

ಶಿವಮೊಗ್ಗ: ಮಾರಕ ಕಾಯಿಲೆ ಡೆಂಘೆಯಿಂದ ಜೀವಹಾನಿ ಸಂಭವಿಸಬಹುದು. ಹಾಗಾಗಿ ಜ್ವರ ಬಂದರೆ ಯಾವ ಕಾರಣಕ್ಕೂ ನಿರ್ಲಕ್ಷ್ಯ ತೋರದೆ ಚಿಕಿತ್ಸೆ ಪಡೆಯಬೇಕು ಎಂದು ಡಿಎಚ್‌ಒ ಡಾ. ಕೆ.ಎಸ್.ನಟರಾಜ್ ಹೇಳಿದರು.
ಡಿಎಚ್‌ಒ ಕಚೇರಿಯಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಇಲಾಖೆ, ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಧಿಕಾರಿಗಳ ಕಚೇರಿ, ತಾಲೂಕು ಆರೋಗ್ಯಾಧಿಕಾರಿ ಮತ್ತು ಬಿಇಒ ಕಚೇರಿ ಆಶ್ರಯದಲ್ಲಿ ಪ್ರೌಢಶಾಲಾ ಶಿಕ್ಷಕರಿಗೆ ಆಯೋಜಿಸಿದ್ದ ಡೆಂಘೆ ನಿಯಂತ್ರಣ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಯಾವುದೇ ಕಾಯಿಲೆ ಬಂದರೂ ಅದು ಆರೋಗ್ಯ ಇಲಾಖೆಗೆ ಸಂಬಂಧಿಸಿದ ವಿಷಯ ಎಂಬ ಭಾವನೆ ಬೆಳೆದಿದೆ. ಆದರೆ ಡೆಂಘೆ, ಮಲೇರಿಯಾ, ಚಿಕೂನ್‌ಗುನ್ಯ ವಿರುದ್ಧ ಎಲ್ಲರೂ ಸೇರಿ ಹೋರಾಡಿದಾಗ ಮಾತ್ರ ಉತ್ತಮ ಫಲಿತಾಂಶ ಸಿಗಲು ಸಾಧ್ಯ. ಡೆಂಘೆ ನಿಯಂತ್ರಣ ಆಗಬೇಕಾದರೆ ಸೊಳ್ಳೆ ಉತ್ಪತ್ತಿ ಮಾಡುವ ಲಾರ್ವಾ ಮೊಟ್ಟೆಗಳನ್ನು ನಿರ್ಮೂಲನೆ ಮಾಡಬೇಕು. ಇದರಲ್ಲಿ ಶಿಕ್ಷಕರ ಪಾತ ಬಹುಮುಖ್ಯ ಎಂದರು.
ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ. ಗುಡುದಪ್ಪ ಕಸಬಿ ಮಾತನಾಡಿ, ಸೊಳ್ಳೆಗಳು ಕೇವಲ ಚರಂಡಿಯಿಂದ ಬರುವುದಿಲ್ಲ. ಮನೆ ಒಳಗೆ ನಿಂತ ಸ್ವಚ್ಛ ನೀರಿನಲ್ಲೂ ಉತ್ಪಾದನೆ ಆಗುತ್ತದೆ. ಪಾಟ್, ನೀರಿನಲ್ಲಿ ಬೆಳೆಯುವ ಗಿಡಗಳಲ್ಲಿ ಕೂಡ ಸೊಳ್ಳೆ ಉತ್ಪತ್ತಿಯಾಗುತ್ತವೆ. ಮಕ್ಕಳು ಶಾಲೆಯಲ್ಲಿ ಹೆಚ್ಚು ಕಾಲ ಕಳೆಯುವ ಕಾರಣ ಶಾಲೆ ಸುತ್ತಮುತ್ತ ಮತ್ತು ನೀರಿನ ಮೂಲಗಳನ್ನು ಸ್ವಚ್ಛ ಮಾಡಬೇಕು ಮತ್ತು ಮಕ್ಕಳಲ್ಲಿ ಅರಿವು ಮೂಡಿಸಿ ಸುರಕ್ಷತಾ ಕ್ರಮವಹಿಸಬೇಕು ಎಂದು ಹೇಳಿದರು.
ಟಿಎಚ್‌ಒ ಡಾ. ಜಿ.ಬಿ.ಚಂದ್ರಶೇಖರ್, ಕ್ಷೇತ್ರ ಸಮನ್ವಯ ಅಧಿಕಾರಿ ಎಚ್.ಕೆ.ಹಸೇನ್ ಸಾಬ್, ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿ ಡಾ. ಎಸ್.ಕೆ.ಕಿರಣ್ ಇತರರಿದ್ದರು.