

ಕೋಲಾರ: ಹಿರಿಯ ರಾಜಕಾರಣಿ, ವಿದಾನಸಭೆಯ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಲೋಕಾಯುಕ್ತ ದುರ್ಬಳಕ್ಕೆ ಮಾಡಿಕೊಂಡು ನನ್ನ ಕುಟುಂಬವನ್ನು ಗುರಿಯಾಗಿಸಿ ದಾಳಿ ಮಾಡಿಸಿದ್ದಾರೆ. ನನ್ನ ಜೀವಕ್ಕೆ ಅಪಾಯವಾದರೆ ಅವರೇ ನೇರ ಹೊಣೆ' ಎಂದು ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಹಾಗೂ ಹಾಲಿ ನಿರ್ದೇಶಕರಾಗಿ ಆಯ್ಕೆಯಾಗಿರುವ ಬ್ಯಾಲಹಳ್ಳಿ ಗೋವಿಂದಗೌಡ ಆಪಾದಿಸಿದರು.
ನಗರದಲ್ಲಿ ಬುಧವಾರ ನಡೆದ ಡಿಸಿಸಿ ಬ್ಯಾಂಕ್ ಚುನಾವಣೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ರಮೇಶ್ ಕುಮಾರ್ ಯಾವ ಮಟ್ಟಕ್ಕೆ ಬೇಕಾದರೂ ಇಳಿಯುತ್ತಾರೆ. ಚುನಾವಣೆಗೆ ಮುನ್ನಾ ದಿನ ಈ ದಾಳಿ ನಡೆದಿದೆ. ನಾನೊಬ್ಬ ರೈತ. ನನ್ನ ಮನೆಯಲ್ಲಿ ಏನು ಸಿಗುತ್ತದೆ? ಲೋಕಾಯುಕ್ತರು ರಮೇಶ್ಕುಮಾರ್ ಮಾತು ಕೇಳಿ ದಾಳಿ ನಡೆಸಿ ಬರಿಗೈಯಲ್ಲಿ ಹೋಗಿದ್ದಾರೆ ಎಂದ ಅವರು, ಜವಾಬ್ದಾರಿಯುತ ಮನುಷ್ಯನಿಂದ ಪ್ರಾಣ ತೆಗೆಯುವ ಯತ್ನ ನಿರೀಕ್ಷಿಸಿರಲಿಲ್ಲ ಎಂದರು.
ನಾನೆಂದೂ ಕೆಟ್ಟದಾಗಿ ಮಾತನಾಡಿಲ್ಲ
ಚುನಾವಣೆಗಳಲ್ಲಿ ರಮೇಶ್ಕುಮಾರ್ ಪರ 10 ವರ್ಷ ಕೆಲಸ ಮಾಡಿದ್ದೇನೆ. ಊರೂರುಗಳಲ್ಲಿ ಸಭೆ ನಡೆಯಲು ಪೆಂಡಾಲ್, ಊಟದ ವ್ಯವಸ್ಥೆ ಮಾಡಿದ್ದಾಗ ನಾನು ಹರಿಶ್ಚಂದ್ರನಾಗಿದ್ದೆ. ಈಗ ಅವರು ಸೋತ ನಂತರ ನಾನು ಭ್ರಷ್ಟನೇ?. ಆಗ ನನ್ನ ಚುನಾವಣೆಗೆ ಯಾವ ಹಣ ಖರ್ಚು ಮಾಡಿದ್ದೀರಿ ಎಂದು ಏಕೆ ಕೇಳಲಿಲ್ಲ?, ನಾನೆಂದೂ ರಮೇಶ್ ಕುಮಾರ್ ಕುರಿತು ಕೆಟ್ಟದಾಗಿ ಮಾತನಾಡಿಲ್ಲ. ಆದರೆ ಅವರು ನನ್ನ ತಾಯಿ ಕುರಿತು ಮಾತನಾಡಿದ್ದಾರೆ. ಅವರ ತಾಯಿ, ನನ್ನ ತಾಯಿ ಒಂದೇ ಎಂದು ಭಾವಿಸಿದ್ದೆ. ರಮೇಶ್ಕುಮಾರ್ ನನ್ನನ್ನು ಟಾರ್ಗೆಟ್ ಮಾಡಿದ್ದಾರೆ ಎಂದು ಗೋವಿಂದಗೌಡ ಆಕ್ರೋಶ ವ್ಯಕ್ತಪಡಿಸಿದರು.
* ದೂರವಾಣಿ ಕರೆ ಮಾಡುವ ಅಗತ್ಯವೇನಿತ್ತು...?
ಲೋಕಾಯುಕ್ತ ದಾಳಿಗೆ ನನ್ನ ವಿರೋಧವಿಲ್ಲ. ಆದರೆ, ನನ್ನ ಮನೆಗೆ ಬಂದಿದ್ದ ಲೋಕಾಯುಕ್ತ ಇನ್ಸ್ಪೆಕ್ಟರ್ಗೆ ರಮೇಶ್ ಕುಮಾರ್ ೧೦ ರಿಂದ ೧೨ ಬಾರಿ ಕರೆ ಮಾಡಿ ಏನು ಸಿಕ್ಕಿತು? ಎಂದು ಪದೇಪದೆ ಕೇಳಿದ್ದಾರೆ. ಕೋಲಾರದ ಆರ್ಎಂ ಗೋಲ್ಡನ್ ಸಿಟಿ ಮನೆಯಲ್ಲಿ ಪರಿಶೀಲಿಸಿ ಎಂದು ನಿರ್ದೇಶನ ನೀಡಿದ್ದಾರೆ. ಮೇಧಾವಿ ರಾಜಕಾರಣಿಯಿಂದ ಇದನ್ನು ನಿರೀಕ್ಷಿಸಿರಲಿಲ್ಲ ಎಂದು ಗೋವಿಂದಗೌಡ ಕಿಡಿಕಾರಿದರು.
* ಯಾವುದಕ್ಕೂ ಕೃತಜ್ಞತೆ ಇಲ್ಲ
ನನ್ನ ಮೇಲೆ ರಮೇಶ್ ಕುಮಾರ್ ಬೆಂಬಲಿಗರಿAದ ಹಲ್ಲೆ ಮಾಡುವ ಮಾಹಿತಿ ಹಿನ್ನೆಲೆಯಲ್ಲಿ ಪೊಲೀಸರೇ ನಿಮ್ಮ ರಕ್ಷಣೆಗೆ ಬಂದಿದ್ದೇವೆ ಎಂದು ಹೇಳುತ್ತಾರೆಂದರೆ ಅದರ ಅರ್ಥವೇನು?, ನಾನು ಅವರನ್ನು ತಂದೆಯೆAದು ಭಾವಿಸಿ ಸೇವೆ ಮಾಡಿದ್ದೇನೆ. ಅದ್ಯಾವುದಕ್ಕೂ ಅವರಿಗೆ ಕೃತಜ್ಞತೆ ಇಲ್ಲವಾಗಿದೆ ಎಂದ ಗೋವಿಂದಗೌಡರು, ನನ್ನ ಜೀವಕ್ಕೆ ಹಾನಿಯಾದರೆ ಅದಕ್ಕೆ ನೇರವಾಗಿ ರಮೇಶ್ ಕುಮಾರ್ ಅವರೇ ಹೊಣೆ ಎಂದು ಪುನರುಚ್ಚರಿಸಿದರು.
* ದ್ವೇಷ ರಾಜಕಾರಣವಲ್ಲವೇ?
ಸಚಿವ ಸುಧಾಕರ್, ಶಾಸಕರಾದ ನಂಜೇಗೌಡ, ಕೊತ್ತೂರು ಮಂಜುನಾಥ್ ಬಗ್ಗೆ ಮಾತನಾಡಲ್ಲ. ಅವರಿಗೆ ನಾನು ಮತದಾರನೂ ಅಲ್ಲ. ಆದರೆ ರಮೇಶ್ ಕುಮಾರ್ಗಾಗಿ ಕೆಲಸ ಮಾಡಿದ್ದೇನೆ. ಅವರು ಸೋತಾಗಲೂ ಅವರಿಗೆ ಮತ ಹಾಕಿದ್ದೇನೆ. ಸೋಲು-ಗೆಲುವು ಮುಖ್ಯವಲ್ಲ. ಜವಾಬ್ದಾರಿ ಮನುಷ್ಯನಾಗಿ ಪ್ರಾಣ ತೆಗೆಯುವ ಮಟ್ಟಕ್ಕೆ ಇಳಿಯಲು ಮುಂದಾಗಿರುವುದು ದುರಂತ. ಖಾಸಗಿ ಹೋಟೆಲ್ ಸಮೀಪ ನನ್ನ ವಿರುದ್ಧ ಽಕ್ಕಾರ ಕೂಗಲು ಅವರ ಅನುಯಾಯಿಗಳಿಗೆ ನೇರವಾಗಿ ಸೂಚಿಸುತ್ತಾರೆ ಎಂದರೆ ದ್ವೇಷ ರಾಜಕಾರಣವಲ್ಲವೇ ಎಂದು ಗೋವಿಂದಗೌಡ ಪ್ರಶ್ನಿಸಿದರು.
* ಬಾಬಾನ ಮೇಲೆ ಪ್ರಮಾಣ ಮಾಡಲಿ
ರಮೇಶ್ಕುಮಾರ್ ಅವರೇ... ನಿಮ್ಮ ಚುನಾವಣೆಗಳಲ್ಲಿ ನಾನು ಕೆಲಸ ಮಾಡಿಲ್ಲ, ನಿಮ್ಮ ಗೆಲುವಿಗೆ ಶ್ರಮಿಸಿಲ್ಲ ಎಂದು ಸಾಯಿಬಾಬಾ ದೇವಾಲಯದಲ್ಲಿ ಪ್ರಮಾಣ ಮಾಡಿ ಹೇಳಿ ಎಂದು ಸವಾಲೆಸೆದ ಗೋವಿಂದ ಗೌಡ ಅವರು, ಅವರಿಗಾಗಿ ದುಡಿದಿದ್ದಕ್ಕೆ ಸಿಕ್ಕ ಪ್ರತಿಫಲ ಇದೇ ಎಂದು ಬೇಸರಿಸಿದರು.