

Pooja Hegde: ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಜತೆಗೆ ‘ಅಲಾ ವೈಕುಂಠಪುರಮುಲೋ’, ‘ಡಿಜೆ ದುವ್ವಾಡ ಜಗನ್ನಾಥಂ’ ಸೇರಿದಂತೆ ಒಂದಷ್ಟು ಸೂಪರ್ಹಿಟ್ ಚಿತ್ರಗಳಲ್ಲಿ ಮಿಂಚಿ, ಅಭಿಮಾನಿಗಳಿಂದ ಸೈ ಎನಿಸಿಕೊಂಡ ಕರಾವಳಿ ಬೆಡಗಿ, ಸೌತ್ ಬ್ಯೂಟಿ ಪೂಜಾ ಹೆಗ್ಡೆ ಸದ್ಯ ತಮ್ಮ ಮುಂಬರುವ ಚಿತ್ರಗಳ ಚಿತ್ರೀಕರಣದಲ್ಲಿ ಸಖತ್ ಬಿಜಿಯಾಗಿದ್ದಾರೆ.
‘ಹೌಸ್ಫುಲ್ 4’ ಸೇರಿದಂತೆ ಹಲವು ಸಿನಿಮಾಗಳ ಮುಖೇನ ಬ್ಯಾಕ್ ಟು ಬ್ಯಾಕ್ ಹಿಟ್ ಕೊಟ್ಟ ಪೂಜಾ ಅದ್ಯಾಕೋ ತೆಲುಗು ಚಿತ್ರರಂಗದಿಂದ ಬಹಳ ದೂರ ಉಳಿದಿದ್ದಾರೆ. ಇದಕ್ಕೆ ಇಂತಹದ್ದೇ ಕಾರಣವೇನಾದರೂ ಇದೆಯೇ ಅಥವಾ ಕೆಲವು ಘಟನೆಗಳಿಂದ ಬೇಸರಗೊಂಡು ತೆಲುಗು ಚಿತ್ರಗಳನ್ನು ಮಾಡುತ್ತಿಲ್ಲವೇ? ಎಂಬ ಪ್ರಶ್ನೆ, ಗೊಂದಲ ಅವರ ಅಭಿಮಾನಿಗಳಲ್ಲಿ ಇಂದಿಗೂ ಕಾಡುತ್ತಿದೆ. ಪ್ರಸ್ತುತ ಬಾಲಿವುಡ್, ತಮಿಳು ಚಿತ್ರಗಳಲ್ಲಿ ಸಖತ್ ಬಿಜಿಯಾಗಿರುವ ಪೂಜಾ, ಕಳೆದ ವರ್ಷ ಹೆಚ್ಚೆಚ್ಚು ಅವಕಾಶಗಳನ್ನು ಪಡೆಯದೆ, ಟಾಪ್ ನಟಿಯರ ಸಾಲಿನಲ್ಲಿ ತಮ್ಮ ಸ್ಥಾನವನ್ನು ಕಳೆದುಕೊಂಡಿದ್ದರು.
ತಮಿಳು ಮತ್ತು ಹಿಂದಿ ಚಿತ್ರಗಳಲ್ಲಿ ನಿರತರಾಗಿರುವ ಪೂಜಾ, ತಮಿಳು ನಟ ಸೂರ್ಯ ಅಭಿನಯದ ರೆಟ್ರೋ ಸಿನಿಮಾದಲ್ಲಿ ನಾಯಕಿಯಾಗಿ ಅಭಿನಯಿಸಿದ್ದಾರೆ. ಈ ಚಿತ್ರ ಶೀಘ್ರವೇ ತೆರೆಗೆ ಬರಲು ಸಿದ್ಧವಾಗಿದೆ. ಈ ಮಧ್ಯೆ ಸಂದರ್ಶನಗಳಲ್ಲಿ ಭಾಗಿಯಾಗಿ ಹಲವು ವಿಷಯಗಳನ್ನು ಬಹಳ ಮುಕ್ತವಾಗಿ ಹಂಚಿಕೊಳ್ಳುತ್ತಿರುವ ಸೌತ್ ಬ್ಯೂಟಿ, ಇದೀಗ ತಮಗೆ ಬಾಲಿವುಡ್ ದಿಗ್ಗಜ ನಟಿಯ ಬಯೋಪಿಕ್ ಸಿನಿಮಾದಲ್ಲಿ ನಟಿಸುವ ಆಸೆಯಿದೆ ಎಂದು ಹೇಳಿದ್ದಾರೆ.
ದಿಗ್ಗಜ ನಟಿ, ಶ್ರೀದೇವಿ ಅವರ ಜೀವನ ಆಧರಿತ ಚಿತ್ರವನ್ನು ನಿರ್ಮಿಸಲು ಬಾಲಿವುಡ್ ಸಜ್ಜಾಗಿದ್ದು, ಈ ಬಹುನಿರೀಕ್ಷಿತ ಚಿತ್ರಕ್ಕಾಗಿ ಸೂಕ್ತ ನಾಯಕಿಯ ಹುಡುಕಾಟದಲ್ಲಿದೆ. ಶ್ರೀದೇವಿ ಅವರನ್ನು ಹೋಲುವ, ಅವರಂತೆ ಬೆಳ್ಳಿ ಪರದೆಯ ಮೇಲೆ ಮೋಡಿ ಮಾಡುವ ಕಲೆ ಹೊಂದಿರುವ ಚೆಲುವೆಯನ್ನು ಹುಡುಕುತ್ತಿರುವ ಚಿತ್ರತಂಡ, ಚಿತ್ರಕ್ಕೆ ಬೇಕಾದ ಪೂರ್ವ ತಯಾರಿಗಳ ಸಿದ್ಧತೆಯಲ್ಲಿದೆ. ಈ ಕುರಿತಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಪೂಜಾ, ಅವಕಾಶ ಸಿಕ್ಕರೆ ಖಂಡಿತ ಮಾಡುವ ಹಂಬಲವಿದೆ ಎಂದಿದ್ದಾರೆ,(ಏಜೆನ್ಸೀಸ್).