

ಅಂದೊ ಇಂದೋ ಎಂದೊ ಜನುಮ ಕಳೆಯುವುದು||
ಒಂದೆ ಮರೆವಿನ ಮುಸುಕು ಮುಸುಕಲಿಹುದೆಲ್ಲವನು|
ಸಂತಸದ ಮಾತಿಷ್ಟೆ-ಮಂಕುತಿಮ್ಮ||685||
ಹಾಗೋ ಹೀಗೋ ಹೇಗೋ ಜೀವಕಥೆಯು ಮುಗಿಯುತ್ತದೆ. ಅಂದೋ ಇಂದೋ ಎಂದೋ ಜನುಮವು ಕಳೆಯುವುದು. ಮರೆವು ಎನ್ನುವ ಒಂದು ಮುಸುಕು ಎಲ್ಲವನ್ನೂ ಮುಸುಕಿ ಬಿಡುವುದೇ ಒಂದು ಸಂತಸದ ಮಾತು ಎನ್ನುತ್ತದೆ ಈ ಕಗ್ಗ.
ಬದುಕಿನ ಪಯಣದಲ್ಲಿ ಅನೇಕ ಸಂದರ್ಭಗಳು ಎದುರಾಗುತ್ತವೆ. ವಿವಿಧ ವ್ಯಕ್ತಿ- ವಿಚಾರಗಳು ಸಂಪರ್ಕಕ್ಕೆ ಬರುವುದಿದೆ. ಭಾವಜೀವಿಯಾದ ಮಾನವನು ಪ್ರೀತಿ, ಸ್ನೇಹ, ದ್ವೇಷವೇ ಮೊದಲಾದ ಭಾವನೆಗಳನ್ನು ಪೋಷಿಸುತ್ತಾ ಕಹಿ-ಸಿಹಿ ನೆನಪುಗಳನ್ನು ಸಂಗ್ರಹಿಸುತ್ತಾನೆ. ಹೀಗೆ ಜೀವನದುದ್ದಕ್ಕೂ ಎಚ್ಚರಿರುವಷ್ಟು ಹೊತ್ತು ಹೊಸದಾದ ಮತ್ತು ವಿವಿಧ ಅನುಭವಗಳಿಗೆ ಒಳಪಡುವ ವ್ಯಕ್ತಿಯು ಅವೆಲ್ಲವನ್ನೂ ನೆನಪಿರಿಸಿಕೊಳ್ಳುವ ಹಾಗಿರುತ್ತಿದ್ದರೆ ಜೀವಿತಾವಸ್ಥೆಯು ಹೇಗಿರುತ್ತಿತ್ತು?
ಬೆಳಗು ಸಂಜೆಯ ನಡುವೆ ಸದ್ದಿಲ್ಲದೆ ಸರಿಯುವ ದಿನಗಳನ್ನು ಹಿಡಿದಿಡುವುದಕ್ಕಾಗುವುದಿಲ್ಲ. ಪ್ರತಿದಿನವೂ ಘಟಿಸುವ ಸಂಗತಿಗಳನ್ನು ಬಹಳ ದೀರ್ಘಕಾಲ ನೆನಪಿಟ್ಟುಕೊಳ್ಳಲೂ ಸಾಧ್ಯವಿಲ್ಲ. ಹೊಸನೀರು ಬಂದಾಗ ಹಳೆಯ ನೀರು ಹರಿದು ಹೋಗುವಂತೆಯೇ ಹೊಸಹೊಸ ಅನುಭವಗಳಿಗೆ ಒಳಪಡುತ್ತಿದ್ದಂತೆಯೇ ಹಳೆಯದು ಮರೆತು ಹೋಗುತ್ತದೆ. ಯಾವ ಸಂದರ್ಭ, ವ್ಯಕ್ತಿ, ವಿಚಾರಗಳು ಅಂತರಂಗಕ್ಕೆ ಇಳಿದಿವೆಯೋ ಅವುಗಳು, ವ್ಯಕ್ತಿಯು ಸ್ವಾಸ್ಥ್ಯದಿಂದ ಇರುವಷ್ಟು ಕಾಲ ನೆನಪಾಗಿ ಉಳಿಯಬಹುದು. ಆದರೆ ಕೇವಲ ಮೇಲ್ನೋಟದ ಅನುಭವವಾಗಿಯಷ್ಟೇ ಉಳಿದವುಗಳು ಮರೆಯಾಗಿ ಬಿಡುತ್ತವೆ.
ಜೀವಾತ್ಮವು ಲೋಕ ಸಂಸಾರದ ತಾಪತ್ರಯಗಳಿಗೆ ಸಿಲುಕಿ ಪರಿಷ್ಕರಣೆಗೊಂಡು ಬಂಧಮುಕ್ತವಾಗಿ ಪರಮಾತ್ಮನನ್ನು ಸೇರುವ ಯಾತ್ರೆಯೇ ಈ ಬದುಕು. ಈ ಪರಿಷ್ಕರಣೆಯ ಕಾರ್ಯದಲ್ಲಿ ಜೀವಾತ್ಮವು ಅನೇಕ ಬಾರಿ ಬುವಿಯ ಬದುಕಿಗೆ ಬರಬೇಕಾಗುತ್ತದೆ. ಅವೆಷ್ಟೋ ಜನುಮಗಳನ್ನು ದಾಟಿ ಕರ್ಮಶೇಷಗಳಿಂದ, ಋಣದ ಎಳೆಗಳಿಂದ ಬಿಡಿಸಿಕೊಂಡು ಮುಕ್ತವಾಗುತ್ತದೆ. ಹೀಗೆ ಹಲವು ಜನುಮಗಳನ್ನು ದಾಟಿ ಬರುವ ಜೀವಾತ್ಮಕ್ಕೆ ಹಿಂದಿನ ಜನ್ಮದ ಬಗೆಗೆ ತಿಳಿದಿರುವುದಿಲ್ಲ. ವಿಶೇಷವಾದ ಜ್ಞಾನ, ಪ್ರತಿಭೆ, ಸ್ವಭಾವಗಳು ಕೆಲವರಲ್ಲಿ ಹುಟ್ಟುಗುಣಗಳಂತೆ ಕಂಡುಬರಬಹುದು. ಆದರೆ ಜನುಜನುಮಾಂತರದ ನೆನಪುಗಳೆಲ್ಲವನ್ನೂ ಜೀವಾತ್ಮನು ಹೊತ್ತು ತರುವುದಿಲ್ಲ.
ಮರೆವು ಎನ್ನುವುದು ಸಹಜವಾಗಿಯೇ ಎಲ್ಲರಲ್ಲೂ ಇದ್ದೇಇದೆ. ಅದನ್ನು ರೋಗವೆಂದೋ, ಶಾಪವೆಂದೋ ಗೊಣಗುಟ್ಟುವುದು ಇದೆ. ಆದರೆ ಮರೆವು ಶಾಪವಲ್ಲ; ಮನುಜ ಬದುಕಿಗೆ ವರ. ಒಂದು ಜನುಮದಲ್ಲಿ ಪಡೆದ ಅನುಭವಗಳೆಲ್ಲವೂ ನೆನಪಾಗಿ ಉಳಿಯುವ ಹಾಗಿರುತ್ತಿದ್ದರೆ, ವ್ಯಕ್ತಿಯು ಹಳೆಯದನ್ನು ಕಳೆಯದೆ, ಹೊಸದನ್ನು ಸ್ವೀಕರಿಸಲಾಗದೆ ನೆನಪುಗಳ ಸಂತೆಯಲ್ಲಿ ಅತಂತ್ರನಾಗುತ್ತಿದ್ದ. ನೆನಪುಗಳ ಸರಕುಗಳನ್ನು ಹೊತ್ತ ಮನಸ್ಸು ಹುಚ್ಚಾಗುತ್ತಿತ್ತು. ಹೀಗಿರುತ್ತಾ ಜನುಮಜನುಮಗಳ ನೆನಹುಗಳೆಲ್ಲವೂ ಪ್ರತಿ ಹುಟ್ಟಿನಲ್ಲೂ ಜೊತೆಗಿರುತ್ತಿದ್ದರೆ ಮನುಷ್ಯನ ಮಾನಸಿಕ ಸ್ಥಿತಿ ಹೇಗಿರುತ್ತಿತ್ತು?
ಅಷ್ಟೇಅಲ್ಲ, ಸಮಯ ಸರಿದಂತೆ ತೀವ್ರವಾಗಿ ಕಾಡಿದ ನೋವು, ಅಘಾತಗಳು ಸಹನೀಯವಾಗುತ್ತವೆ. ರೋದಿಸುವ ಮನಸ್ಸು ಮರೆವಿನ ತೆಕ್ಕೆಯಲ್ಲಿ ಸಮಾಧಾನವನ್ನು ಹೊಂದುತ್ತದೆ. ಹಾಗಲ್ಲದೆ ದ್ವೇಷ, ಕೊರಗುಗಳು ವಿಸ್ಮೃಗೆ ಒಳಗಾಗದೆ ಹಾಗೆಯೇ ಉಳಿದಿರುತ್ತಿದ್ದರೆ ಮನುಷ್ಯ ಬದುಕಿನಲ್ಲಿ ಯುದ್ಧಗಳು ನಿರಂತರವಾಗುತ್ತಿದ್ದವು. ಸ್ವಯಂ ವಿಶ್ಲೇಷಣೆಗೆ ಅವಕಾಶವೇ ಇರುತ್ತಿರಲಿಲ್ಲ.
ಬೇಕೆಂದರೂ, ಬೇಡವೆಂದರೂ ಹಾಗೋ ಹೀಗೋ ಹೇಗೆಯೋ ಕಳೆದುಹೋಗುವ ಆಯುಷ್ಯದ ಕ್ಷಣಗಳಲ್ಲಿ ನಾವು ಪಡೆದ ಜೀವನಾನುಭ ಮತ್ತು ಅರಿವು ಮನುಜನ ಗಳಿಕೆ. ಅನುಭವಗಳೆಲ್ಲವೂ ಕಹಿ-ಸಿಹಿ ನೆನಪುಗಳಾಗಿ ಅಂತೆಯೇ ಉಳಿಯದೆ ಅದರಿಂದ ಪಡೆದ ಅರಿವಿನಿಂದ ಜೀವ ಮಾಗಿದರೆ ಜೀವೋನ್ನತಿಗೆ ಕಾರಣವಾಗುತ್ತದೆ. ಹಾಗಾಗಿಯೇ ಮರೆವು ಎನ್ನುವುದು ಸುಗಮ ಜೀವಿತಕ್ಕೆ ಸಹಕಾರಿಯಾಗುತ್ತದೆ. ಮರೆವು ಸೋಸಿ ಉಳಿಸಿದ ಅರಿವು ವ್ಯಕ್ತಿತ್ವವನ್ನು ಬೆಳಗುತ್ತದೆ.