಪಸ್ಸು. ಯಾವಾಗ ಇದನ್ನು ಸಿದ್ಧಿಸಿಕೊಳ್ಳುವೆವೋ ಆಗ ಅವನ ಸಾಧನೆ ಮುಗಿದಂತೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net