

ನವದೆಹಲಿ: ತಮ್ಮ ವಿರುದ್ಧ ನಡೆಯುತ್ತಿರುವ 1992ರ ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ವಿಚಾರಣೆಯಲ್ಲಿ ತೀರ್ಪು ಏನೇ ಬಂದರೂ ಅದನ್ನು ಸ್ವೀಕರಿಸಿ ಮುನ್ನೆಡೆಯುವುದಾಗಿ ಬಿಜೆಪಿಯ ಹಿರಿಯ ನಾಯಕಿ ಉಮಾ ಭಾರತಿ ಹೇಳಿದ್ದಾರೆ.
ತಮ್ಮ ಹೇಳಿಕೆ ದಾಖಲಿಸಲು ಕೋರ್ಟ್ ನೀಡಿದ್ದ ಸೂಚನೆಯ ಬಗ್ಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿಯ ಹಿರಿಯ ನಾಯಕರಾದ ಎಲ್.ಕೆ. ಅಡ್ವಾಣಿ ಮತ್ತು ಮುರಳಿ ಮನೋಹರ್ ಜೋಷಿ ಅವರಂತೆ ನನಗೂ ಹೇಳಿಕೆ ದಾಖಲಿಸುವಂತೆ ಸೂಚಿಸಲಾಗಿತ್ತು. ಅದರಂತೆ ನಾನು ಸತ್ಯ ಏನಿದೆಯೋ ಅದನ್ನು ಕೋರ್ಟ್ಗೆ ತಿಳಿಸಿದ್ದೇನೆ. ತೀರ್ಪು ಏನೇ ಬರಲಿ ಅದನ್ನು ಸ್ವಾಗತಿಸುತ್ತೇನೆ. ನನಗೆ ಮರಣದಂಡನೆ ಶಿಕ್ಷೆಯಾದರೆ ಸಂತೋಷದಿಂದ ನೇಣುಗಂಬ ಏರುತ್ತೇನೆ ಎಂದು ಹೇಳಿದರು.
ಇದಕ್ಕೂ ಮುನ್ನ ಜುಲೈ ತಿಂಗಳ ಆರಂಭದಲ್ಲಿ ಉಮಾ ಭಾರತಿ ಅವರು ಲಖನೌನಲ್ಲಿರುವ ಸಿಬಿಐನ ವಿಶೇಷ ನ್ಯಾಯಾಲಯಕ್ಕೆ ಹಾಜರಾಗಿದ್ದರು. ಬಿಜೆಪಿಯ ಹಿರಿಯ ನಾಯಕ ಎಲ್.ಕೆ. ಅಡ್ವಾಣಿ ಅವರು ಶನಿವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ಕೋರ್ಟ್ಗೆ ಹಾಜರಾಗಿದ್ದರೆ, ಮುರಳಿ ಮನೋಹರ್ ಜೋಷಿ ಅವರು ಗುರುವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ತಮ್ಮ ಹೇಳಿಕೆಯನ್ನು ದಾಖಲಿಸಿದ್ದರು.