ಒಂದೇ ಮಗು ಸಾಕೆಂದು ನಮ್ಮ ಹೆತ್ತವರೂ ಯೋಚಿಸಿದ್ದರೆ?

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on

ಈ ಹಿನ್ನೆಲೆಯಲ್ಲಿ ವಿವಾಹದ ಉದ್ದೇಶ ಬರೀ ಸಂತೋಷವೊಂದೇ ಅಲ್ಲ. ಸಂತಾನೋತ್ಪತ್ತಿ ತನ್ಮೂಲಕ ವಂಶಾಭಿವದ್ಧಿ ಕೂಡ. ನಮ್ಮ ಹೆತ್ತವರು ಸಹ ಮದುವೆ ಮಾಡಿಕೊಳ್ಳುವ, ಮಕ್ಕಳನ್ನು ಹಡೆಯುವ ಯೋಚನೆಯನ್ನೇ ಮಾಡದಿರುತ್ತಿದ್ದರೆ ನಾವ್ಯಾರೂ ಈ ಜಗತ್ತಿಗೆ ಬರುತ್ತಿರಲಿಲ್ಲ. ಈ ಹಿನ್ನೆಲೆಯಲ್ಲಿ ಸಕಾಲದಲ್ಲಿ ಮದುವೆ ಮಾಡಿಕೊಳ್ಳುವುದು, ನಂತರ ಮಕ್ಕಳನ್ನು ಹಡೆಯುವುದು ಅವಶ್ಯಕ ಹಾಗೂ ಅರ್ಥಪೂರ್ಣವಾದ ನೈಸರ್ಗಿಕ ಪ್ರಕ್ರಿಯೆ. ಆದರೆ, ಎಷ್ಟು ಮಕ್ಕಳನ್ನು ಹಡೆಯಬೇಕು ಎನ್ನುವುದು ಸಾಂಸಾರಿಕ, ಸಾಮಾಜಿಕ ಹಾಗೂ ರಾಷ್ಟ್ರೀಯ ಹಿತಾಸಕ್ತಿಗೆ ಸಂಬಂಧಪಟ್ಟ ವಿಷಯ.

ಹಿಂದಿನ ಕಾಲದಲ್ಲಿ ಮನೆ ತುಂಬಾ ಮಕ್ಕಳಿರುವುದು ಸರ್ವೆ ಸಾಮಾನ್ಯವಾಗಿತ್ತು. ಕ್ರಮೇಣ ಸಂಸಾರ ನಡೆಸಲು ಬೇಕಾದ ಖರ್ಚು ವೆಚ್ಚ ಜಾಸ್ತಿಯಾದಂತೆ, ಹೆತ್ತವರೂ ಮಕ್ಕಳ ಸಂಖ್ಯೆಯನ್ನು ಕಡಿಮೆ ಮಾಡಿಕೊಂಡರು. ಮಕ್ಕಳ ವಿದ್ಯಾಭ್ಯಾಸದ ವೆಚ್ಚವೂ ಏರಲಾರಂಭಿಸಿತು. ಎಲ್.ಕೆ.ಜಿಗೆ ಪ್ರವೇಶ ಪಡೆಯಲೂ ಲಕ್ಷದ ಮೇಲೆ ಖರ್ಚಾಗುತ್ತದೆ! ಇನ್ನು ವೃತ್ತಿಪರ ಕೋರ್ಸಗಳಿಗೆ ಪ್ರವೇಶ ಪಡೆದು ಅದನ್ನು ಪೂರೈಸಲು ಕೋಟಿ ರೂಪಾಯಿಗಳೇ ಬೇಕಾದೀತು. ಮಧ್ಯಮ ವರ್ಗದ ಕುಟುಂಬಗಳಿಗೆ ಇದು ಕೈಗೆಟುಕದ ತುತ್ತಾಗಿದೆ. ಮೇಲಾಗಿ ಗಂಡ ಹೆಂಡತಿಯರಿಬ್ಬರೂ, ದುಡಿಯಲೇಬೇಕಾದ ಅನಿವಾರ್ಯತೆ ಬಂದಿರುವ ಕಾರಣ, ಹಿಂದೂ ಕುಟುಂಬಗಳು ತಮ್ಮ ಮಕ್ಕಳ ಸಂಖ್ಯೆಯನ್ನು ಇಳಿಸುತ್ತಾ ಈಗಂತೂ, ಒಂದೇ ಮಗುವಿನಲ್ಲಿ ತೃಪ್ತಿ ಪಟ್ಟುಕೊಳ್ಳುವ ಪರಿಸ್ಥಿತಿ ನಿರ್ವಣವಾಗಿದೆ.

ಇದು ‘ಸಿಂಗಲ್ ಚೈಲ್ಡ್ ಸಿಂಡ್ರೋಮ್ ಎಂಬ ಹೊಸ ಕಾಯಿಲೆಯನ್ನು ಸಷ್ಟಿ ಮಾಡಿದೆ. ಹಾಗೆಂದು ಮನೆ ತುಂಬಾ ಮಕ್ಕಳನ್ನು ಹಡೆಯುವುದು, ತಾಯಿಯ ಆರೋಗ್ಯ ದಷ್ಟಿಯಿಂದಲೂ ಒಳ್ಳೆಯ ನಿರ್ಧಾರವಲ್ಲ. ಅಂತೆಯೇ ಒಂದೇ ಮಗುಸಾಕು, ಎನ್ನುವುದು ಕೂಡ ಸುರಕ್ಷಿತ, ಸಮಂಜಸ ನಿರ್ಧಾರವಲ್ಲ. ಏಕೆಂದರೆ, ಒಂದೇ ಮಗುವಿದ್ದರೆ ಆ ಮಗುವಿಗೆ ಒಂಟಿತನ ಕಾಡಲಾರಂಭಿಸುತ್ತದೆ. ಜೊತೆಗೊಬ್ಬ ತಮ್ಮನೋ ತಂಗಿಯೋ ಇದ್ದರೆ, ಆ ಆನಂದವೇ ಬೇರೆ. ಇಬ್ಬರೂ ಜೊತೆಜೊತೆಯಾಗಿ ಆಟವಾಡುತ್ತಾ ಒಬ್ಬರಿಂದೊಬ್ಬರು ಕಲಿಯುತ್ತಾ ಒಬ್ಬರು ಇನ್ನೊಬ್ಬರಿಗೆ ಪೂರಕವಾಗಿ ಬೆಳೆಯುತ್ತಾರೆ. ಆಟಪಾಠಗಳನ್ನು ಜತೆಯಾಗಿ ಆನಂದಿಸುತ್ತಾರೆ.

ಈ ಸದವಕಾಶವನ್ನು ಕಳೆದುಕೊಂಡ ಮಗು, ಅಂತಮುಖಿಯಾಗುತ್ತದೆ. ಹಾಗೂ ಅದು ಜೀವನೋತ್ಸಾಹವನ್ನು ಕಳೆದುಕೊಳ್ಳುವ ಸಂದರ್ಭಗಳೂ ಉಂಟಾಗುತ್ತದೆ. ಮಾತ್ರವೇ ಅಲ್ಲ, ಇತರ ಮಕ್ಕಳೊಂದಿಗೆ ವ್ಯವಹರಿಸುವ ಜಾಣ್ಮೆ ಯನ್ನು ಕಳೆದುಕೊಳ್ಳುತ್ತದೆ. ತನ್ನ ಒಡಹುಟ್ಟಿದವರ ಪ್ರೀತಿಯಿಂದ ವಾತ್ಸಲ್ಯದಿಂದ ವಂಚಿತವಾಗುತ್ತದೆ. ಅಕಸ್ಮಾತ್ ಇದ್ದ ಒಂದೇ ಒಂದು ಮಗು, ಅನಾರೋಗ್ಯದಿಂದಲೋ, ಅಪಘಾತದಿಂದಲೋ, ಅಕಾಲದಲ್ಲಿ ಮರಣವನ್ನಪ್ಪಿದರೆ ಹೆತ್ತವರಿಗೆ ಮಕ್ಕಳೇ ಇಲ್ಲದಂತಾಗುತ್ತದೆ ಹಾಗೂ ಇದು ನಿತ್ಯ ನಿರಂತರ ದುಃಖವನ್ನು ತಂದೊಡ್ಡುತ್ತದೆ. ಮಾತ್ರವೇ ಅಲ್ಲ, ಹೆತ್ತವರ ಕಾಲಾನಂತರ, ಈ ಜಗತ್ತಿನಲ್ಲಿ ಹತ್ತಿರ ಒಡಹುಟ್ಟಿದ ಸಂಬಂಧಿಕರಿಲ್ಲದೆ, ವ್ಯಕ್ತಿ ಏಕಾಂಗಿತನವನ್ನು ಅನುಭವಿಸಬೇಕಾಗುತ್ತದೆ.

ಒಟ್ಟಿನಲ್ಲಿ ಬಿಡುವಿಲ್ಲದ ಯಾಂತ್ರಿಕ ಜೀವನವನ್ನು ನಡೆಸಬೇಕಾದ ಈ ದಿನಗಳಲ್ಲಿ ಬಾಲ್ಯದಲ್ಲಾಗಲೀ, ಮುಂದೆಯಾಗಲೀ ಹೆತ್ತವರು ಮತ್ತು ಒಡಹುಟ್ಟಿದವರ ಸಂಸರ್ಗ, ಸಂಪರ್ಕ ಇಲ್ಲದೆ, ವ್ಯಕ್ತಿಯಲ್ಲಿ ಅನಾಥಪ್ರಜ್ಞೆಯೊಂದು ಕಾಡಬಹುದು. ಇದು ಆತನ ವರ್ತನೆ, ಜೀವನ ಮತ್ತು ವ್ಯಕ್ತಿತ್ವದ ಮೇಲೂ ಪರಿಣಾಮ ಬೀರಬಹುದು. ಇರುವ ಒಂದೇ ಒಂದು ಮಗುವಿನ ಮೇಲೆ ಇರುವ ವ್ಯಾಮೋಹದಿಂದಾಗಿ ಹೆತ್ತವರು ಮಗು ಕೇಳಿದ್ದನ್ನೆಲ್ಲಾ ಕೊಡುವ ಅದು ಹೇಳಿದಂತೆ ಕುಣಿಯುವ ಕೈಗೊಂಬೆಗಳಾಗಬಹುದು. ಮಗುವನ್ನು ತಿದ್ದಿತೀಡಿ ಶಿಸ್ತಿನಿಂದ ಬೆಳೆಸುವಲ್ಲಿ ವಿಫಲರಾಗುವ ಸಾಧ್ಯತೆ ಜಾಸ್ತಿ ಇರುತ್ತದೆ. ಈ ಎಲ್ಲಾ ದಷ್ಟಿಗಳಿಂದ, ದಂಪತಿಗಳಿಗೆ ಆರೋಗ್ಯ ಸಮಸ್ಯೆ, ಮನೆಯೊಳಗೆ ಆರ್ಥಿಕ ಸಮಸ್ಯೆ ಇಲ್ಲದಿದ್ದಲ್ಲಿ ಎರಡು ಮಕ್ಕಳನ್ನು ಪಡೆಯುವುದು ಕ್ಷೇಮ ಹಾಗೂ ಸುಖಕರ. 

ಇವರಿಬ್ಬರೂ ಗಂಡಾಗಲೀ, ಹೆಣ್ಣಾಗಲೀ ಪರವಾಗಿಲ್ಲ. ಕುಟುಂಬದ ಎರಡು ಕಣ್ಣುಗಳಿಂತಿರಲಿ. ಹೆತ್ತವರಿಗೆ ಇವರಿಬ್ಬರ ಮೇಲೂ ಏಕರೀತಿ- ಏಕನೀತಿ- ಏಕಪ್ರೀತಿ ಇರಲಿ. ಇಬ್ಬರಿಗೂ ಸರಿಸಮಾನವಾದ ಶಿಕ್ಷಣ, ಸ್ಥಾನಮಾನ, ಆಸ್ತಿಪಾಸ್ತಿಗಳಲ್ಲಿ ಪಾಲುನೀಡಬೇಕಾದುದು ನ್ಯಾಯಸಮ್ಮತ ಹಾಗೂ ಧರ್ಮ ಸಮ್ಮತ. ಸತ್ತ ಮೇಲೆ ಸದ್ಗತಿ ಕಾಣಿಸಲು, ಸ್ವರ್ಗ ಸೇರಿಸಲು, ಗಂಡು ಮಗನೊಬ್ಬನಿರಲೇಬೇಕೆಂಬುದು ಒಂದು ನಂಬಿಕೆಯಷ್ಟೇ. ನಾವು ಸತ್ತಮೇಲೆ, ಸ್ವರ್ಗ ಅಂತ ಇದ್ದರೆ, ಅದು ಪ್ರಾಪ್ತಿಯಾಗುವುದು, ನಮ್ಮ ಮಗ ಹಾಕಿದ ಪಿಂಡದಿಂದ ಅಲ್ಲ, ನಾವು ಗೈದ ಸತ್ಕಾರ್ಯಗಳಿಂದ. ಸ್ವಾಮೀಜಿಯೊಬ್ಬರು ಹೇಳುತ್ತಿರುತ್ತಾರೆ. ಮನೆಗೆ ಇರಬೇಕು ಮೂರು ಮಕ್ಕಳು. ಒಂದು ಮನೆಗೆ, ಇನ್ನೊಂದು ದೇಶಕ್ಕೆ, ಇನ್ನೊಂದು ವಿದೇಶಕ್ಕೆ. ಅದೇನೇ ಇರಲಿ ಮಕ್ಕಳನ್ನು ಹಡೆಯುವುದು ಪ್ರಕೃತಿ-ಮಕ್ಕಳೇ ಬೇಡವೆನ್ನುವುದು ವಿಕೃತಿ. ಮಕ್ಕಳನ್ನು ಪಡೆಯಲು ಸಾಧ್ಯವಾಗದಾಗ, ಅನಾಥ ಮಗುವೊಂದನ್ನು ದತ್ತು ಪಡೆದುಕೊಳ್ಳೋದು ಸಂಸ್ಕೃ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net